ಅಮರಾವತಿ, ಮಹಾರಾಷ್ಟ್ರ: ಮಹಾರಾಷ್ಟ್ರ ವಿಧಾನಸಭೆಗೆ ಇದೇ 20 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಹೀಗಾಗಿ ಎಲ್ಲ ಪಕ್ಷಗಳಿಂದ ಭರ್ಜರಿ ಪ್ರಚಾರ ನಡೆಯುತ್ತಿದೆ. ಈ ಬಾರಿ ಎರಡು ಮೈತ್ರಿಕೂಟಗಳ ನಡುವೆ ಭಾರಿ ಹೋರಾಟ ನಡೆಯುತ್ತಿದೆ. ಅಷ್ಟೇ ಅಲ್ಲ ಚುನಾವಣಾಧಿಕಾರಿಗಳು ಎಲ್ಲ ನಾಯಕರ ಬ್ಯಾಗ್ಗಳು, ವಾಹನಗಳನ್ನು ತೀವ್ರ ತಪಾಸಣೆಗೆ ಒಳಪಡಿಸುತ್ತಿದ್ದಾರೆ. ಅದರಂತೆ ಇಂದು INDIA ಒಕ್ಕೂಟದ ಪ್ರಮುಖ ನೇತಾರ, ಕೇಂದ್ರದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬ್ಯಾಗ್ ತಪಾಸಣೆಗೆ ಒಳಪಡಿಸಿದ್ದಾರೆ.
ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬ್ಯಾಗ್ ಅನ್ನು ಚುನಾವಣಾ ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ.
ಧಮಂಗಾಂವ್ ರೈಲ್ವೆಯಲ್ಲಿ ರಾಹುಲ್ ಗಾಂಧಿ ಅವರ ಹೆಲಿಕ್ಯಾಪ್ಟರ್ ಲ್ಯಾಂಡ್ ಆಗುತ್ತಿದ್ದಂತೆ ಬ್ಯಾಗ್ ತಪಾಸಣೆಗೆ ಒಳಪಡಿಸಲಾಯಿತು, ಆಯೋಗದ ಸೂಚನೆಯಂತೆ ಈ ತಪಾಸಣೆ ನಡೆಸಲಾಗಿದೆ. ಚುನಾವಣಾ ನಿಯಮಗಳ ಅನ್ವಯ ಈ ತಪಾಸಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಹುಲ್ ಬ್ಯಾಗ್ ತಪಾಸಣೆ ಕ್ರಮ ಪ್ರಶ್ನಿಸಿದ ಕಾಂಗ್ರೆಸ್ ಶಾಸಕ: ಕಾಂಗ್ರೆಸ್ ಶಾಸಕ ಯಶೋಮತಿ ಠಾಕೂರ್ ಈ ಕುರಿತು ಮಾತನಾಡಿದ್ದು, ಚುನಾವಣಾ ಅಧಿಕಾರಿ ಕ್ರಮದ ವಿರುದ್ಧ ಕಿಡಿಕಾರಿದ್ದಾರೆ. ಚುನಾವಣಾ ಅಧಿಕಾರಿಗಳು, ಪ್ರಧಾನಿ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಅಥವಾ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ಬ್ಯಾಗ್ಗಳನ್ನು ಏಕೆ ತಪಾಸಣೆಗೆ ಒಳಪಡಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಉದ್ದವ್ ಠಾಕ್ರೆ ತಪಾಸಣೆ ಬಳಿಕ ಭಾರಿ ಸದ್ದು ಮಾಡುತ್ತಿರುವ ವಿಚಾರ: ಯುವತ್ಮಾಲ್‌ನಲ್ಲಿ ಶಿವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಅವರನ್ನು ತಪಾಸಣೆಗೆ ಒಳಪಡಿಸಿದ ನಂತರ, ಈ ವಿಚಾರ ಭಾರಿ ಸದ್ದು ಮಾಡುತ್ತಿದೆ. ಮಾದರಿ ನೀತಿ ಸಂಹಿತೆಯಂತೆ ಚುನಾವಣಾ ಅಧಿಕಾರಿಗಳ ಈ ತಪಾಸಣಾ ಕಾರ್ಯ ಮಾಡುತ್ತಿದ್ದಾರೆ.
ಅಮಿತ್ ಶಾ ಹೆಲಿಕಾಪ್ಟರ್ ಕೂಡಾ ತಪಾಸಣೆ, ವಿಡಿಯೋ ವೈರಲ್: ಠಾಕ್ರೆ ತಪಾಸಣೆ ಪ್ರಕ್ರಿಯೆಯನ್ನು ಚುನಾವಣಾ ಅಧಿಕಾರಿಗಳು ವಿಡಿಯೋ ಕೂಡಾ ಮಾಡಿಕೊಂಡಿದ್ದರು. ಈ ವೇಳೆ ಅವರು ಚುನಾವಣಾ ಅಧಿಕಾರಿಗಳು ಮೋದಿ, ಶಾ, ಶಿಂಥೆ ಅವರ ತಪಾಸಣೆ ಮಾಡಲಾಗುತ್ತಿದೆಯಾ ಎಂದು ಪ್ರಶ್ನಿಸಿದ್ದರು. ಇದಾದ ಬಳಿಕ ಗೃಹ ಸಚಿವ ಅಮಿತ್ ಶಾ, ಉಪಮುಖ್ಯಮಂತ್ರಿ ಫಡ್ನವೀಸ್, ಅಜಿತ್ ಪವಾರ್ ಮುಂತಾದವರ ತಪಾಸಣೆ ನಡೆಸಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.
ಇದನ್ನೂ ಓದಿ: ಗೆಲ್ಲುವತ್ತ ಗಮನ ನೀಡಿ; ಕಾರ್ಯಕರ್ತರಿಗೆ ಮೋದಿ ಕಿವಿಮಾತು