ಗುವಾಹಟಿ: ಅಂತರರಾಜ್ಯ ಗಡಿಯಲ್ಲಿ ಶಾಂತಿ ಕಾಪಾಡಲು ಎರಡೂ ರಾಜ್ಯಗಳು ಒಪ್ಪಿಗೆ ಸೂಚಿಸಿದ ಹಿನ್ನೆಲೆ ಅಸ್ಸಾಂ ಸರ್ಕಾರದ ನಿಯೋಗ ಶುಕ್ರವಾರ ಐಜ್ವಾಲ್‌ನಲ್ಲಿ ಮಿಜೋರಾಂ ಪ್ರತಿನಿಧಿಗಳನ್ನು ಭೇಟಿ ಮಾಡಿದೆ. ಈ ವೇಳೆ ಉಭಯ ರಾಜ್ಯಗಳು ಜಂಟಿ ಸಾಂಸ್ಕೃತಿಕ ಮತ್ತು ಕ್ರೀಡಾ ಉತ್ಸವಗಳನ್ನು ನಡೆಸಲು ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿವೆ.
ಎರಡು ಈಶಾನ್ಯ ರಾಜ್ಯಗಳು 20 ತಿಂಗಳ ಬಳಿಕ ಶುಕ್ರವಾರ ಇಲ್ಲಿ ಗಡಿ ಮಾತುಕತೆ ನಡೆಸಿವೆ. ಕೊನೆಯ ಸಭೆ 2022ರ ನವೆಂಬರ್ನಲ್ಲಿ ಗುವಾಹಟಿಯಲ್ಲಿ ನಡೆದಿತ್ತು. ಇದೀಗ ಗಡಿ ಪ್ರದೇಶಾಭಿವೃದ್ಧಿ ಸಚಿವ ಅತುಲ್ ಬೋರಾ ನೇತೃತ್ವದ ಅಸ್ಸಾಂ ನಿಯೋಗ ಶುಕ್ರವಾರ ಐಜ್ವಾಲ್‌ನಲ್ಲಿ ಮಿಜೋರಾಂ ಗೃಹ ಸಚಿವ ಪಿಯು ಕೆ ಸಪ್ದಂಗ ಮತ್ತು ಭೂ ಮತ್ತು ಕಂದಾಯ ಸಚಿವ ಪಿಯು ಬಿ ಲಾಲ್ಚಂಜೋವಾ ಅವರನ್ನು ಭೇಟಿಯಾಗಿ ಗಡಿ ಸಮಸ್ಯೆ ಕುರಿತು ಚರ್ಚಿಸಿದೆ. ಅಸ್ಸಾಂ ಗಡಿ ಭದ್ರತೆ ಮತ್ತು ಅಭಿವೃದ್ಧಿ ಸಚಿವ ಅತುಲ್ ಬೋರಾ ಮತ್ತು ಮಿಜೋರಾಂ ಗೃಹ ಸಚಿವ ಪಿಯು ಕೆ ಸಪ್ದಂಗ ಮತ್ತು ಭೂ ಮತ್ತು ಕಂದಾಯ ಸಚಿವ ಪಿಯು ಬಿ ಲಾಲ್‌ಜೋಭಾ ನಡುವೆ ನಡೆದ ಸಭೆ ಬಳಿಕ ಉಭಯ ರಾಜ್ಯಗಳು ಜಂಟಿ ಹೇಳಿಕೆಗಳಿಗೆ ಸಹಿ ಹಾಕಿದವು.
