ನಾರಾಯಣಪೇಟೆ (ತೆಲಂಗಾಣ): ಸಂಬಂಧಿಗಳ ನಡುವೆ ನಡೆದ ಭೂವಿವಾದ ಯುವಕನ ಸಾವಿನಲ್ಲಿ ಅಂತ್ಯ ಕಂಡಿದೆ. ದೊಣ್ಣೆಗಳಿಂದ ಸಾಮೂಹಿಕವಾಗಿ ಯುವಕನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಜಿಲ್ಲೆಯ ಊಟ್ಕೂರು ತಾಲೂಕಿನ ಚಿನ್ನಾಪುರದಲ್ಲಿ ನಡೆದ ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಸ್ಥಳೀಯರ ಪ್ರಕಾರ, ಚಿನ್ನಾಪುರದ ಎರ್ರಗಂಡ್ಲ ಲಕ್ಷ್ಮಪ್ಪ ಅವರಿಗೆ ಇಬ್ಬರು ಪತ್ನಿಯರು. ಮೊದಲ ಪತ್ನಿ ಬಾಲಮ್ಮನ ಮಗ ಎರ್ರಗಂಡ್ಲ ಸಂಜಪ್ಪ. ಎರಡನೆಯ ಹೆಂಡತಿ ತಿಮ್ಮಮ್ಮನವರ ಮಕ್ಕಳು ಪೆದ್ದ ಸೂರಪ್ಪ ಮತ್ತು ಚಿನ್ನ ಸೂರಪ್ಪ. ಲಕ್ಷ್ಮಪ್ಪ ತನ್ನ ಒಂಬತ್ತು ಎಕರೆ ಜಮೀನನ್ನು ತನ್ನ ಮೂವರು ಗಂಡುಮಕ್ಕಳಿಗೆ ಸಮನಾಗಿ ಹಂಚಿದರು. ಹಂಚಿಕೆಯಲ್ಲಿ ತಮಗೆ ಅನ್ಯಾಯವಾಗಿದೆ ಎಂದು 2022ರಲ್ಲಿ ಹಿರಿಯ ಪತ್ನಿಯ ಪುತ್ರ ಸಂಜಪ್ಪನ ಕುಟುಂಬಸ್ಥರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಪ್ರಕರಣ ನಡೆಯುತ್ತಿದ್ದರೂ ಎರಡನೇ ಪತ್ನಿಯ ಪುತ್ರರು ಗದ್ದೆಯಲ್ಲಿ ಸಾಗುವಳಿ ಮಾಡುತ್ತಿರುವುದರಿಂದ ಸಂಜಪ್ಪ ಕುಟುಂಬಸ್ಥರು ಆಕ್ಷೇಪ ಎತ್ತುತ್ತಿದ್ದರು.
ಪೆದ್ದ ಸೂರಪ್ಪ, ಅವರ ಪುತ್ರ ಸಂಜಪ್ಪ (28), ಚಿನ್ನ ಸೂರಪ್ಪ ಹಾಗೂ ಅವರ ಪತ್ನಿ ಕವಿತಾ ಗುರುವಾರ ಮಧ್ಯಾಹ್ನ ಗದ್ದೆ ಉಳುಮೆ ಮಾಡಲು ತೆರಳಿದ್ದರು. ವಿಷಯ ತಿಳಿದ ಸಂಜಪ್ಪನ ಮನೆಯವರು ಜಮೀನಿಗೆ ತೆರಳಿ ಅವರೊಂದಿಗೆ ಜಗಳ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ದೊಡ್ಡ ಸೂರಪ್ಪ ಅವರ ಮಗ ಸಂಜಪ್ಪನ ಮೇಲೆ ಎಲ್ಲರೂ ನೋಡುವಷ್ಟರಲ್ಲಿ ದೊಣ್ಣೆ, ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡು ಪ್ರಜ್ಞೆ ತಪ್ಪಿದ ಸಂತ್ರಸ್ತನನ್ನು ಮೊದಲು ನಾರಾಯಣಪೇಟೆಗೆ ಕರೆದೊಯ್ಯಲಾಗಿತ್ತು. ಬಳಿಕ ಮಹಬೂಬ್‌ನಗರ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಅವರು ಗುರುವಾರ ರಾತ್ರಿ ಸಾವನ್ನಪ್ಪಿದರು.
