ನವದೆಹಲಿ: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ ಸೋಮವಾರ ಐಎಸ್‌ಸಿ (12ನೇ ತರಗತಿ) ಮತ್ತು ಐಸಿಎಸ್‌ಇ (10ನೇ ತರಗತಿ) ಪರೀಕ್ಷೆಗಳ ಫಲಿತಾಂಶ ಪ್ರಕಟಿಸಿದೆ. 10ನೇ ತರಗತಿ ಪರೀಕ್ಷೆಯಲ್ಲಿ ಶೇ 99.47 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, 12ನೇ ತರಗತಿ ಪರೀಕ್ಷೆಯಲ್ಲಿ ಶೇ 98.19 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
10ನೇ ತರಗತಿಯಲ್ಲಿ ಶೇ.99.31ರಷ್ಟು ಬಾಲಕರು ಉತ್ತೀರ್ಣರಾಗಿದ್ದರೆ, ಶೇ.99.65ರಷ್ಟು ಬಾಲಕಿಯರು ಪಾಸಾಗಿದ್ದಾರೆ. 12ನೇ ತರಗತಿ ಪರೀಕ್ಷೆಯಲ್ಲಿ ಬಾಲಕರು ಶೇ.97.53ರಷ್ಟು ಉತ್ತೀರ್ಣರಾಗಿದ್ದರೆ, ಬಾಲಕಿಯರ ಉತ್ತೀರ್ಣ ಪ್ರಮಾಣ ಶೇ.98.92ರಷ್ಟಿದೆ ಎಂದು ಸಿಐಎಸ್ಸಿಇ ಮುಖ್ಯ ಕಾರ್ಯನಿರ್ವಾಹಕ ಮತ್ತು ಕಾರ್ಯದರ್ಶಿ ಜೋಸೆಫ್ ಇಮ್ಯಾನುಯೆಲ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಫಲಿತಾಂಶವನ್ನು ಹೀಗೆ ನೋಡಿ:
- ಕೌನ್ಸಿಲ್‌ನ ವೆಬ್‌ಸೈಟ್ cisce.org ಅಥವಾ results.cisce.org ಗೆ ಭೇಟಿ ನೀಡಿ.
- ಅಗತ್ಯವಿರುವಂತೆ ICSE ಅಥವಾ ISC ಫಲಿತಾಂಶ ಲಿಂಕ್ ಕ್ಲಿಕ್ ಮಾಡಿ.
- ಯುನಿಕ್ ID, ಸೂಚ್ಯಂಕ ಸಂಖ್ಯೆ ಮತ್ತು ಭದ್ರತಾ ಕೋಡ್ ನಮೂದಿಸಿ.
- ಸೈನ್ ಇನ್ ಮಾಡಿ ಮತ್ತು ಬೋರ್ಡ್ ಪರೀಕ್ಷೆಯ ಫಲಿತಾಂಶಗಳನ್ನು ಪರಿಶೀಲಿಸಿ.
ವಿದ್ಯಾರ್ಥಿಗಳಲ್ಲಿ ಅನಾರೋಗ್ಯಕರ ಸ್ಪರ್ಧೆಯನ್ನು ತಪ್ಪಿಸುವ ಕ್ರಮವಾಗಿ ಕೌನ್ಸಿಲ್ ICSE, ISC ಟಾಪರ್‌ಗಳ ಹೆಸರನ್ನು ಘೋಷಿಸಿಲ್ಲ. CBSE, CISCE ವ್ಯಾಪ್ತಿಗೆ ಬರುವ ತಮಿಳುನಾಡು, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಂತಹ ಇತರ ರಾಜ್ಯ ಮತ್ತು ಕೇಂದ್ರ ಮಂಡಳಿಗಳಿಗೆ ಇದು ಅನ್ವಯ. ಅವರು ಬೋರ್ಡ್ ಪರೀಕ್ಷೆಯ ಟಾಪರ್‌ಗಳ ಹೆಸರನ್ನು ಬಹಿರಂಗಪಡಿಸಿಲ್ಲ.
10ನೇ ತರಗತಿಯಲ್ಲಿ, ಇಂಡೋನೇಷ್ಯಾ, ಸಿಂಗಾಪುರ್ ಮತ್ತು ದುಬೈನಿಂದ ವಿದೇಶದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಶಾಲೆಗಳು ಶೇಕಡಾ 100 ರಷ್ಟು ಫಲಿತಾಂಶ ದಾಖಲಿಸಿವೆ. 12 ನೇ ತರಗತಿಯಲ್ಲಿ, ಸಿಂಗಾಪುರ ಮತ್ತು ದುಬೈನಲ್ಲಿರುವ ಶಾಲೆಗಳು ಉತ್ತಮ ಫಲಿತಾಂಶ ನೀಡಿವೆ.
60 ಲಿಖಿತ ವಿಷಯಗಳಲ್ಲಿ ICSE ಪರೀಕ್ಷೆ (10 ನೇ ತರಗತಿ) ಜರುಗಿದ್ದವು. ಅದರಲ್ಲಿ 20 ಭಾರತೀಯ ಭಾಷೆಗಳು, 13 ವಿದೇಶಿ ಭಾಷೆಗಳು ಮತ್ತು ಒಂದು ಶಾಸ್ತ್ರೀಯ ಭಾಷೆ ಸೇರಿದೆ. ICSE ಪರೀಕ್ಷೆಗಳು ಫೆಬ್ರವರಿ 21 ರಂದು ಪ್ರಾರಂಭವಾಗಿದ್ದವು. ಮಾರ್ಚ್ 28 ರಂದು ಮುಕ್ತಾಯವಾಗಿದ್ದವು. ಎಲ್ಲ ವಿಷಯಗಳ ಪರೀಕ್ಷೆಯನ್ನು 18 ದಿನಗಳಲ್ಲಿ ನಡೆಸಲಾಯಿತು.
47 ಲಿಖಿತ ವಿಷಯಗಳಲ್ಲಿ ISC ಪರೀಕ್ಷೆ (12 ನೇ ತರಗತಿ) ನಡೆಸಲಾಗಿತ್ತು, ಅದರಲ್ಲಿ 12 ಭಾರತೀಯ ಭಾಷೆಗಳು, ನಾಲ್ಕು ವಿದೇಶಿ ಭಾಷೆಗಳು ಮತ್ತು ಎರಡು ಶಾಸ್ತ್ರೀಯ ಭಾಷೆಗಳು ಸೇರಿದ್ದವು. ISC ಪರೀಕ್ಷೆ ಫೆಬ್ರವರಿ 12ರಿಂದ ಏಪ್ರಿಲ್ 4ರವರೆಗೆ ನಡೆದಿದ್ದವು. ಎಲ್ಲ ವಿಷಯಗಳ ಪರೀಕ್ಷೆಯನ್ನು 28 ದಿನಗಳವರೆಗೆ ನಡೆಸಲಾಗಿತ್ತು.