ನವದೆಹಲಿ: ಭಾರಿ ನಿರೀಕ್ಷೆ ಮೂಡಿಸಿದ್ದ ಹರಿಯಾಣ ಮತ್ತು ಕೇಂದ್ರಾಡಳಿತ ಪ್ರದೇಶ ಜಮ್ಮು- ಕಾಶ್ಮೀರ ವಿಧಾನಸಭೆ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಬಿಜೆಪಿ ಸತತ 3ನೇ ಬಾರಿಗೆ ಹರಿಯಾಣದಲ್ಲಿ ಅಧಿಕಾರಕ್ಕೇರಿದೆ. ಇತ್ತ ಕಣಿವೆ ನಾಡಿನಲ್ಲಿ ನ್ಯಾಷನಲ್ ಕಾನ್ಫ್ರೆನ್ಸ್ ಮತ್ತು ಕಾಂಗ್ರೆಸ್ ಮೈತ್ರಿಗೆ ಭರ್ಜರಿ ಜಯ ಸಿಕ್ಕಿದೆ.
ಹರಿಯಾಣ ಸಿಎಂ ನೈಬ್ ಸಿಂಗ್ ಸೈನಿ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆಗೂ ಮೀರಿ ಏಕಪಕ್ಷವಾಗಿ ಅಧಿಕಾರದ ಗದ್ದುಗೆ ಏರಿದೆ. ಈ ಬಾರಿ ಸರ್ಕಾರ ತಮ್ಮದಾಗಲಿದೆ ಎಂದು ಭಾವಿಸಿದ್ದ ಕಾಂಗ್ರೆಸ್‌ಗೆ ಮುಖಭಂಗವಾಗಿದೆ. 90 ಸದಸ್ಯ ಬಲದ ವಿಧಾನಸಭೆಯಲ್ಲಿ ಭಾರತೀಯ ಜನತಾ ಪಕ್ಷ 48 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ 37, ಐಎನ್ಎಲ್ಡಿ 2 ಸ್ವತಂತ್ರ ಮೂವರು ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ. ಮ್ಯಾಜಿಕ್ ನಂಬರ್ 46 ಆಗಿದೆ.
370ನೇ ವಿಧಿ ರದ್ದಾಗಿ 10 ವರ್ಷದ ಬಳಿಕ ನಡೆದ ಜಮ್ಮು- ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫ್ರೆನ್ಸ್ ಕಮಾಲ್ ಮಾಡಿದೆ. ಕಾಂಗ್ರೆಸ್ ಜೊತೆ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿದ್ದರೂ, ಎನ್‌ಸಿ ಮ್ಯಾಜಿಕ್ ನಂಬರ್ಗೆ 4 ಸ್ಥಾನಗಳಷ್ಟು ಮಾತ್ರ ಹಿಂದಿದೆ. 42 ಸ್ಥಾನಗಳಲ್ಲಿ ಫಾರೂಕ್ ಅಬ್ದುಲ್ಲಾ ನೇತೃತ್ವದ ಪಕ್ಷ ಗೆದ್ದಿದೆ. ಮಿತ್ರ ಪಕ್ಷ ಕಾಂಗ್ರೆಸ್ 32 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೂ ಕೇವಲ 6 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ.
ಕಾಂಗ್ರೆಸ್‌ಗೆ ಆಘಾತ: ಕಣಿವೆಯಲ್ಲಿ ಭಾರಿ ಬದಲಾವಣೆ ನಿರೀಕ್ಷೆ ಮಾಡಿದ್ದ ಬಿಜೆಪಿ 29 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮೆಹಬೂಬಾ ಮುಫ್ತಿ ಅವರ ಪಿಡಿಪಿ 3, ಜೆಪಿಸಿ, ಸಿಪಿಐ (ಎಂ), ಆಪ್ ತಲಾ ಒಂದು ಸ್ಥಾನ ಗೆದ್ದರೆ, ಇತರರು 7 ಸ್ಥಾನಗಳಲ್ಲಿ ವಿಕ್ರಮ ಸಾಧಿಸಿದ್ದಾರೆ. ವಿಶೇಷವೆಂದರೆ ಇತರರು ಗೆದ್ದಷ್ಟೂ ಕಾಂಗ್ರೆಸ್ ಗೆಲುವು ಕಂಡಿಲ್ಲ.
