ಅಹಮದಾಬಾದ್(ಗುಜರಾತ್): 2024ರ ಲೋಕಸಭೆ ಚುನಾವಣೆಯ ಫಲಿತಾಂಶ ಹಲವು ರಾಜಕೀಯ ಪರಿಣಾಮಗಳಿಗೆ ಕಾರಣವಾಗಿದೆ. ಸತತ ಕಳೆದೆರಡು ಅವಧಿಗಳಿಗೂ ದೊಡ್ಡ ಬಹುಮತದೊಂದಿಗೆ ಆಡಳಿತದ ಗುದ್ದುಗೆಯಲ್ಲಿದ್ದ ಬಿಜೆಪಿಗೆ ಈ ಬಾರಿ ಸ್ವಂತ ಬಲದ 'ಅಧಿಕಾರ'ವನ್ನು ಮತದಾರ ನೀಡಿಲ್ಲ. ಮತ್ತೊಂದೆಡೆ, ಎರಡೂ ಚುನಾವಣೆಗಳಲ್ಲಿ ಕನಿಷ್ಠ ಪ್ರತಿಪಕ್ಷದ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದ ಕಾಂಗ್ರೆಸ್ ಈ ಬಾರಿ ಗಮನಾರ್ಹವಾಗಿ 100ರ ಗಡಿ ತಲುಪಿತು. ಇದರ ಜೊತೆಗೆ ಬಿಜೆಪಿಯ ದಿಗ್ಗಜ ನಾಯಕರಾದ ನರೇಂದ್ರ ಮೋದಿ, ಅಮಿತ್ ಶಾ ಅವರ ತವರು ರಾಜ್ಯ ಗುಜರಾತ್‌ನಲ್ಲೂ ಕಾಂಗ್ರೆಸ್ಗೆ ದಶಕದ ಬಳಿಕ ಲೋಕಸಭಾ ಸ್ಥಾನದ 'ಬರ' ನೀಗಿದೆ. ಇದರ ಹಿಂದಿನ ಶಕ್ತಿ ಗೇನಿಬೆನ್ ಠಾಕೋರ್ ಎಂಬ ಮಹಿಳೆ ಎಂದರೆ ನಿಮಗೆ ಅಚ್ಚರಿಯಾಗಬಹುದು.
ಗುಜರಾತ್‌ನಲ್ಲಿ ಬಿಜೆಪಿ ಸುದೀರ್ಘ 26 ವರ್ಷಗಳಿಂದಲೂ ಅಧಿಕಾರದಲ್ಲಿದೆ. 2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲ 26 ಲೋಕಸಭೆ ಕ್ಷೇತ್ರಗಳಲ್ಲೂ ಗೆದ್ದು ಬೀಗಿತ್ತು. ಆದರೆ, 2024ರ ಚುನಾವಣೆಯಲ್ಲಿ ಪಕ್ಷ 25 ಸ್ಥಾನಗಳಿಗೆ ಸೀಮಿತವಾಗಿದೆ. ಒಂದು ಸ್ಥಾನವನ್ನು ಕಳೆದುಕೊಂಡಿದೆ. ಇದು ಕೇವಲ ಒಂದು ಸ್ಥಾನವಾದರೂ, ರಾಜಕೀಯವಾಗಿ ಬಿಜೆಪಿಗೆ ದೊಡ್ಡ ಸಂದೇಶವೆಂದು ವಿಶ್ಲೇಷಿಸಲಾಗುತ್ತಿದೆ.
ಗೇನಿಬೆನ್ ಠಾಕೋರ್ ಕಮಾಲ್: ರಾಜ್ಯದ 26 ಕ್ಷೇತ್ರಗಳ ಪೈಕಿ ಬನಾಸ್ ಕಾಂತ್ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಗೆ ಸೋಲಾಗಿದೆ. ಈ ಕ್ಷೇತ್ರದಲ್ಲಿ 2013ರ ಉಪಚುನಾವಣೆ ಸೇರಿ ಕಳೆದ ಮೂರು ಅವಧಿಯಲ್ಲೂ ಬಿಜೆಪಿ ಸತತವಾಗಿ ಗೆದ್ದಿತ್ತು. ಆದರೆ, ಈ ಸಲ ಕಾಂಗ್ರೆಸ್ನ ಗೇನಿಬೆನ್ ಠಾಕೋರ್ ವಿರುದ್ಧ ಬಿಜೆಪಿಯ ರೇಖಾ ಚೌಧರಿ ಸೋಲು ಅನುಭವಿಸಿದ್ದಾರೆ.
ರೇಖಾ ಚೌಧರಿ ಅವರೊಂದಿಗಿನ ನೇರ ಹಣಾಹಣಿಯಲ್ಲಿ ಗೇನಿಬೆನ್ 30,406 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಕುತೂಲಹಕಾರಿ ಹಾಗೂ ತೀವ್ರ ಪೈಪೋಟಿಯಲ್ಲಿ ಬಿಜೆಪಿಯ ರೇಖಾ 6,41,477 ಪಡೆದರೆ, ಗೇನಿಬೆನ್ 6,71,883 ಮತ ಸೆಳೆದು ಜಯಶಾಲಿ ಆಗಿದ್ದಾರೆ.
