ಲಖನೌ (ಉತ್ತರಪ್ರದೇಶ): ಲೋಕಸಭೆ ಚುನಾವಣೆಗೆ ಕೊನೆಯ ಚರಣದ ಮತದಾನ ಮಾತ್ರ ಬಾಕಿ ಉಳಿದಿದೆ. ಜೂನ್ 1 ರಂದು 7ನೇ ಹಂತದ ಮತದಾನ ನಡೆಯಲಿದ್ದು, ಜೂನ್ 4 ರಂದು ದೇಶ ಮತ್ತು ವಿಶ್ವವೇ ಕಾಯುತ್ತಿರುವ ಫಲಿತಾಂಶ ಹೊರ ಬೀಳಲಿದೆ. ಕೊನೆಯ ಚರಣದಲ್ಲಿ ವಾರಾಣಸಿ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಉತ್ತರ ಪ್ರದೇಶದ 13 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ದೇವಭೂಮಿ ಎಂದೇ ಖ್ಯಾತಿಯಾಗಿರುವ ವಾರಾಣಸಿ ಅಖಾಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಸ್ಪರ್ಧಿಸಿದ್ದಾರೆ. 2014, 2019 ರ ಚುನಾವಣೆಯಲ್ಲಿ ಸಲೀಸಾಗಿ ಗೆಲುವು ಕಂಡಿದ್ದ ಅವರು, ಈ ಬಾರಿಯೂ ವಿಜಯದ ಮಾಲೆ ಧರಿಸುವುದರಲ್ಲಿ ಅನುಮಾನವಿಲ್ಲ. ಆದರೂ, ಕ್ಷೇತ್ರದಲ್ಲಿ ಪೈಪೋಟಿ ನೀಡಲು ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಅವರನ್ನು I.N.D.I.A ಕೂಟದ ಪರವಾಗಿ ಕಣಕ್ಕಿಳಿಸಲಾಗಿದೆ. ಯಾವುದೇ ಬಣಕ್ಕೆ ಸೇರದ ಬಿಎಸ್‌ಪಿ ಅಥರ್ ಜಮಾಲ್ ಲಾರಿ ಅವರನ್ನು ಹುರಿಯಾಳುವಾಗಿಸಿದೆ.
2024 ರ ಲೋಕಸಭಾ ಚುನಾವಣೆಯ ಏಳನೇ ಮತ್ತು ಅಂತಿಮ ಹಂತದ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಅನುಪ್ರಿಯಾ ಪಟೇಲ್, ಮಹೇಂದ್ರ ನಾಥ್ ಪಾಂಡೆ, ಮಾಜಿ ಪ್ರಧಾನಿ ಚಂದ್ರಶೇಖರ್ ಪುತ್ರ ನೀರಜ್ ಶೇಖರ್, ಕಾಂಗ್ರೆಸ್ ನಾಯಕ ಅಖಿಲೇಶ್ ಪ್ರತಾಪ್ ಸಿಂಗ್, ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮತ್ತು ನಟ ರವಿ ಕಿಶನ್ ಅವರಂತಹ ಪ್ರಮುಖ ನಾಯಕರ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ.
ಈ ಹಂತ ಎನ್‌ಡಿಎಗೆ ಸವಾಲಾಗಿದೆ. ರಾಜ್ಯದ 80 ಕ್ಷೇತ್ರಗಳ ಪೈಕಿ ಕಳೆದ ಚುನಾವಣೆಯಲ್ಲಿ ಘೋಸಿ ಮತ್ತು ಗಾಜಿಪುರ ಕ್ಷೇತ್ರಗಳನ್ನು ಹೊರತುಪಡಿಸಿ ಎಲ್ಲ ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲುವು ಸಾಧಿಸಿತ್ತು. ಚುನಾವಣೆ ನಡೆಯಲಿರುವ 13 ಸ್ಥಾನಗಳ ಪೈಕಿ ಕಳೆದ ಚುನಾವಣೆಯಲ್ಲಿ 9 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. 2 ಸ್ಥಾನಗಳಲ್ಲಿ ಮಿತ್ರ ಪಕ್ಷವಾದ ಅಪ್ನಾ ದಳ (ಎಸ್) ಗೆದ್ದಿತ್ತು. ಇನ್ನುಳಿದ ಎರಡನ್ನು ಎಸ್‌ಪಿ ಮತ್ತು ಬಿಎಸ್‌ಪಿ ಜಯಿಸಿದ್ದವು. ಈ ಬಾರಿ ಯಾವ ಪಕ್ಷಕ್ಕೆ ಎಷ್ಟು ಸೀಟು ಸಿಗಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ಇನ್ನೂ, 7ನೇ ಹಂತದ ಚುನಾವಣೆಯಲ್ಲಿ 8 ರಾಜ್ಯಗಳ 57 ಸ್ಥಾನಗಳಿಗೆ ಮತದಾನ ನಡೆಯಲಿದೆ. ಉತ್ತರಪ್ರದೇಶದ 13, ಪಶ್ಚಿಮಬಂಗಾಳದ 9, ಕೇಂದ್ರಾಡಳಿತ ಪ್ರದೇಶ ಚಂಡೀಗಢದ 1, ಪಂಜಾಬ್ನ 13, ಜಾರ್ಖಂಡ್ನ 3, ಹಿಮಾಚಲಪ್ರದೇಶದ 4, ಬಿಹಾರದ 8 ಲೋಕಸಭಾ ಕ್ಷೇತ್ರಗಳಿಗೆ ಮತದಾನವಾಗಲಿದೆ.
ಇದನ್ನೂ ಓದಿ: ವಿರೋಧ ಪಕ್ಷಗಳ ಒಕ್ಕೂಟ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲು, ಮುಸ್ಲಿಮರಿಗೆ ಮೀಸಲಾತಿ: ಮೋದಿ - PM Narendra Modi