ಜಬಲ್ಪುರ (ಮಧ್ಯಪ್ರದೇಶ): ಸಹೋದರಿಯ ಮದುವೆಗಾಗಿ ನೀರಿನ ವ್ಯವಸ್ಥೆ ಮಾಡಲು ಹೋಗಿದ್ದ ಸಹೋದರರು ವಿಧಿಯ ಆಟಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಟ್ರ್ಯಾಕ್ಟರ್ ಮಗುಚಿ ಬಿದ್ದು 7 ಬಾಲಕರಲ್ಲಿ ಐವರು ಮೃತಪಟ್ಟಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ಚಾರ್ಗ್ವಾನ್ ಪೊಲೀಸ್ ಠಾಣೆ ವ್ಯಾಪ್ತಿಯ ತಾನೆಟಾ ಗ್ರಾಮದಲ್ಲಿ ಸೋಮವಾರ ನಡೆದಿದೆ. ಸಾವನ್ನಪ್ಪಿದ ಬಾಲಕರು ಸಂಬಂಧಿಗಳೇ ಆಗಿದ್ದಾರೆ. ವಯಸ್ಸು ಸರಾಸರಿ 10 ರಿಂದ 16 ವರ್ಷ ಆಗಿದೆ. ಗಾಯಗೊಂಡ ಮಕ್ಕಳ ವಯಸ್ಸು 10 ರಿಂದ 11 ವರ್ಷ.
ಈ ಬಗ್ಗೆ ಮಾಹಿತಿ ನೀಡಿರುವ ಹೆಚ್ಚುವರಿ ಎಸ್ಪಿ ಸೂರ್ಯಕಾಂತ್ ಶರ್ಮಾ, ಮೃತಪಟ್ಟ ಮಕ್ಕಳೆಲ್ಲ ಸಂಬಂಧಿಕರು. ಎಲ್ಲರೂ ತಿನೇತಾ ದಿಯೋರಿ ಗ್ರಾಮದ ನಿವಾಸಿಗಳಾಗಿದ್ದಾರೆ. ಟ್ರ್ಯಾಕ್ಟರ್ ಮೂಲಕ ನೀರಿನ ಟ್ಯಾಂಕರ್ ತರಲು ಹೋಗುತ್ತಿದ್ದರು. 18 ವರ್ಷದ ಧರ್ಮೇಂದ್ರ ಠಾಕೂರ್ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದ. ಧರ್ಮೇಂದ್ರ ಠಾಕೂರ್ ಅವರ ಸಹೋದರಿಯ ಮದುವೆ ಕಾರ್ಯ ನಡೆಯುತ್ತಿತ್ತು. ಇದಕ್ಕಾಗಿ ಅವರ ನೀರು ತರಲು ತೆರಳಿದಾಗ ಟ್ರ್ಯಾಕ್ಟರ್ ಮಗುಚಿ ಬಿದ್ದು ಐವರು ಮಕ್ಕಳು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇನ್ನಿಬ್ಬರು ಗಂಭೀರ ಗಾಯಗೊಂಡಿದ್ದಾರೆ. ವಿಷಯ ತಿಳಿದ ಗ್ರಾಮಸ್ಥರು ಮಕ್ಕಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಾಲಕನ ಅಜಾಗರೂಕತೆಯಿಂದಲೇ ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳದು ಬಂದಿದೆ ಎಂದು ಹೇಳಿದರು.
ತಲಾ ₹2 ಲಕ್ಷ ಪರಿಹಾರ ಘೋಷಣೆ: ದುರಂತದಲ್ಲಿ ಸಾವಿಗೀಡಾದ ಮಕ್ಕಳ ಕುಟುಂಬಸ್ಥರಿಗೆ ರಾಜ್ಯ ಸರ್ಕಾರ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ. ಪೊಲೀಸರು ಅಪಘಾತದ ಕಾರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸ್ಥಳೀಯ ಆಡಳಿತ ಮೃತರ ಕುಟುಂಬಗಳಿಗೆ ತಲಾ 50 ಸಾವಿರ ಹಾಗೂ ಗಾಯಗೊಂಡವರಿಗೆ ತಲಾ 10 ಸಾವಿರ ರೂಪಾಯಿ ಪರಿಹಾರ ಘೋಷಿಸಿದೆ.
ಇದನ್ನೂ ಓದಿ: ಬೆಂಗಳೂರು: ನಗರದ ಹಲವೆಡೆ ಗಾಳಿ, ಆಲಿಕಲ್ಲು ಸಹಿತ ಭಾರಿ ಮಳೆ - Rain in Bengaluru