'ಬನಾಸ್ ನಿ ಬೆನ್, ಗೇನಿಬೆನ್: ಗೇನಿಬೆನ್ ಠಾಕೋರ್ ವಿವ್ ವಿಧಾನಸಭೆ ಕ್ಷೇತ್ರದ ಹಾಲಿ ಶಾಸಕಿ. ಈ ಬಾರಿ ಕಾಂಗ್ರೆಸ್ ಲೋಕಸಭೆ ಚುನಾವಣಾ ಅಖಾಡಕ್ಕೆ ಅವರನ್ನು ಇಳಿಸಿತ್ತು. ಇವರ ಪ್ರತಿಸ್ಪರ್ಧಿ ರೇಖಾ ಚೌಧರಿ ಇಂಜಿನಿಯರಿಂಗ್ ಕಾಲೇಜು ಪ್ರೊಫೆಸರ್. ಚುನಾವಣಾ ಪ್ರಚಾರ ಕೈಗೊಳ್ಳಲು ಗೇನಿಬೆನ್ ಅವರಿಗೆ ಆರ್ಥಿಕ ಬಲ ಇರಲಿಲ್ಲ. ಹೀಗಾಗಿ ಠಾಕೋರ್ ಜನರಿಂದ ದೇಣಿಗೆ ಸಂಗ್ರಹಿಸಿ ತಮ್ಮ ಪ್ರಚಾರ ಕಾರ್ಯ ಕೈಗೊಂಡಿದ್ದರು. ಜನರೂ ಕೂಡ ಮುಂದೆ ಬಂದು ಗುಜರಾತ್ ಭಾಷೆಯಲ್ಲಿ 'ಬನಾಸ್ ನಿ ಬೆನ್, ಗೇನಿಬೆನ್' (ಬನಾಸ್ ಸಹೋದರಿ, ಗೇನಿಬೆನ್) ಎಂದು ಹೇಳಿ ಪ್ರಚಾರಕ್ಕೆ ಕೈ ಜೋಡಿಸಿದ್ದರು.
ತಮ್ಮ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿರುವ ಗೇನಿಬೆನ್, ''ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬನಾಸ್ಕಾಂತ್ ಮತದಾರರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ. ಬನಾಸ್ಕಾಂತ್ನ ಜನರು ನನಗೆ ಮತ ಮತ್ತು ನೋಟು ಎರಡನ್ನೂ ನೀಡಿದ್ದಾರೆ'' ಎಂದು ಸಂತಸ ವ್ಯಕ್ತಪಡಿಸಿದರು.
''ನನ್ನ ಪರವಾಗಿ ಜನತೆಯೇ 'ಬನಾಸ್ ನಿ ಬೆನ್, ಗೇನಿಬೆನ್' ಎಂಬ ಘೋಷಣೆಯನ್ನು ರೂಪಿಸಿದ್ದಕ್ಕಾಗಿ ನಾನು ಅವರಿಗೆ ಮತ್ತೊಮ್ಮೆ ಧನ್ಯವಾದ ಹೇಳುತ್ತೇನೆ. ನಾನು ಬದುಕಿರುವವರೆಗೂ ಅವರಿಗೆ ಸೇವೆ ಸಲ್ಲಿಸುವುದಾಗಿ ಭರವಸೆ ನೀಡುತ್ತೇನೆ. ಇದು ಜನರು, ಮತದಾರರು ಮತ್ತು ಪ್ರಜಾಪ್ರಭುತ್ವದ ಗೆಲುವು'' ಎಂದು ಅವರು ಹೇಳಿದ್ದಾರೆ.
ವಿವಾದ ಸೃಷ್ಟಿಸಿದ್ದ ಹೇಳಿಕೆಗಳು: 2012ರ ವಿಧಾನಸಭಾ ಚುನಾವಣೆಯಲ್ಲಿ ವಾವ್ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಪರ್ಧಿಸಿ ಗೇನಿಬೆನ್ ಸೋತಿದ್ದರು. 2017 ಮತ್ತು 2022ರ ಚುನಾವಣೆಯಲ್ಲಿ ಎರಡೂ ಬಾರಿ ಗೆದ್ದು ಶಾಸಕಿಯಾಗಿದ್ದರು. ಇದರ ನಡುವೆ ಗೇನಿಬೆನ್ ಈ ಹಿಂದೆ ತಮ್ಮ ಹೇಳಿಕೆಯಿಂದ ವಿವಾದ ಸೃಷ್ಟಿಸಿದ್ದರು.
2018ರಲ್ಲಿ 14 ತಿಂಗಳ ಮಗುವಿನ ಮೇಲಿನ ಅತ್ಯಾಚಾರ ಪ್ರಕರಣದ ಸಂದರ್ಭದಲ್ಲಿ ಗೇನಿಬೆನ್, ''ಅತ್ಯಾಚಾರಿಗಳನ್ನು ಪೊಲೀಸರಿಗೆ ಒಪ್ಪಿಸುವ ಬದಲು ಜೀವಂತವಾಗಿ ಸುಟ್ಟು ಹಾಕಬೇಕು'' ಎಂದು ಹೇಳಿದ್ದರು. ಒಮ್ಮೆ 12 ಗ್ರಾಮಗಳಲ್ಲಿ ತಮ್ಮ ಸಮುದಾಯದವರು ಅಂತರ್ಜಾತಿ ವಿವಾಹ ಮತ್ತು ಅವಿವಾಹಿತ ಯುವತಿಯರು ಮೊಬೈಲ್ ಫೋನ್ ಕೊಂಡೊಯ್ಯುವುದನ್ನು ನಿಷೇಧಿಸಿ ಹೊರಡಿಸಿದ ಆದೇಶವನ್ನು ಶ್ಲಾಘಿಸಿ ಸುದ್ದಿಯಾಗಿದ್ದರು.
ಇದನ್ನೂ ಓದಿ: ಶ್ರೀರಾಮನ ನೆಲೆವೀಡು ಅಯೋಧ್ಯೆಯಲ್ಲಿ ಬಿಜೆಪಿ ಸೋತಿದ್ದೇಕೆ? ಇಲ್ಲಿವೆ ಕಾರಣಗಳು!