ಹೈದರಾಬಾದ್ (ತೆಲಂಗಾಣ): ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ತಮಿಳುನಾಡಿನ 9 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನೂ ಮಾತ್ರ ಪ್ರಕಟಿಸಿದೆ. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಮತ್ತು ಮಾಜಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಅವರನ್ನು ಲೋಕ ಸಮರದ ಕಣಕ್ಕಿಳಿಸಲಾಗಿದೆ.
ಚೆನ್ನೈ ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ತೆಲಂಗಾಣದ ಮಾಜಿ ರಾಜ್ಯಪಾಲರಾಗಿದ್ದ ತಮಿಳಿಸೈ ಸೌಂದರರಾಜನ್ ಹಾಗೂ ಕೊಯಮತ್ತೂರು ಕ್ಷೇತ್ರಕ್ಕೆ ಪಕ್ಷದ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರ ಹೆಸರನ್ನು ಘೋಷಿಸಲಾಗಿದೆ. ಚೆನ್ನೈ ಕೇಂದ್ರ ಕ್ಷೇತ್ರದಿಂದ ವಿನೋದ್ ಪಿ ಸೆಲ್ವಂ, ವೆಲ್ಲೂರ್ ಕ್ಷೇತ್ರದಿಂದ ಡಾ.ಎ.ಸಿ.ಷಣ್ಮುಗಂ, ಕೃಷ್ಣಗಿರಿ ಕ್ಷೇತ್ರದಿಂದ ಸಿ.ನರಸಿಂಹನ್, ನೀಲಗಿರಿಸ್ ಕ್ಷೇತ್ರದಿಂದ ಎಲ್.ಮುರುಗನ್, ಪೆರಂಬಲೂರ್ ಕ್ಷೇತ್ರದಿಂದ ಟಿ.ಆರ್.ಪಾರಿವೇಂಧರ್ ಹಾಗೂ ಕನ್ಯಾಕುಮಾರಿ ಕ್ಷೇತ್ರದಿಂದ ರಾಧಾಕೃಷ್ಣನ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.
ತಮಿಳುನಾಡಿನಲ್ಲಿ 39 ಲೋಕಸಭಾ ಸ್ಥಾನಗಳಿವೆ. ಬಿಜೆಪಿ ಪಾಟಾಳಿ ಮಕ್ಕಳ್ ಕಚ್ಚಿ (ಪಿಎಂಕೆ), ಆಪ್ ವಿಂಗ್ ಮತ್ತು ಅಮ್ಮ ಮಕ್ಕಳ ಮುನ್ನೇತ್ರ ಕಳಗಂ (ಎಎಂಎಂಕೆ) ಜೊತೆ ಮೈತ್ರಿ ಮಾಡಿಕೊಂಡಿದೆ. ಬಿಜೆಪಿ ಈಗಾಗಲೇ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಎರಡು ಪಟ್ಟಿಗಳನ್ನು ಬಿಜೆಪಿ ಪ್ರಕಟಿಸಿದೆ.