ಸುಳ್ಳಾದ ಮತಗಟ್ಟೆ ಸಮೀಕ್ಷೆ!: ಬಿಜೆಪಿ ಸರ್ಕಾರವಿದ್ದ ಹರಿಯಾಣದಲ್ಲಿ ಆಡಳಿತ ವಿರೋಧಿ ಅಲೆ ಉಂಟಾಗಿದ್ದು, ಈ ಬಾರಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿತ್ತು. ಮತಗಟ್ಟೆ ಸಮೀಕ್ಷೆಗಳು, ರಾಜಕೀಯ ಪಂಡಿತರ ಹೇಳಿಕೆಗಳು ಕೂಡ ಇದೇ ಆಗಿತ್ತು. ಆದರೆ, ಫಲಿತಾಂಶ ಬುಡಮೇಲಾಗಿದ್ದು, ಇಲ್ಲಿ ಕಾಂಗ್ರೆಸ್ ಎರಡನೇ ಸ್ಥಾನ ಪಡೆದುಕೊಂಡಿದೆ. ಬಿಜೆಪಿ ಸತತ ಮೂರನೇ ಬಾರಿಗೆ ಭರ್ಜರಿಯಾಗಿ ಅಧಿಕಾರದ ಗದ್ದುಗೆ ಹಿಡಿದಿದೆ. ಇದರಿಂದ ಕಾಂಗ್ರೆಸ್ ಆಘಾತ ಉಂಟಾಗಿದೆ. ಪಕ್ಷದ ಒಳಜಗಳ, ನಾಯಕರ ಸ್ವಪ್ರತಿಷ್ಠೆ, ಅತಿಯಾದ ಆತ್ಮವಿಶ್ವಾಸ ಎಲ್ಲವೂ ಪಕ್ಷಕ್ಕೆ ಮುಳುವಾಗಿದೆ.
ಹರಿಯಾಣದಲ್ಲಿ ಸೊನ್ನೆ, ಜಮ್ಮು ಕಾಶ್ಮೀರದಲ್ಲಿ ಖಾತೆ ತೆರೆದ ಆಪ್: ದೆಹಲಿ, ಪಂಜಾಬ್ನಲ್ಲಿ ಅಧಿಕಾರದಲ್ಲಿದ್ದ ಆಮ್ ಆದ್ಮಿ ಪಕ್ಷ (ಆಪ್) ಪಕ್ಕದ ಹರಿಯಾಣದಲ್ಲೂ ಕಮಾಲ್ ಮಾಡುವ ನಿರೀಕ್ಷೆ ಹೊಂದಿತ್ತು. ಆದರೆ, ಹರಿಯಾಣ ಜನರು ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದ ಪಕ್ಷವನ್ನು ಸಾರಾಸಗಟಾಗಿ ನಿರಾಕರಿಸಿದ್ದಾರೆ. 80ಕ್ಕೂ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳಲ್ಲಿ ಒಬ್ಬರೇ ಒಬ್ಬರೂ ಗೆಲುವು ಸಾಧಿಸಿಲ್ಲ. ಇತ್ತ ಜಮ್ಮು ಕಾಶ್ಮೀರದಲ್ಲಿ ಇದೇ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದ ಆಪ್ ದೊಡಾ ಕ್ಷೇತ್ರದಲ್ಲಿ ಮೆಹರಾಜ್ ಮಲ್ಲಿಕ್ ಗೆಲುವಿನ ಮೂಲಕ ಖಾತೆ ಆರಂಭಿಸಿದೆ.
