ಧರ್ಮಶಾಲಾ (ಹಿಮಾಚಲ ಪ್ರದೇಶ): ಧರ್ಮಶಾಲಾದಲ್ಲಿ ಭಿಕ್ಷಾಟನೆಯಿಂದ ಜೀವನ ಸಾಗಿಸುತ್ತಿದ್ದ ಬಾಲಕಿಯೊಬ್ಬಳು ಈಗ ವೈದ್ಯೆಯಾಗಿದ್ದಾಳೆ. ಧರ್ಮಶಾಲಾದ ಪಿಂಕಿ ತನ್ನ ಕಠಿಣ ಪರಿಶ್ರಮ ಮತ್ತು ಬೌದ್ಧ ಸನ್ಯಾಸಿಯ ಸಹಾಯದಿಂದ ಅಸಾಧ್ಯವೆಂದು ತೋರುವ ಈ ಕೆಲಸವನ್ನು ಸಾಧ್ಯವಾಗಿಸಿದ್ದಾರೆ.
ಹೌದು, ಮೆಕ್ಲಿಯೋಡ್‌ಗಂಜ್‌ನಲ್ಲಿರುವ ಭಗವಾನ್ ಬುದ್ಧನ ದೇವಾಲಯದ ಬಳಿ, ನಾಲ್ಕೂವರೆ ವರ್ಷದ ಪಿಂಕಿ ಹರ್ಯಾನ್ ತನ್ನ ತಾಯಿಯೊಂದಿಗೆ ಜನರ ಮುಂದೆ ಕೈಚಾಚಿ ಭಿಕ್ಷೆ ಬೇಡುತ್ತಿದ್ದರು. ಆದರೆ ಟಿಬೆಟಿಯನ್ ನಿರಾಶ್ರಿತ ಸನ್ಯಾಸಿ ಜಮ್ಯಾಂಗ್, ಬುದ್ಧನ ದಯೆ ಮತ್ತು ಸಹಾನುಭೂತಿ, ಇತರ ಭಿಕ್ಷುಕರು ಮತ್ತು ಕಸ ಸಂಗ್ರಹಿಸುವವರು ಸಹಾಯ ಮಾಡಿದರು. ಆಗ ಪಿಂಕಿಯನ್ನು ತಮ್ಮ ಮಗುವನ್ನಾಗಿ ಬೆಳೆಸಿದ ಅವರು ಆಕೆಗೆ ಹೊಸ ಜೀವನವನ್ನು ನೀಡಿದರು. ಇಂದಿಗೆ ಸರಿಯಾಗಿ 20 ವರ್ಷಗಳ ನಂತರ ಅದೇ ಹುಡುಗಿ ಎಂಬಿಬಿಎಸ್ ಮುಗಿಸಿ ಡಾಕ್ಟರ್ ಆಗಿದ್ದಾರೆ.
ಹೆತ್ತವರೊಂದಿಗೆ ಕೊಳಗೇರಿಯಲ್ಲಿ ವಾಸಿಸುತ್ತಿದ್ದ ವೈದ್ಯೆ: ವೈದ್ಯೆ ವೃತ್ತಿ ಆಯ್ದುಕೊಂಡಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನನ್ನ ಹೆಸರಿನ ಮುಂದೆ 'ವೈದ್ಯೆ' ಎಂದು ಹಾಕಲು ನಾನು ಇಷ್ಟಪಡುತ್ತೇನೆ" ಎಂದು ಪಿಂಕಿ ಭಾವುಕರಾದರು. ಪಿಂಕಿ 2004 ರಲ್ಲಿ, ತನ್ನ ತಾಯಿ ಕೃಷ್ಣ ಅವರೊಂದಿಗೆ ಹಬ್ಬದ ಸಮಯದಲ್ಲಿ ಮೆಕ್ಲಿಯೋಡ್‌ಗಂಜ್‌ನಲ್ಲಿರುವ ಬುದ್ಧನ ದೇವಾಲಯದ ಬಳಿ ಭಿಕ್ಷೆ ಬೇಡುತ್ತಿದ್ದರು. ಆಕೆ ತಂದೆ ಕಾಶ್ಮೀರಿ ಲಾಲ್ ಅವರು ಬೂಟುಗಳನ್ನು ಪಾಲಿಶ್ ಮಾಡುತ್ತಾ ಜೀವನ ಸಾಗಿಸುತ್ತಿದ್ದರು.
