ಫಿರೋಜಾಬಾದ್ (ಉತ್ತರ ಪ್ರದೇಶ) : ಅಧಿಕಾರವೆಂದರೆ ದರ್ಪ, ದೌಲತ್ತು ಮಾತ್ರವಲ್ಲ, ಅದನ್ನು ಜನಪರ ಕಾಳಜಿಗೂ ಬಳಸಿಕೊಳ್ಳಬಹುದು ಎಂಬುದನ್ನು ಇಲ್ಲೋರ್ವ ಮಹಿಳಾ ಐಎಎಸ್ ಅಧಿಕಾರಿ ತೋರಿಸಿಕೊಟ್ಟಿದ್ದಾರೆ. ರೋಗಿಯ ವೇಷದಲ್ಲಿ ಆಸ್ಪತ್ರೆಗೆ ತೆರಳಿ ಅಲ್ಲಿನ ಅವ್ಯವಸ್ಥೆಯನ್ನು ಕಂಡು ವೈದ್ಯರು, ಸಿಬ್ಬಂದಿಯ ಚಳಿ ಬಿಡಿಸಿದ್ದಾರೆ.
ಉಪ ವಿಭಾಗೀಯ ಅಧಿಕಾರಿಯಾಗಿರುವ ಕೃತಿ ರಾಜ್ ಸಾಮಾಜಿಕ ಕಾಳಜಿ ಮೆರೆದಿರುವ ಅಧಿಕಾರಿ. ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿರುವ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿಬಂದಿದ್ದವು. ವೈದ್ಯರು, ಸಿಬ್ಬಂದಿಯ ನಿಷ್ಕಾಳಜಿ ವಿರುದ್ಧ ಚಾಟಿ ಬೀಸಲು ಸ್ವತಃ ಐಎಎಸ್ ಅಧಿಕಾರಿಯೇ ಕಣಕ್ಕಿಳಿದಿದ್ದಾರೆ.
ರೋಗಿ ವೇಷದಲ್ಲಿ ಆಸ್ಪತ್ರೆಗೆ ಅಧಿಕಾರಿ: ಐಎಎಸ್ ಅಧಿಕಾರಿ ಕೃತಿ ರಾಜ್ ಅವರು ಆಸ್ಪತ್ರೆಯಲ್ಲಿನ ಅವ್ಯವಸ್ಥೆಯನ್ನು ಖುದ್ದಾಗಿ ತಿಳಿಯಲು ಅವರೇ, ರೋಗಿಯ ವೇಷದಲ್ಲಿ ಬಂದಿದ್ದಾರೆ. ಬಳಿಕ ಅಲ್ಲಿನ ಸಿಬ್ಬಂದಿ ಮತ್ತು ವೈದ್ಯರ ನಡವಳಿಕೆಯನ್ನು ಗಮನಿಸಿದ್ದಾರೆ. ಜೊತೆಗೆ ಅಲ್ಲಿಗೆ ಬಂದಿದ್ದ ಇತರ ರೋಗಿಗಳ ಜೊತೆಗೆ ಮಾತುಕತೆ ನಡೆಸಿ ಚಿಕಿತ್ಸೆ ಬಗ್ಗೆ ಕೇಳಿ ತಿಳಿದಿದ್ದಾರೆ. ಬಂದವರೆಲ್ಲಗೂ ಆಸ್ಪತ್ರೆಯ ಬಗ್ಗೆ ದೂರುಗಳ ಸರಮಾಲೆಯನ್ನೇ ನೀಡಿದ್ದಾರೆ.
ಉಳಿದ ಅಧಿಕಾರಿಗಳ ಜೊತೆಗೂಡಿ ಕೃತಿ ರಾಜ್ ಅವರು ಆಸ್ಪತ್ರೆಯನ್ನು ಜಾಲಾಡಿದ್ದಾರೆ. ಅವಧಿ ಮುಗಿದ ಔಷಧಿ, ವೈದ್ಯರ ಗೈರು, ಸಿಬ್ಬಂದಿಯ ವೃತ್ತಿಪರ ಕೊರತೆಯನ್ನು ಕಣ್ಣಾರೆ ಕಂಡಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆಗೆ ದೂರು ನೀಡಿ ತನಿಖೆ ನಡೆಸಲು ಸೂಚಿಸುವುದಾಗಿ ಅಧಿಕಾರಿ ತಿಳಿಸಿದ್ದಾರೆ.
ವೈದ್ಯರು ವೃತ್ತಿಪರವಾಗಿಲ್ಲ: ರೋಗಿಗಳು ಎದುರಿಸುತ್ತಿರುವ ಅನಾನುಕೂಲತೆಗಳ ಬಗ್ಗೆ ಹಲವಾರು ದೂರುಗಳು ಬಂದಿದ್ದವು. ಖುದ್ದಾಗಿ ತಪಾಸಣೆ ನಡೆಸಲು ನಿರ್ಧರಿಸಿ ತೆರಳಿದ್ದೆ. ಬೆಳಗ್ಗೆ 10 ಗಂಟೆಯಾದರೂ ವೈದ್ಯರು ಆರೋಗ್ಯ ಕೇಂದ್ರಕ್ಕೆ ಹಾಜರಾಗಿರಲಿಲ್ಲ. ನಾನೇ ವೈದ್ಯರ ಅಪಾಯಿಂಟ್‌ಮೆಂಟ್ ತೆಗೆದುಕೊಂಡು ತಪಾಸಣೆಗೆ ಒಳಪಟ್ಟಾಗ ವೈದ್ಯರ ನಡವಳಿಕೆಯು ವೃತ್ತಿಪರವಾಗಿಲ್ಲ ಎಂದು ಅವರು ಹೇಳಿದ್ದಾರೆ.
ಆರೋಗ್ಯ ಕೇಂದ್ರದ ಸಿಬ್ಬಂದಿಗಳ ಹಾಜರಾತಿ ಗಮನಿಸಿದಾಗ ಕೆಲವರು ಗೈರಾಗಿದ್ದರು. ಇನ್ನೂ ಕೆಲವರು ರಿಜಿಸ್ಟರ್‌ನಲ್ಲಿ ಸಹಿ ಹಾಕಿದ್ದರೂ ಆರೋಗ್ಯ ಕೇಂದ್ರದಲ್ಲಿ ಇರಲಿಲ್ಲ. ಇದಲ್ಲದೆ ಔಷಧಿಗಳ ದಾಸ್ತಾನು ಗಮನಿಸಿದಾಗ ಅರ್ಧದಷ್ಟು ಸ್ಟಾಕ್ ಅವಧಿ ಮುಗಿದಿರುವುದು ಕಂಡುಬಂದಿದೆ. ಆರೋಗ್ಯ ಕೇಂದ್ರದಲ್ಲಿ ಶುಚಿತ್ವ ಮತ್ತು ನೈರ್ಮಲ್ಯ ಕಾಪಾಡಲಾಗಿಲ್ಲ. ಅಲ್ಲಿನ ಸಿಬ್ಬಂದಿಯಲ್ಲಿ ಜನಸೇವೆ ಮಾಡುವ ಉದ್ದೇಶವೇ ಇಲ್ಲ ಎಂಬುದು ಕಂಡುಬಂದಿತು. ಈ ಬಗ್ಗೆ ಇಲಾಖಾ ತನಿಖೆ ನಡೆಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಸೆ.17ರಂದು ಹೈದರಾಬಾದ್ ವಿಮೋಚನಾ ದಿನಾಚರಣೆ: ಕೇಂದ್ರ ಸರ್ಕಾರ ಘೋಷಣೆ