ಗಡಿವಿವಾದಕ್ಕೆ ಅಂತ್ಯ ಹಾಡಲು ಒಪ್ಪಿಗೆ: ಅಸ್ಸಾಂ ಮತ್ತು ಮಿಜೋರಾಂ ಮುಖ್ಯಮಂತ್ರಿಗಳು ಎರಡು ರಾಜ್ಯಗಳ ನಡುವಿನ ಗಡಿ ವಿವಾದವನ್ನು ಬಗೆಹರಿಸಲು ಶುಕ್ರವಾರ ಒಪ್ಪಿಕೊಂಡಿದ್ದಾರೆ. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಸ್ಸಾಂ ಗಡಿ ರಕ್ಷಣೆ ಮತ್ತು ಅಭಿವೃದ್ಧಿ ಸಚಿವ ಅತುಲ್ ಬೋರಾ, "ನೆರೆಯ ರಾಜ್ಯದ ನಿಯೋಗ ನೇತೃತ್ವ ವಹಿಸಿದ್ದು, ಸಕಾರಾತ್ಮಕ ಮತ್ತು ಅನುಕೂಲಕರವಾದಂತಹ ಚರ್ಚೆಗಳು ನಡೆದಿವೆ. ಗಡಿ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಎರಡೂ ರಾಜ್ಯಗಳು ಪರಿಹಾರ ಕಂಡುಕೊಳ್ಳಲು ಬದ್ಧವಾಗಿವೆ" ಎಂದು ಹೇಳಿದರು.
"ನೆರೆಯ ದೇಶಗಳಿಂದ ಅಡಕೆ ಕಳ್ಳಸಾಗಣೆ ವಿರುದ್ಧ ಶೂನ್ಯ ಸಹಿಷ್ಣು ನೀತಿಯನ್ನು ಮುಂದುವರಿಸಲು ಎರಡೂ ಕಡೆಯವರು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ" ಎಂದು ತಿಳಿಸಿದರು. ರಾಜ್ಯ ನಿಯೋಗದ ನೇತೃತ್ವ ವಹಿಸಿದ್ದ ಮಿಜೋರಾಂ ಗೃಹ ಸಚಿವ ಕೆ.ಸಪ್ದಂಗ ಅವರು ಗಡಿ ವಿವಾದ ಬಗೆಹರಿಯುವ ಆಶಾವಾದ ವ್ಯಕ್ತಪಡಿಸಿದರು.
ಜಂಟಿ ಸಾಂಸ್ಕೃತಿಕ ಮತ್ತು ಕ್ರೀಡಾ ಉತ್ಸವಗಳ ಆಯೋಜನೆಗೆ ನಿರ್ಧಾರ: "ಶುಕ್ರವಾರದ ಸಭೆಯಲ್ಲಿ, ಎರಡೂ ರಾಜ್ಯಗಳ ಗಡಿ ಜಿಲ್ಲೆಗಳ ಸಂಬಂಧಪಟ್ಟ ಆಡಳಿತ ಅಧಿಕಾರಿಗಳು ಉಭಯ ರಾಜ್ಯಗಳ ಸಂಬಂಧಗಳನ್ನು ಸುಧಾರಿಸಲು ಆಗಾಗ್ಗೆ ಜಂಟಿ ಸಾಂಸ್ಕೃತಿಕ ಮತ್ತು ಕ್ರೀಡಾ ಉತ್ಸವಗಳನ್ನು ಆಯೋಜಿಸಬೇಕು ಎಂದು ನಿರ್ಧರಿಸಲಾಯಿತು" ಎಂದು ಬೋರಾ ಹೇಳಿದರು.