ಆಗ ಸನ್ಯಾಸಿ ಜಮ್ಯಾಂಗ್‌ನ ಕಣ್ಣುಗಳು ಆ ಪುಟ್ಟ ಮಗುವಿನ ಮೇಲೆ ಬಿದ್ದವು. ಕೆಲವು ದಿನಗಳ ನಂತರ, ಸನ್ಯಾಸಿ ಜಮ್ಯಾಂಗ್ ಚರಣ್ ಖಾಡ್‌ನ ಕೊಳಗೇರಿಗೆ ಭೇಟಿ ಕೊಟ್ಟಿದ್ದರು. ಅಲ್ಲಿ ಪಿಂಕಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಮಾಂಕ್ ಜಮ್ಯಾಂಗ್ ಪಿಂಕಿಯನ್ನು ನೋಡಿದ ತಕ್ಷಣ ಗುರುತಿಸಿದರು. ಅದರ ನಂತರ ಅವರು ಬಾಲಕಿಯ ತಂದೆ ಕಾಶ್ಮೀರಿ ಲಾಲ್‌ಗೆ ಪಿಂಕಿಯನ್ನು ಆ ವೇಳೆ ಹೊಸದಾಗಿ ಪ್ರಾರಂಭಿಸಿರುವ ಟಾಂಗ್ಲೆನ್ ಚಾರಿಟೇಬಲ್ ಟ್ರಸ್ಟ್‌ನ ಹಾಸ್ಟೆಲ್‌ಗೆ ಕಳುಹಿಸಲು ವಿನಂತಿಸಿದರು. ಈ ಹಾಸ್ಟೆಲ್ ಚರಣ್ ಖಾಡ್‌ನ ಕೊಳಗೇರಿಗಳಲ್ಲಿ ವಾಸಿಸುವ ಮಕ್ಕಳಿಗಾಗಿತ್ತು. ಆ ಪ್ರದೇಶದಲ್ಲಿದ್ದ ಮಕ್ಕಳೆಲ್ಲರೂ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದರು ಅಥವಾ ಕಸ ಸಂಗ್ರಹಿಸುತ್ತಿದ್ದರು.
ಡಾಕ್ಟರ್ ಆಗಬೇಕೆಂಬ ಕನಸು ಕಂಡಿದ್ದ ಪಿಂಕಿ: ಟಾಂಗ್ಲೆನ್ ಚಾರಿಟೇಬಲ್ ಟ್ರಸ್ಟ್‌ನ ಹಾಸ್ಟೆಲ್‌ಗೆ ದಾಖಲಾದ ಮೊದಲ ಮಕ್ಕಳ ಬ್ಯಾಚ್‌ನಲ್ಲಿ ನಾನು ಇದ್ದೆ. ಆರಂಭದಲ್ಲಿ ನಾನು ತುಂಬಾ ಅಳುತ್ತಿದ್ದೆ ಮತ್ತು ನನ್ನ ಕುಟುಂಬವನ್ನು ಕಳೆದುಕೊಂಡಿರುವ ಭಾವನೆ ನನಗೆ ಮೂಡಿತ್ತು. ಆದರೆ ಕ್ರಮೇಣ ನಾನು ಇತರ ಮಕ್ಕಳೊಂದಿಗೆ ಹಾಸ್ಟೆಲ್ ಅನ್ನು ಆನಂದಿಸಲು ಪ್ರಾರಂಭಿಸಿದೆ ಎಂದು ಪಿಂಕಿ ಹೇಳುತ್ತಾರೆ. ಇತರ ಮಕ್ಕಳೊಂದಿಗೆ ಪಿಂಕಿಯನ್ನು ಧರ್ಮಶಾಲಾದ ದಯಾನಂದ ಮಾದರಿ ಶಾಲೆಗೆ ಸೇರಿಸಲಾಯಿತು. ಒಂದು ದಿನ ಶಾಲೆಯಲ್ಲಿ ಶಿಕ್ಷಕರನ್ನು ಆಕೆಯನ್ನು ನೀನು ಭವಿಷ್ಯದಲ್ಲಿ ಏನು ಆಗಲು ಬಯಸುತ್ತಿಯಾ ಎಂದು ಕೇಳಿದಾಗ, ಪಿಂಕಿ ಪ್ರತಿ ಬಾರಿಯೂ ಡಾಕ್ಟರ್ ಆಗಬೇಕೆಂಬ ಒಂದೇ ಉತ್ತರ ಕೊಡುತ್ತಿದ್ದರು. ಈಗ ಕೊನೆಗೂ ಪಿಂಕಿ ಹೇಳಿದಂತೆ ಡಾಕ್ಟರ್ ಆಗಿದ್ದಾರೆ.
