ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ನಿಯೋಜಿತ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಇಂದು ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಳ್ಳಲು ಅಖಿಲೇಶ್ ಯಾದವ್, ಪ್ರಕಾಶ್ ಕಾರಟ್, ಸುಪ್ರಿಯಾ ಸುಳೆ ಮತ್ತು ಕನಿಮೊಳಿ ಸೇರಿದಂತೆ ಇಂಡಿಯಾ ಕೂಟದ ನಾಯಕರು ಶ್ರೀನಗರಕ್ಕೆ ಆಗಮಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ -JKNC X ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಿ, ಇಂಡಿಯಾ ಒಕ್ಕೂಟದ ನಾಯಕರ ಚಿತ್ರಗಳನ್ನು ಹಂಚಿಕೊಂಡಿದೆ. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್; ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಶರದ್ ಪವಾರ್) ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಕೇಂದ್ರ ಸಮಿತಿಯ ಹಂಗಾಮಿ ನಾಯಕ ಪ್ರಕಾಶ್ ಕಾರಟ್, ದ್ರಾವಿಡ ಮುನ್ನೇತ್ರ ಕಳಗಂನ ಉಪ ಪ್ರಧಾನ ಕಾರ್ಯದರ್ಶಿ ಕನಿಮೊಳಿ ಹಾಗೂ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಡಿ ರಾಜಾ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ವೀಕ್ಷಿಸಲು ಶ್ರೀನಗರಕ್ಕೆ ಆಗಮಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ನೂತನ ಮುಖ್ಯಮಂತ್ರಿಯಾಗಿ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದಕ್ಕೂ ಮುನ್ನ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹಿಂಪಡೆಯಲಾಗಿದ್ದು, ಕೇಂದ್ರಾಡಳಿತ ಪ್ರದೇಶದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭೆ ಚುನಾವಣೆಯ ನಂತರ ಹೊಸ ಸರ್ಕಾರ ರಚನೆಗೆ ಹಾದಿ ಸುಗಮವಾಗಿದೆ. ಈ ಸಂಬಂಧ ಗೃಹ ಸಚಿವಾಲಯ ಭಾನುವಾರ ಗೆಜೆಟ್ ಅಧಿಸೂಚನೆ ಕೂಡಾ ಹೊರಡಿಸಿದೆ.
ಈ ಕುರಿತು ಒಮರ್ ಅಬ್ದುಲ್ಲಾ ಅವರಿಗೆ ಪತ್ರ ರವಾನಿಸಿರುವ ಲೆಫ್ಟಿನೆಂಟ್ ಗವರ್ನರ್, ಶಾಸಕಾಂಗ ಪಕ್ಷದ ನಾಯಕರಾದ ನಿಮಗೆ ಮತ್ತು ಸಚಿವ ಸಂಪುಟದ ಸದಸ್ಯರಿಗೆ ಬುಧವಾರ ಪ್ರಮಾಣ ವಚನ ಸ್ವೀಕರಿಸಲು ಆಹ್ವಾನಿಸಲಾಗಿದೆ. ದಾಲ್ ಸರೋವರದ ದಡದಲ್ಲಿರುವ ಶೇರ್ ಎ ಕಾಶ್ಮೀರ್ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಬೆಳಗ್ಗೆ 11.30 ಕ್ಕೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಲಾಗಿದೆ.
ಜಮ್ಮು- ಕಾಶ್ಮೀರ ಕಾಯಿದೆಯ ಪ್ರಕಾರ, 90 ಸದಸ್ಯ ಬಲದ ವಿಧಾನಸಭೆಯಲ್ಲಿ ಶೇಕಡಾ 10 ರಷ್ಟು ಮಂತ್ರಿಗಳನ್ನು ಹೊಂದಿರಬೇಕು ಎಂಬ ನಿಯಮವಿದೆ. ಹೀಗಾಗಿ, ಒಮರ್ ಅವರು 8 ಮಂತ್ರಿಗಳೊಂದಿಗೆ ಪ್ರಮಾಣ ವಚನ ಪಡೆಯಲಿದ್ದಾರೆ.
ನಾಯ್ಡು, ನಿತೀಶ್ಗೆ ಅಚ್ಚರಿಯ ಆಹ್ವಾನ: ಒಮರ್ ಅಬ್ದುಲ್ಲಾ ಅವರ ಸಿಎಂ ಪದಗ್ರಹಣ ಕಾರ್ಯಕ್ರಮಕ್ಕೆ ಎನ್ಡಿಎ ಕೂಟದ ಸದಸ್ಯರಾದ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಆಹ್ವಾನ ನೀಡಲಾಗಿದೆ. ಇದು ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಈ ಇಬ್ಬರೂ ನಾಯಕರು ಬೆಂಬಲ ನೀಡಿದ್ದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಇದನ್ನು ಓದಿ: ಬಿಷ್ಣೋಯ್ ಹಿಟ್ಲಿಸ್ಟ್ನಲ್ಲಿ ಬಾಬಾ ಸಿದ್ದಿಕಿ ಪುತ್ರ: ಯಾರೇ ಸಿಕ್ಕರೂ ಹತ್ಯೆ ಮಾಡಲು ಬಂದಿತ್ತು ಆದೇಶ!