ಜಮ್ಮು: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆ ಮತ್ತು ಉಗ್ರರ ನಡುವಿನ ಗುಂಡಿನ ಚಕಮಕಿ ಮುಂದುವರಿದಿದೆ. ಕಿಶ್ತವಾರ್ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಕಿರಿಯ ಸೇನಾಧಿಕಾರಿ (junior commissioned officer) ಸೇರಿ ಇಬ್ಬರು ಭದ್ರತಾ ಪಡೆ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಇಬ್ಬರು ಯೋಧರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅನಂತ್ನಾಗ್ ಜಿಲ್ಲೆಯ ಕಿಶ್ತವಾರ್ಗೆ ಸಂಪರ್ಕಿಸುವ ನೈದಘಮ್ ಪ್ರದೇಶದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆಗೆ ಇಳಿದಿದ್ದರು. ಈ ವೇಳೆ ಗುಂಡಿನ ಚಕಮಕಿ ನಡೆದಿದ್ದು, ನಾಲ್ವರು ಸೇನಾ ಸಿಬ್ಬಂದಿ ಗಾಯಗೊಂಡಿದ್ದರು. ಇದರಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸೇನಾಧಿಕಾರಿ ನೈಬ್ ಸುಬೇದಾರ್ ವಿಪುನ್ ಕುಮಾರ್ ಮತ್ತು ಯೋಧ ಅರವಿಂದ್ ಸಿಂಗ್ ಅವರು ವೀರ ಮರಣವನ್ನಪ್ಪಿದ್ದಾರೆ. ಮೃತರಲ್ಲಿ ಓರ್ವ ಗ್ರೇನೆಡ್ ಸ್ಫೋಟದಿಂದ ಮತ್ತೋರ್ವ ತಲೆಗೆ ಗುಂಡು ತಾಗಿದ್ದರಿಂದ ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
#IndianArmy #GOC White Knight Corps and all ranks salute the supreme sacrifice of the #Bravehearts; offer deepest condolences to the families. @NorthernComd_IA@adgpi@SpokespersonMoD pic.twitter.com/MRV4CLBTWE
— White Knight Corps (@Whiteknight_IA) September 13, 2024
ಇಬ್ಬರು ಯೋಧರ ಸಾವನ್ನು ಸೇನೆ ಕೂಡ ದೃಢಪಡಿಸಿದೆ. 'ವೀರ ಮರಣ ಹೊಂದಿದ ಯೋಧರ ತ್ಯಾಗಕ್ಕೆ ಭದ್ರತಾ ಪಡೆ ವಂದನೆ ಸಲ್ಲಿಸುತ್ತದೆ. ಅವರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇವೆ' ಎಂದು ಸೇನೆ ಹೇಳಿದೆ.
ಇದಕ್ಕೂ ಮುನ್ನ ನಿನ್ನೆ ಮಧ್ಯಾಹ್ನ 3:30ರ ಸುಮಾರಿಗೆ ಭಾರಿ ಪ್ರಮಾಣದ ಗುಂಡಿನ ಚಕಮಕಿ ನಡೆಸಿದ್ದು, ಇದರಲ್ಲಿ ನಾಲ್ವರು ಯೋಧರು ಗಾಯಗೊಂಡಿದ್ದಾರೆ ಎಂದು ಇದಕ್ಕೂ ಮುನ್ನ ಭದ್ರತಾ ಪಡೆ ತಿಳಿಸಿತ್ತು. ಗಾಯಗೊಂಡಿದ್ದ ಯೋಧರಿಗೆ ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಿ ಬಳಿಕ ಹೆಲಿಕಾಪ್ಟರ್ ಮೂಲಕ ಸೇನಾ ಆಸ್ಪತ್ರೆಗೆ ರವಾನಿಸಲಾಗಿತ್ತು.
ಎರಡು ದಿನಗಳ ಹಿಂದೆಯಷ್ಟೇ ಉಧಮ್‌ಪುರ ಜಿಲ್ಲೆಯ ಬಸಂತ್‌ಗಢದಲ್ಲಿ ಭದ್ರತಾ ಕಾರ್ಯಾಚರಣೆ ನಡೆಸಿ ಜೈಶ್ ಎ ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಇಬ್ಬರು ಉಗ್ರರನ್ನು ಹೊಡೆದುರುಳಿಸಿತ್ತು.
ಇನ್ನು, ಯೋಧರ ಸಾವಿಗೆ ಜಮ್ಮು ಕಾಶ್ಮೀರದ ಕಾಂಗ್ರೆಸ್ ಘಟಕ ತೀವ್ರ ಸಂತಾಪ ಸೂಚಿಸಿದೆ. ಜೊತೆಗೆ ಗಾಯಗೊಂಡ ಯೋಧರು ಶೀಘ್ರ ಗುಣಮುಖವಾಗಲೆಂದು ಪ್ರಾರ್ಥಿಸಿದೆ. 'ಜಮ್ಮು ಕಾಶ್ಮೀರದಲ್ಲಿ ಮುಂದುವರಿದಿರುವ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇವೆ. ಎರಡು ದಶಕದ ಬಳಿಕವೂ ಭಯೋತ್ಪಾದನೆ ಮಟ್ಟ ಹಾಕಲು ಬಿಜೆಪಿ ವಿಫಲವಾಗಿದೆ. ಈ ಕುರಿತು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಜಮ್ಮು ಕಾಶ್ಮೀರ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ರವೀಂದ್ರ ಶರ್ಮಾ ತಿಳಿಸಿದ್ದಾರೆ.
ಇದನ್ನೂ ಓದಿ: ಭೀಕರ ರಸ್ತೆ ಅಪಘಾತ: 8 ಮಂದಿ ಸಾವು, 30 ಮಂದಿಗೆ ಗಂಭೀರ ಗಾಯ - road accident in chittoor