ಎಂಬಿಬಿಎಸ್ ಪೂರ್ಣ: ಪಿಂಕಿ ಮೊದಲಿನಿಂದಲೂ ಅಧ್ಯಯನದಲ್ಲಿ ತುಂಬಾ ಜಾಣಳಾಗಿದ್ದಳು. ಅವಳು 12 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣಳಾದ ತಕ್ಷಣ NEET ಪರೀಕ್ಷೆಗೆ ತಯಾರಿ ನಡೆಸಿ ಪಾಸ್ ಆದರು. ಅವಳು ಖಾಸಗಿ ಕಾಲೇಜಿನಲ್ಲಿ ಪ್ರವೇಶ ಪಡೆಯಬಹುದಿತ್ತು. ಆದರೆ ಅಲ್ಲಿ ಶುಲ್ಕವು ತುಂಬಾ ಹೆಚ್ಚಿತ್ತು. ಹೀಗಾಗಿ ಪಿಂಕಿ 2018 ರಲ್ಲಿ ಚೀನಾದ ಪ್ರತಿಷ್ಠಿತ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆದಳು ಮತ್ತು ಈಗ ತನ್ನ 6-ವರ್ಷದ MBBS ಪದವಿಯನ್ನು ಪೂರ್ಣಗೊಳಿಸಿದ ನಂತರ ಧರ್ಮಶಾಲಾಗೆ ಮರಳಿದ್ದಾಳೆ ಎಂದು ಜಮ್ಯಾಂಗ್ ಹೇಳಿದರು.
‘ಭಿಕ್ಷೆ ಬೇಡವುದು ಬೇಡಮ್ಮ’: ಹಾಸ್ಟೆಲ್‌ನಲ್ಲಿದ್ದುಕೊಂಡು ಓದಲು ಆರಂಭಿಸಿದಾಗ ತನ್ನ ತಾಯಿಗೆ ಭಿಕ್ಷೆ ಬೇಡುವುದನ್ನು ನಿಲ್ಲಿಸುವಂತೆ ಪಿಂಕಿ ಮನವಿ ಮಾಡಿಕೊಂಡಿದ್ದರು. ನನ್ನ ತಂದೆ ಬೂಟ್ ಪಾಲಿಶ್ ಮಾಡುವ ಕೆಲಸವನ್ನು ತೊರೆದಿದ್ದಾರೆ. ಈಗ ಬೀದಿಗಳಲ್ಲಿ ಬೆಡ್‌ಶೀಟ್ ಮತ್ತು ಕಾರ್ಪೆಟ್‌ಗಳನ್ನು ಮಾರಾಟ ಮಾಡುತ್ತಾರೆ. ನನ್ನ ತಾಯಿಯು ಈಗ ಸ್ಲಮ್‌ನ ಚಿಕ್ಕ ಮಕ್ಕಳಿಗಾಗಿ ಟಾಂಗ್ಲೆನ್ ತೆರೆದ ಶಾಲೆಯಲ್ಲಿ ಮಕ್ಕಳ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪಿಂಕಿ ಹೇಳಿದರು.
