ಕೋಲ್ಕತ್ತಾ(ಪಶ್ಚಿಮ ಬಂಗಾಳ): ಕೋಲ್ಕತ್ತಾ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐಗೆ ಹಲವು ಸವಾಲುಗಳು ಎದುರಾಗಿವೆ. ಪ್ರಕರಣದಲ್ಲಿ ಆರೋಪಿಗಳಾಗಿರುವ ಆರ್.ಜಿ.ಕರ್ ಕಾಲೇಜಿನ ಮಾಜಿ ಪ್ರಾಂಶುಪಾಲ ಸೇರಿದಂತೆ ನಾಲ್ವರು ಸಿಬ್ಬಂದಿಯನ್ನು ವಿಚಾರಣೆ ನಡೆಸುತ್ತಿದೆ. ಎಲ್ಲರೂ ವಿಭಿನ್ನ ಮತ್ತು ಅಸಮಂಜಸ ಉತ್ತರ ನೀಡುತ್ತಿದ್ದು, ಸತ್ಯ ಬಯಲಿಗೆಳೆಯಲು ಸಿಬಿಐ ಪಾಲಿಗ್ರಾಫ್ ಪರೀಕ್ಷೆಗೆ ಮುಂದಾಗಿದೆ.
ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರ ವರ್ತನೆಯು ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದ್ದು, ಆತನ ಜೊತೆಗೆ ಉಳಿ ನಾಲ್ವರು ವೈದ್ಯರಿಗೆ ಪಾಲಿಗ್ರಾಫ್ ಪರೀಕ್ಷೆ ನಡೆಸಲು ಸಿಬಿಐ ನಿರ್ಧರಿಸಿದೆ. ಇದಕ್ಕಾಗಿ ಕೋಲ್ಕತ್ತಾ ವಿಶೇಷ ನ್ಯಾಯಾಲಯದಿಂದ ಅನುಮತಿಯನ್ನೂ ಪಡೆದುಕೊಂಡಿದೆ.
ಸಂದೀಪ್ ಘೋಷ್ ಅವರು ವೈದ್ಯೆ ವಿದ್ಯಾರ್ಥಿನಿ ಹತ್ಯೆಯಾದ ದಿನ ಆಸ್ಪತ್ರೆಯಲ್ಲಿದ್ದರು ಎಂಬುದು ತಿಳಿದುಬಂದಿದೆ. ಹೀಗಾಗಿ ಅವರ ವಿಚಾರಣೆ ನಡೆಸಲಾಗುತ್ತಿದೆ. ಆದರೆ, ಸಂದೀಪ್ ಅಧಿಕಾರಿಗಳಿಗೆ ಸಹಕರಿಸುತ್ತಿಲ್ಲ. ಉತ್ತರಗಳು ನೀಡುತ್ತಿಲ್ಲ ಎಂದು ಸಿಬಿಐ ಹೇಳಿದೆ. ಹೀಗಾಗಿ ಅವರಿಗೆ ಸುಳ್ಳು ಪತ್ತೆ ಪರೀಕ್ಷೆ ಮಾಡಲು ಮುಂದಾಗಿದೆ. ಕೋರ್ಟ್ ಸಮ್ಮತಿ ನೀಡಿದ ಕಾರಣ ಅವರಿಗೆ ಸುಳ್ಳು ಪತ್ತೆ ಪರೀಕ್ಷೆ ನಡೆಯಲಿದೆ.
ಪಿಎಂ ಮೋದಿಗೆ ಸಿಎಂ ಮಮತಾ ಪತ್ರ: ಮತ್ತೊಂದೆಡೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯವನ್ನು ತಡೆಯಲು ಕಠಿಣ ಕಾನೂನು ತರುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
"ದೇಶದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರದ ಘಟನೆಗಳನ್ನು ನಿಮ್ಮ ಗಮನಕ್ಕೆ ತರಲು ನಾವು ಬಯಸುತ್ತೇವೆ. ಅನೇಕ ಪ್ರಕರಣಗಳಲ್ಲಿ ಮಹಿಳೆಯರನ್ನು ಕೊಲೆ ಮಾಡಲಾಗುತ್ತಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ದೇಶದಲ್ಲಿ ಪ್ರತಿದಿನ ಸುಮಾರು 90 ಅತ್ಯಾಚಾರ ಘಟನೆಗಳು ನಡೆಯುತ್ತಿವೆ. ಇದು ಭಯಾನಕತೆಯನ್ನು ಸೂಚಿಸುತ್ತದೆ. ಇಂತಹ ಕೃತ್ಯಗಳು ಸಮಾಜ ಮತ್ತು ದೇಶದ ನಂಬಿಕೆಯನ್ನು ಹಾಳು ಮಾಡುತ್ತವೆ. ಮಹಿಳೆಯರು ಸುರಕ್ಷಿತವಾಗಿದ್ದಾರೆ ಎಂಬ ಭಾವನೆ ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ" ಎಂದಿದ್ದಾರೆ.
ತ್ವರಿತ ಕೋರ್ಟ್ಗಳ ಅಗತ್ಯವಿದೆ: "ಅತ್ಯಾಚಾರ, ಕೊಲೆಯಂತಹ ಘೋರ ಅಪರಾಧಗಳಲ್ಲಿ ಭಾಗಿಯಾದ ಅಪರಾಧಿಗಳಿಗೆ ಸೂಕ್ತ ಶಿಕ್ಷೆಯನ್ನು ನೀಡಲು ಕಠಿಣ ಕಾನೂನು ತರುವ ಅಗತ್ಯವಿದೆ. ಇಂತಹ ಪ್ರಕರಣಗಳ ವಿಚಾರಣೆ ಮತ್ತು ಶೀಘ್ರ ಇತ್ಯರ್ಥಕ್ಕಾಗಿ ತ್ವರಿತ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕಾಗಿದೆ. ಈ ಪ್ರಕರಣಗಳು 15 ದಿನಗಳಲ್ಲಿ ಪೂರ್ಣಗೊಳಿಸುವಂತೆ ನೋಡಿಕೊಳ್ಳಬೇಕು" ಎಂದು ಪತ್ರದಲ್ಲಿ ಕೋರಿದ್ದಾರೆ.
ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ನಂತರ ಆಸ್ಪತ್ರೆಯ ಮೇಲೆ ದಾಳಿ ನಡೆದು ಸಾಕ್ಷ್ಯ ನಾಶಕ್ಕೆ ಯತ್ನಿಸಲಾಗಿತ್ತು. ಸೂಕ್ತ ಭದ್ರತೆ ನೀಡದ ಮಮತಾ ಬ್ಯಾನರ್ಜಿ ಸರ್ಕಾರದ ಮೇಲೆ ಭಾರೀ ಟೀಕೆ ಕೇಳಿಬಂದಿದೆ.