ವಿಕಾಸನಗರ (ಉತ್ತರಾಖಂಡ): ಹಿಮ ಮತ್ತು ಗುಡ್ಡಗಾಡು ಪ್ರದೇಶದಿಂದ ಆವೃತವಾದ ಉತ್ತರಾಖಂಡದಲ್ಲಿ ಸಾಂಪ್ರದಾಯಿಕ ಕೃಷಿ ರೈತರಿಗೆ ನಷ್ಟ ತರುತ್ತಿದೆ. ಆಧುನಿಕತೆಯ ಭರಾಟೆಯಲ್ಲಿ ತಾವು ಹಿಂದುಳಿದಿರುವುದಾಗಿ ಕಂಡುಕೊಂಡ ಅಲ್ಲಿನ ರೈತರು ಕೃಷಿ ವಿಧಾನದಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಇದರಿಂದ ಹೆಚ್ಚಿನ ಆದಾಯದ ಬೆಳೆಗಳಿಗೆ ಒತ್ತು ನೀಡುತ್ತಿದ್ದಾರೆ. ಅದರಲ್ಲಿ ವಾಣಿಜ್ಯ ಬೆಳೆಗಳು ಪ್ರಮುಖವಾಗಿವೆ.
ರಾಜ್ಯದಲ್ಲಿ ಸಾಂಪ್ರದಾಯಿಕ ಬೆಳೆಗಳ ಉತ್ಪಾದನೆ ಕಡಿಮೆಯಾಗಿವೆ. ಪೌಷ್ಠಿಕಾಂಶದ ನಿಧಿ ಎಂದೇ ಕರೆಸಿಕೊಳ್ಳಲಾಗುವ ಬೆಳೆಗಳನ್ನ ರೈತರು ಬೆಳೆಯುವುದನ್ನೇ ನಿಲ್ಲಿಸಿದ್ದಾರೆ. ಇಂಥ ಬೆಳೆಗಳನ್ನು ಈಗ ಅತಿ ಕಡಿಮೆ ಪ್ರಮಾಣದಲ್ಲಿ ಮಾತ್ರ ಕಾಣಬಹುದಾಗಿವೆ. ಪೌಷ್ಠಿಕಾಂಶಯುಕ್ತ ಬೆಳೆಗಳನ್ನು ಬೆಳೆಯಲು ಸರ್ಕಾರ ಉತ್ತೇಜಿಸುತ್ತಿದೆ.
ಕೌನಿಯನ್ನು (ಜೋಳದ ಮಾದರಿ ಬೆಳೆ) ಈ ಹಿಂದೆ ಸಾಕಷ್ಟು ಪ್ರಮಾಣದಲ್ಲಿ ಬೆಳೆಯಲಾಗುತ್ತಿತ್ತು. ಇದೀಗ, ಅದರ ಜಾಗವನ್ನು ವಾಣಿಜ್ಯ ಬೆಳೆಗಳು ಆಕ್ರಮಿಸಿಕೊಂಡಿವೆ. ದಡಾರ ಮತ್ತು ಜ್ವರದಿಂದ ಬಳಲುತ್ತಿರುವ ಮಕ್ಕಳಿಗೆ ಹಿರಿಯರು ಕೌನಿ ತಿನ್ನಿಸುತ್ತಿದ್ದರು. ಇದು ಸಕ್ಕರೆ ಕಾಯಿಲೆಗೂ ಪ್ರಯೋಜನಕಾರಿಯಾಗಿದೆ. ರೈತರು ಕೌನಿ, ಮಂಡುವ ಮತ್ತಿತರ ದವಸ ಧಾನ್ಯಗಳನ್ನು ಬಿತ್ತನೆ ಮಾಡುವುದನ್ನು ನಿಲ್ಲಿಸಿದ್ದಾರೆ ಎಂದು ರೈತ ಅತಾರ್ ಸಿಂಗ್ ಹೇಳುತ್ತಾರೆ.