ಸಂಜಪ್ಪ ಅವರು ಪತ್ನಿ ಅನಿತಾ ಮತ್ತು ಮೂರು ವರ್ಷದೊಳಗಿನ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಶುಕ್ರವಾರ ಬೆಳಗ್ಗೆ ಸಂಜಪ್ಪನನ್ನು ದೊಣ್ಣೆಯಿಂದ ಥಳಿಸಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಗ್ರಾಮದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಆರೋಪಿಗಳಾದ ಗುಟ್ಟಪ್ಪ, ಆಶಪ್ಪ, ಚಿನ್ನ ವೆಂಕಟಪ್ಪ, ಆಟೋ ಸಂಜೀವ್, ಶ್ರೀನು, ಕಿಷ್ಟಪ್ಪ, ನಟ್ಟಲಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪೈಕಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಎಸ್‌ಐ ಬಿ.ಶ್ರೀನಿವಾಸ್ ತಿಳಿಸಿದ್ದಾರೆ.
ಊಟ್ಕೂರ್ ಎಸ್‌ಐ ಅಮಾನತು: ದಾಳಿಯ ಬಗ್ಗೆ ಡಯಲ್ 100ಗೆ ಕರೆ ಮಾಡಿದರೆ ಪೊಲೀಸರು ಎರಡು ಗಂಟೆಗಳ ನಂತರ ಬಂದರು ಎಂದು ಎರ್ರಗಂಡ್ಲ ಸಂಜಪ್ಪ, ಚಿನ್ನಮ್ಮ, ಕವಿತಾ ಆರೋಪಿಸಿದ್ದಾರೆ. ಘಟನೆ ನಡೆದ ಸ್ಥಳವು ಠಾಣಾದಿಂದ 15 ಕಿಲೋಮೀಟರ್‌ಗಿಂತ ಕಡಿಮೆ ದೂರದಲ್ಲಿದೆ. ಊಟ್ಕೂರು ಘಟನೆ ಬಗ್ಗೆ ಸಿಎಂ ರೇವಂತ್ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಅಲ್ಲಿನ ಪೊಲೀಸ್ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಕಂಡು ಬಂದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಆ ಮೂಲಕ ಸಂಜಪ್ಪ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತಾಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾದ ಐಜಿ ಸುಧೀರ್ ಬಾಬು ಅವರ ಆದೇಶದ ಮೇರೆಗೆ ಊಟ್ಕೂರು ಎಸ್‌ಐ ಬಿ.ಶ್ರೀನಿವಾಸ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಎಸ್ಪಿ ಯೋಗೀಶ್ ಗೌತಮ್ ಶುಕ್ರವಾರ ರಾತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಹಾಯಕ್ಕೆ ದೌಡಾಯಿಸದ ಗ್ರಾಮಸ್ಥರು: ಘಟನಾ ಸ್ಥಳದಿಂದ ಆಟೋ, ಟ್ರ್ಯಾಕ್ಟರ್ಗಳ ಮೂಲಕ ಪೆದ್ದ ಸೂರಪ್ಪ ಅವರ ಮಗ ಸಂಜಪ್ಪ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಗ್ರಾಮದವರು ಯಾರೂ ಮುಂದಾಗಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಊಟ್ಕೂರಿನ ಪೊಲೀಸ್ ಠಾಣೆಗೆ ಹೋದರೂ ಪೊಲೀಸರು ಸ್ಪಂದಿಸಿಲ್ಲ. ಮತ್ತೊಂದೆಡೆ 108 ಆಂಬ್ಯುಲೆನ್ಸ್ ಊಟ್ಕೂರು ತಲುಪಿದರೂ ರಸ್ತೆಯಲ್ಲಿ ಕೆಸರು ತುಂಬಿದ್ದರಿಂದ ಮುಂದೆ ಸಾಗಲು ಸಾಧ್ಯವಾಗಲಿಲ್ಲ. ಮಾಜಿ ಜನಪ್ರತಿನಿಧಿಯೊಬ್ಬರು ತಮ್ಮ ಟ್ರ್ಯಾಕ್ಟರ್ ಕಳಿಸಿ ಸಂಜಪ್ಪನನ್ನು ಊರಿಗೆ ಕರೆತಂದು 108ರಲ್ಲಿ ನಾರಾಯಣಪೇಟೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆ ನಂತರವೇ ಪೊಲೀಸರು ಬಂದರು ಎನ್ನಲಾಗಿದೆ. ಪೊಲೀಸರು ತಕ್ಷಣ ಸ್ಪಂದಿಸಿದ್ದರೆ ಸಂಜಪ್ಪ ಬದುಕಿರುತ್ತಿದ್ದ ಎಂಬ ವಾದವಿದೆ.