ಕಳೆದ 19 ವರ್ಷಗಳಿಂದ ಟಾಂಗ್ಲೆನ್‌ನೊಂದಿಗೆ ಸಂಬಂಧ ಹೊಂದಿರುವ ಉಮಂಗ್ ಫೌಂಡೇಶನ್ ಶಿಮ್ಲಾದ ಅಧ್ಯಕ್ಷ ಪ್ರೊ. ಅಜಯ್ ಶ್ರೀವಾಸ್ತವ ಮಾತನಾಡಿ, ಮಾಂಕ್ ಜಮ್ಯಾಂಗ್ ಮಕ್ಕಳನ್ನು ಹಣ ಮಾಡುವ ಯಂತ್ರಗಳನ್ನಾಗಿ ಮಾಡುವ ಬದಲು ಉತ್ತಮ ಮನುಷ್ಯರಾಗಲು ಪ್ರೇರೇಪಿಸುತ್ತಾರೆ. ಅವರು ತಮ್ಮ ಇಡೀ ಜೀವನವನ್ನು ಧರ್ಮಶಾಲಾ ಮತ್ತು ಸುತ್ತಮುತ್ತಲಿನ ಕೊಳಗೇರಿಗಳ ಮಕ್ಕಳಿಗೆ ಅರ್ಪಿಸಿದ್ದಾರೆ. ಅವರು ದತ್ತು ಪಡೆದ ಮಕ್ಕಳು ಒಂದು ಕಾಲದಲ್ಲಿ ಭಿಕ್ಷೆ ಬೇಡುವುದು ಅಥವಾ ಕಸ ಸಂಗ್ರಹಿಸುತ್ತಿದ್ದರು. ಈಗ ಆ ಮಕ್ಕಳು ವೈದ್ಯರು, ಎಂಜಿನಿಯರ್‌ಗಳು, ಪತ್ರಕರ್ತರು ಮತ್ತು ಹೋಟೆಲ್ ವ್ಯವಸ್ಥಾಪಕರಾಗಿದ್ದಾರೆ ಎಂದು ಹೇಳಿದರು.
ಅಂದು ಭಿಕ್ಷಾಟನೆ ಮಾಡುತ್ತಿದ್ದ ಪಿಂಕಿ, ಇಂದು ತಾನು ವೈದ್ಯಳಾದ ಶ್ರೇಯವನ್ನು ಸನ್ಯಾಸಿ ಜಮ್ಯಾಂಗ್ ಮತ್ತು ಟಾಂಗ್ಲೆನ್‌ನ ಇಡೀ ತಂಡಕ್ಕೆ ಅರ್ಪಿಸಿದ್ದಾರೆ. ಆಕೆಯ ಪೋಷಕರು ಶಿಕ್ಷಣದ ಮಹತ್ವವನ್ನು ಅರ್ಥ ಮಾಡಿಕೊಂಡು ಪ್ರತಿ ಹಂತದಲ್ಲೂ ತನಗೆ ಬೆಂಬಲ ನೀಡಿದರು ಎಂದು ಪಿಂಕಿ ಹೇಳಿದರು. ಆದರೆ, ಮಕ್ಕಳಲ್ಲಿ ಇಷ್ಟೊಂದು ಪ್ರತಿಭೆ ಅಡಗಿದೆ ಎಂದು ಆರಂಭದಲ್ಲಿ ಗೊತ್ತಿರಲಿಲ್ಲ. ಅವರ ಹೆಸರು ಬರೆಯಲು ಕಲಿಯಲು ಅವರಿಗೆ ಅಲ್ಪಸ್ವಲ್ಪ ಶಿಕ್ಷಣ ಕೊಡಿಸುತ್ತೇನೆ ಎಂಬ ಆಲೋಚನೆಯಿಂದ ಮಕ್ಕಳೊಂದಿಗೆ ನಾನು ಬೆರೆತೆ. ಆದರೆ ಅದೇ ಕೊಳೆಗೇರಿಯ ಮಕ್ಕಳು ಈಗ ಸಮಾಜಕ್ಕೆ ಸ್ಫೂರ್ತಿ ನೀಡುತ್ತಿದ್ದಾರೆ ಎಂದು ಮೊದಲು ನನಗೆ ತಿಳಿದಿರಲಿಲ್ಲ ಎನ್ನುತ್ತಾರೆ ಜಮ್ಯಾಂಗ್.
ಈಗ ನಾನು ಮಕ್ಕಳು ಮತ್ತು ಕೊಳಗೇರಿಗಳಲ್ಲಿ ವಾಸಿಸುವ ಜನರಿಗೆ ಸೇವೆ ಸಲ್ಲಿಸಲು ಬಯಸುತ್ತೇನೆ. ಸಮರ್ಥ ವೈದ್ಯರಾದ ನಂತರ ನನ್ನ ಸ್ಲಂ ಸಮುದಾಯಕ್ಕೆ ಸೇವೆ ಸಲ್ಲಿಸುವುದು ನನ್ನ ಜವಾಬ್ದಾರಿ, ನಾನು ಸೇವೆ ಮಾಡುತ್ತೇನೆ ಎಂದು ಡಾಕ್ಟರ್ ಪಿಂಕಿ ಹೇಳಿದ್ದಾರೆ.