ಈ ಧಾನ್ಯದಲ್ಲಿ ಹುಳು ಇಲ್ಲ: ಸ್ಥಳೀಯ ಭಾಷೆಯಲ್ಲಿ ಕೊಂಡ ಎಂದು ಕರೆಯಲಾಗುವ ರಾಗಿ, ಜಂಗುರ, ಚೈನಿ ಮತ್ತು ಕೌನಿ ಧಾನ್ಯಗಳ ಬೆಳೆಯು ರಾಜ್ಯದಲ್ಲಿ ಕಡಿಮೆಯಾಗಿದೆ. ಬಾರ್ಲಿಯನ್ನು ಹಲವು ವರ್ಷಗಳವರೆಗೆ ಸಂಗ್ರಹಿಸಬಹುದು. ಈ ಧಾನ್ಯಗಳ ಬೆಳೆಗಳಿಗೆ ಯಾವುದೇ ಕೀಟ ಬಾಧೆಯಿಲ್ಲ. ಈ ಬೆಳೆಗಳಿಗೆ ದೊಡ್ಡ ಸವಾಲೆಂದರೆ, ಪಕ್ಷಿ, ಗಿಳಿಗಳ ದಾಳಿಯಾಗಿದೆ. ಆದರೆ, ರೈತರು ಕೌನಿ ಬೆಳೆಯನ್ನು ಬೆಳೆಯಲು ಹೆಚ್ಚು ಶ್ರಮಪಡಬೇಕಾಗಿಲ್ಲ. ಈ ಬೆಳೆ ಬರಗಾಲವನ್ನು ಸಹ ತಡೆಯಬಲ್ಲದು. ವಾಣಿಜ್ಯ ಬೆಳೆಗಳ ಜೊತೆಗೆ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯಬೇಕಾಗಿದೆ ಎಂದು ಇತಿಹಾಸ ತಜ್ಞ ಶ್ರೀಚಂದ್ ಶರ್ಮಾ ಅಭಿಪ್ರಾಯಪಡುತ್ತಾರೆ.
ಕೌನಿಯು ಪೌಷ್ಟಿಕಾಂಶದಿಂದ ಕೂಡಿದೆ. ಕಡಿಮೆ ವೆಚ್ಚದಲ್ಲಿ ಹಾಗೂ ಕಡಿಮೆ ನೀರಿನಲ್ಲಿ ಬೆಳೆಯಬಹುದು. ಕೌನಿಯು ಕೀಟ ಮತ್ತು ರೋಗಗಳಿಂದ ರಕ್ಷಣೆ ಹೊಂದಿದೆ. ಈ ಪೌಷ್ಟಿಕ ಧಾನ್ಯವನ್ನು ಉತ್ತರಾಖಂಡ, ಹಿಮಾಚಲ ಮತ್ತು ಉತ್ತರ ಭಾರತದ ರಾಜ್ಯಗಳ ಗುಡ್ಡಗಾಡು ಪ್ರದೇಶಗಳಲ್ಲಿ ದೀರ್ಘಕಾಲದಿಂದ ಬೆಳೆಯಲಾಗುತ್ತಿದೆ. ಭೂಮಿ, ಪರಿಸರ ಮತ್ತು ಬದಲಾಗುತ್ತಿರುವ ಜಾಗತಿಕ ತಾಪಮಾನಕ್ಕೆ ಈ ಬೆಳೆ ತುಂಬಾ ಪ್ರಯೋಜನಕಾರಿಯಾಗಿದೆ ಎಂದು ಡೆಹ್ರಾಡೂನ್‌ನ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಸಂಜಯ್ ಸಿಂಗ್ ಹೇಳಿದರು.
ಪ್ರೋಟೀನ್ ಮತ್ತು ಶಕ್ತಿಯ ಮೂಲ: ಕೌನಿ ಧಾನ್ಯವು ಪೌಷ್ಟಿಕಾಂಶದ ಕಣಜವಾಗಿದೆ. ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಶಕ್ತಿಯ ಉತ್ತಮ ಮೂಲವಾಗಿದೆ. ಇದು ಅನೇಕ ರೋಗಗಳನ್ನು ನಿಯಂತ್ರಿಸುತ್ತದೆ. ಕೌನಿ ಬೆಳೆಯನ್ನು ಫಾಕ್ಸ್‌ಟೇಲ್ ರಾಗಿ ಎಂದೂ ಕರೆಯುತ್ತಾರೆ. ಧಾನ್ಯಗಳಿಗೆ ಜಾಗತಿಕ ವೇದಿಕೆಯನ್ನು ಒದಗಿಸುವ ಮೂಲಕ, ಭಾರತ ಸರ್ಕಾರ ಮತ್ತು ವಿಶ್ವಸಂಸ್ಥೆಯು 2023 ನೇ ವರ್ಷವನ್ನು 'ಅಂತಾರಾಷ್ಟ್ರೀಯ ರಾಗಿ ವರ್ಷ' ಎಂದು ಘೋಷಿಸುವುದರಿಂದ ರಾಜ್ಯದ ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸುವುದು, ರೈತರ ಆದಾಯವನ್ನು ಹೆಚ್ಚಿಸುವುದು ಮೊದಲು ಆದ್ಯತೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಇದನ್ನೂ ಓದಿ: ಅಕ್ರಮ ಸಂಬಂಧ ಆರೋಪ: ಪತ್ನಿಯ ತಲೆ ಕಡಿದು ಪೊಲೀಸ್ ಠಾಣೆಯತ್ತ ತಂದ ಪತಿ! - husband beheading his wife