"ವಿವಾದಿತ ಗಡಿ ಸಮಸ್ಯೆಗಳು ಮತ್ತು ಇತರ ಸಂಬಂಧಿತ ವಿಷಯಗಳ ಕುರಿತು ಬಾಕಿ ಉಳಿದಿರುವ ಎಲ್ಲ ಚರ್ಚೆಗಳು ಮತ್ತು ನಿರ್ಧಾರಗಳನ್ನು ಎರಡೂ ರಾಜ್ಯ ಸರ್ಕಾರಗಳ ಅಧಿಕಾರಿಗಳು ತೆಗೆದುಕೊಳ್ಳುತ್ತಾರೆ. ಅಸ್ಸಾಂ - ಮಿಜೋರಾಂ ಗಡಿ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಲು ರಾಜ್ಯಗಳ ಎರಡೂ ಕಡೆ ವಾಸಿಸುವ ಜನರ ಸಹಕಾರ ಅತ್ಯಗತ್ಯ ಎಂದು ಎರಡೂ ರಾಜ್ಯಗಳು ಜಂಟಿಯಾಗಿ ಒಪ್ಪಿಕೊಂಡಿವೆ. ಎರಡೂ ರಾಜ್ಯಗಳು ಸಾರ್ವಜನಿಕರ ಮತ್ತು ಎಲ್ಲ ಮಧ್ಯಸ್ಥಗಾರರು ಗಡಿ ಸಮಸ್ಯೆಯ ಯಾವುದೇ ವಿವಾದಗಳ ಬಗ್ಗೆ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳದೇ ಸೂಕ್ತ ಅಧಿಕಾರಿಗಳಿಗೆ ಕೊಂಡೊಯ್ಯಬೇಕು ಎಂದು ನಿರ್ಧರಿಸಲಾಯಿತು." ಎಂದು ಬೋರಾ ತಿಳಿಸಿದರು.
ಜೊತೆಗೆ ಸಭೆಯಲ್ಲಿ 2025ರ ಮಾರ್ಚ್ 31ಕ್ಕಿಂತ ಮೊದಲು ಗುವಾಹಟಿಯಲ್ಲಿ ಮುಂದಿನ ಸುತ್ತಿನ ಮಂತ್ರಿ ಮಟ್ಟದ ಮಾತುಕತೆ ನಡೆಸಲು ಉಭಯ ರಾಜ್ಯಗಳು ಒಪ್ಪಿಕೊಂಡಿವೆ.
ಇದು 2021ರ ಆಗಸ್ಟ್ನಿಂದ ಉಭಯ ರಾಜ್ಯಗಳ ನಡುವೆ ನಡೆಯುತ್ತಿರುವ ನಾಲ್ಕನೇ ಮಂತ್ರಿ ಮಟ್ಟದ ಮಾತುಕತೆಯಾಗಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಜೋರಾಮ್ ಪೀಪಲ್ಸ್ ಮೂವ್‌ಮೆಂಟ್ (ZPM) ಅಧಿಕಾರಕ್ಕೆ ಬಂದ ನಂತರ ನಡೆಯುತ್ತಿರುವ ಮೊದಲ ಸಭೆಯಾಗಿದೆ.
ಮಿಜೋರಾಂನ ಮೂರು ಜಿಲ್ಲೆಗಳಾದ ಐಜ್ವಾಲ್, ಕೊಲಾಸಿಬ್ ಮತ್ತು ಮಮಿತ್, ಅಸ್ಸಾಂನ ಕ್ಯಾಚಾರ್, ಕರ್ಮ್‌ಗಂಜ್ ಮತ್ತು ಹೈಲಂಕಂಡಿ ಜಿಲ್ಲೆಗಳೊಂದಿಗೆ 164.6-ಕಿಮೀ ಗಡಿಯನ್ನು ಹಂಚಿಕೊಳ್ಳುತ್ತವೆ. ಮುಖ್ಯವಾಗಿ 1875 ಮತ್ತು 1933 ರ ಎರಡು ವಸಾಹತುಶಾಹಿ ಗಡಿರೇಖೆಗಳ ನಂತರ ಈ ವಿವಾದ ಹುಟ್ಟಿಕೊಂಡಿತ್ತು.
ಇದನ್ನೂ ಓದಿ: ಗಡಿ ವಿವಾದ: ಪ್ರಧಾನಿ ಮೋದಿ ಹೇಳಿಕೆಗೆ ಚೀನಾದ ವಕ್ತಾರ ಮಾವೋ ನಿಂಗ್ ಪ್ರತಿಕ್ರಿಯೆ - Mao Ning