ನವದೆಹಲಿ: ಬಾಂಗ್ಲಾದೇಶದ ಆಡಳಿತಾರೂಢ ಪಕ್ಷ ಅವಾಮಿ ಲೀಗ್ನ ಸಂಸದರೊಬ್ಬರು ಭಾರತಕ್ಕೆ ಚಿಕಿತ್ಸೆಗೆಂದು ಬಂದು ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಬುಧವಾರ ಅವರು ಪಶ್ಚಿಮಬಂಗಾಳದ ಕೋಲ್ಕತ್ತಾದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಬಾಂಗ್ಲಾದೇಶಿಯರನ್ನು ಬಂಧಿಸಲಾಗಿದೆ. ಈ ಕುರಿತು ಉಭಯ ರಾಷ್ಟ್ರಗಳು ಜಂಟಿ ತನಿಖೆ ನಡೆಸಲು ಮುಂದಾಗಿವೆ.
ಅನ್ವರುಲ್ ಅಜೀಮ್ ಸಾವಿಗೀಡಾದ ಸಂಸದ. ಮೇ 13 ರಂದು ಭಾರತದಲ್ಲಿ ಅವರು ನಾಪತ್ತೆಯಾಗಿದ್ದರು. ಮೇ 14 ರಿಂದ ಫೋನ್ ಕೂಡ ಸ್ವಿಚ್ಡ್ ಆಫ್ ಆಗಿತ್ತು. ಸಂಪರ್ಕಕ್ಕೆ ಸಿಗದ ಕಾರಣ ಸಂಸದರ ಪುತ್ರಿ ಮುಮ್ತಾರಿನ್ ಫಿರ್ದೌಸ್ ಅವರು ಮೇ 18 ರಂದು ಢಾಕಾ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು. ಇದಾದ ಬಳಿಕ ಇಂದು ಕೋಲ್ಕತ್ತಾದ ಮನೆಯೊಂದರಲ್ಲಿ ಬಾಂಗ್ಲಾ ಸಂಸದ ಶವ ಪತ್ತೆಯಾಗಿದೆ.
ಮೂವರು ಬಾಂಗ್ಲಾದೇಶಿಯರ ಬಂಧನ: ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಬಾಂಗ್ಲಾದೇಶದ ಗೃಹ ಸಚಿವ ಅಸಾದುಝಮಾನ್ ಖಾನ್, ಹಿರಿಯ ಸಂಸದ ಅನ್ವರುಲ್ ಅಜೀಮ್ ಅವರು ಕೋಲ್ಕತ್ತಾದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇದು ಕೊಲೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಬಾಂಗ್ಲಾದೇಶಿಗರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಮೇ 12 ರಂದು ಭಾರತಕ್ಕೆ ತೆರಳಿದ್ದ ಅವರು ಒಂದು ದಿನದ ನಂತರ ನಾಪತ್ತೆಯಾಗಿದ್ದರು. ಹುಡುಕಾಟದ ವೇಳೆ ಅವರು ಮೇ 22 ರಂದು ಕೋಲ್ಕತ್ತಾದ ನ್ಯೂಟೌನ್ ಪ್ರದೇಶದ ಫ್ಲಾಟ್‌ನಲ್ಲಿ ಶವವಾಗಿ ಸಿಕ್ಕಿದ್ದಾರೆ. ಎಲ್ಲ ಹಂತಕರು ಬಾಂಗ್ಲಾದೇಶೀಯರಾಗಿದ್ದಾರೆ. ಇದು ಯೋಜಿತ ಕೊಲೆಯಾಗಿದೆ ಎಂದು ಸಚಿವರು ಹೇಳಿದ್ದಾರೆ.
ಹತ್ಯೆಯ ಉದ್ದೇಶದ ಬಗ್ಗೆ ಶೀಘ್ರವೇ ತನಿಖೆಯಲ್ಲಿ ತಿಳಿದು ಬರಲಿದೆ. ಭಾರತೀಯ ಪೊಲೀಸರು ಪ್ರಕರಣದಲ್ಲಿ ಸಹಕರಿಸುತ್ತಿದ್ದಾರೆ. ಮೂರು ಬಾರಿ ಸಂಸದರಾಗಿರುವ ಮತ್ತು ಪಕ್ಷದ ಕಲಿಗಂಜ್ ಘಟಕದ ಅಧ್ಯಕ್ಷರಾಗಿರುವ ಅಜೀಮ್ ಅವರು ಚಿಕಿತ್ಸೆ ಪಡೆಯಲು ಭಾರತಕ್ಕೆ ತೆರಳಿದ್ದರು. ವ್ಯಾವಹಾರಿಕ ಸಂಬಂಧವಾಗಿ ಈ ಕೊಲೆ ನಡೆದಿರುವ ಸಾಧ್ಯತೆ ಇದೆ ಎಂಬ ಶಂಕೆ ಇದೆ ಎಂದು ಅವರು ತಿಳಿಸಿದರು.
ಭಾರತ- ಬಾಂಗ್ಲಾ ಜಂಟಿ ತನಿಖೆ: ಕೋಲ್ಕತ್ತಾದ ಪೊಲೀಸರು ಪ್ರಕರಣವನ್ನು ಜಂಟಿ ತನಿಖೆ ನಡೆಸಲು ಪ್ರಾರಂಭಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಅಜೀಮ್ ಅವರ ಕುಟುಂಬಸ್ಥರು ಕೋಲ್ಕತ್ತಾಗೆ ಆಗಮಿಸಲಿದ್ದಾರೆ. ಅವರ ವೀಸಾ ಪ್ರಕ್ರಿಯೆಯು ನಡೆಯುತ್ತಿದೆ. ದೆಹಲಿಯಲ್ಲಿರುವ ಬಾಂಗ್ಲಾ ರಾಯಭಾರ ಕಚೇರಿಯು ಹೇಳಿಕೆ ನೀಡಿದ್ದು, "ಭಾರತವು ನಮ್ಮ ಹಳೆಯ ಮತ್ತು ವಿಶ್ವಾಸಾರ್ಹ ಸ್ನೇಹಪರ ದೇಶವಾಗಿದೆ. ಭಾರತೀಯ ಅಧಿಕಾರಿಗಳಿಂದ ಹೆಚ್ಚಿನ ವಿವರಗಳನ್ನು ನಿರೀಕ್ಷಿಸುತ್ತಿದ್ದೇವೆ" ಎಂದು ಹೇಳಿದೆ.
ಎಸ್‌ಟಿಎಫ್ ಮತ್ತು ಐಬಿ ಪತ್ತೆದಾರರು ಕೂಡ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಅಜೀಂ ಅವರು ಕೋಲ್ಕತ್ತಾಗೆ ಆಗಮಿಸಿದಾಗಿನಿಂದ ಬಳಸುತ್ತಿದ್ದ ಕಾರನ್ನು ಪತ್ತೆ ಮಾಡಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಅಜೀಮ್ ಜೊತೆಗೆ ಇಬ್ಬರು ವ್ಯಕ್ತಿಗಳು ಇದ್ದರು. ಆ ಇಬ್ಬರು ವ್ಯಕ್ತಿಗಳು ನೇರವಾಗಿ ಕೊಲೆಯಲ್ಲಿ ಭಾಗಿಯಾಗಿರಬಹುದು. ಘಟನೆಯ ನಂತರ ದೇಶದಿಂದ ಪರಾರಿಯಾಗಿರಬಹುದು ಎಂದು ಪ್ರಾಥಮಿಕ ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.