ನವದೆಹಲಿ: ದೆಹಲಿಯ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಲಾದ ಅನೇಕ ಸಮನ್ಸ್ಗಳನ್ನು ತಪ್ಪಿಸಿದ್ದಕ್ಕಾಗಿ ಜಾರಿ ನಿರ್ದೇಶನಾಲಯ (ಇಡಿ) ನೀಡಿದ ಎರಡು ದೂರುಗಳ ಆಧಾರದ ಮೇಲೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ರೋಸ್ ಅವೆನ್ಯೂ ನ್ಯಾಯಾಲಯವು ಶನಿವಾರ ಜಾಮೀನು ಮಂಜೂರು ಮಾಡಿದೆ.
ಈ ಹಿನ್ನೆಲೆ ಇಂದು ಶನಿವಾರ ದೆಹಲಿ ಸಿಎಂ ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರಾಗಿದ್ದರು. 15,000 ರೂಪಾಯಿ ಮೌಲ್ಯದ ಶ್ಯೂರಿಟಿ ಬಾಂಡ್ ಹಾಗೂ 1 ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್ಗಳ ಮೇಲೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ತನಿಖಾ ಸಂಸ್ಥೆಯು ನೀಡಿದ ಹಲವು ಸಮನ್ಸ್ಗಳನ್ನು ಕೇಜ್ರಿವಾಲ್ ಪಾಲಿಸಿಲ್ಲ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ ದೂರು ದಾಖಲಿಸಿತ್ತು. ಇದರ ಆಧಾರದ ಮೇಲೆ ರೋಸ್ ಅವೆನ್ಯೂ ನ್ಯಾಯಾಲಯ ಆಮ್ ಆದ್ಮಿ ಪಕ್ಷದ ಸಂಚಾಲಕ ಕೇಜ್ರಿವಾಲ್ಗೆ ಇಂದು ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿತ್ತು. ಕೋರ್ಟ್ ಆದೇಶದ ಹಿನ್ನೆಲೆ ಅರವಿಂದ ಕೇಜ್ರಿವಾಲ್ ಇಂದು ನ್ಯಾಯಾಲಯದ ಮುಂದೆ ಹಾಜರಾದರು.
ವಿಚಾರಣೆ ವೇಳೆ ಜಾಮೀನು ಮಂಜೂರು ಮಾಡಿದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ದಿವ್ಯಾ ಮಲ್ಹೋತ್ರಾ ಅವರಿದ್ದ ಪೀಠ, "ಇದು ಜಾಮೀನು ಪಡೆಯಬಹುದಾದ ಪ್ರಕರಣವಾಗಿರುವ ಕಾರಣ ಆರೋಪಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ನೀಡಲಾಗಿದೆ" ಎಂದು ತಿಳಿಸಿದೆ. ನಂತರ ಕೇಜ್ರಿವಾಲ್ ಅವರನ್ನು ನ್ಯಾಯಾಲಯದಿಂದ ಹೊರಹೋಗಲು ಅನುಮತಿ ನೀಡಿದೆ. ದೂರುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಕೇಜ್ರಿವಾಲ್ಗೆ ಹಸ್ತಾಂತರಿಸುವಂತೆ ಇಡಿಗೆ ನ್ಯಾಯಾಲಯ ಸೂಚಿಸಿತು.
ಇದನ್ನೂ ಓದಿ: ಇಡಿ ವಿಚಾರಣೆಗೆ ಸತತ ಗೈರು: ಕೇಜ್ರಿವಾಲ್ಗೆ ಮತ್ತೊಂದು ಸಮನ್ಸ್ ಜಾರಿ ಮಾಡಿದ ದೆಹಲಿ ಕೋರ್ಟ್