ಗೆದ್ದವರು, ಬಿದ್ದವರು: ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಹಾಲಿ ಸಿಎಂ ನಯಾಬ್ ಸಿಂಗ್ ಸೈನಿ, ಆರ್ತಿ ಸಿಂಗ್ ರಾವ್, ಶೃತಿ ಚೌಧರಿ, ಕ್ಯಾಪ್ಟನ್ ಅಭಿಮನ್ಯು ಸೇರಿದಂತೆ ಹಲವರು ಗೆಲುವು ಸಾಧಿಸಿದ್ದಾರೆ. ಜೆಜೆಪಿಯ ಮುಖ್ಯಸ್ಥ ದುಷ್ಯಂತ್ ಚೌಟಾಲಾ, ಅಭಯ್ ಸಿಂಗ್ ಚೌಟಾಲಾ ಆಘಾತಕಾರಿ ಸೋಲು ಕಂಡಿದ್ದಾರೆ. ಕಾಂಗ್ರೆಸ್ನ ಮಾಜಿ ಸಿಎಂ ಭೂಪೇಂದರ್ ಸಿಂಗ್ ಹೂಡಾ, ಕುಸ್ತಿಪಟು ವಿನೇಶ್ ಪೋಗಟ್, ಆದಿತ್ಯ ಸುರ್ಜೇವಾಲಾ ಗೆಲುವು ಸಾಧಿಸಿದರೆ, ಅನಿರುದ್ಧ ಚೌಧರಿ, ಬಿಜೇಂದರ್ ಸಿಂಗ್, ಚಿರಂಜೀವಿ ರಾವ್ ಸೋಲು ಕಂಡಿದ್ದಾರೆ.
ಮೆಹಬೂಬಾ ಪುತ್ರಿಗೆ ಸೋಲು: ಜಮ್ಮು- ಕಾಶ್ಮೀರದಲ್ಲಿ ಸಿಎಂ ಅಭ್ಯರ್ಥಿಯಾಗಿ ಘೋಷಿತವಾಗಿರುವ ಒಮರ್ ಅಬ್ದುಲ್ಲಾ, ನಜಿರ್ ಅಹ್ಮದ್ ಖಾನ್ ಗೆಲುವು ಸಾಧಿಸಿದ್ದರೆ, ಪಿಡಿಪಿಯ ಮೆಹಬೂಬಾ ಮುಫ್ತಿ ಅವರ ಪುತ್ರ ಇಲ್ತಿಜಾ ಮುಫ್ತಿ ಸೋಲು ಕಂಡಿದ್ದಾರೆ.
ನಾಯಕರ ಪ್ರತಿಕ್ರಿಯೆಗಳು: ಹರಿಯಾಣದಲ್ಲಿ ಮತ್ತೆ ಬಿಜೆಪಿಯನ್ನು ಗೆಲ್ಲಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಭಾರತೀಯ ಜನತಾ ಪಕ್ಷಕ್ಕೆ ಮತ್ತೊಮ್ಮೆ ಸ್ಪಷ್ಟ ಬಹುಮತ ನೀಡಿದ್ದಕ್ಕಾಗಿ ಹರಿಯಾಣದ ಜನತೆಗೆ ವಂದಿಸುತ್ತೇನೆ. ಇದು ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ರಾಜಕಾರಣದ ಗೆಲುವಾಗಿದೆ. ಜನರ ಆಕಾಂಕ್ಷೆಗಳನ್ನು ಈಡೇರಿಸಲು ನಾವು ಬದ್ಧವಾಗಿದ್ದೇವೆ ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿಯ ಸಾಧನೆಯ ಬಗ್ಗೆ ಹೆಮ್ಮೆ ಇದೆ. ಪಕ್ಷಕ್ಕೆ ಮತ ಹಾಕಿ ನಮ್ಮ ಮೇಲೆ ನಂಬಿಕೆ ಇಟ್ಟ ಎಲ್ಲರಿಗೂ ಕೃತಜ್ಞ. ಕಣಿವೆಯ ಕಲ್ಯಾಣಕ್ಕಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದೂ ಇದೇ ವೇಳೆ ಹೇಳಿದ್ದಾರೆ.
ನಮ್ಮ ಪಕ್ಷವನ್ನು ನಾಶಪಡಿಸಲು ಹಲವು ರಾಜಕೀಯ ಪಕ್ಷಗಳು ಯತ್ನಿಸಿದವು. ದೇವರ ದಯೆ, ನಮ್ಮ ಪಕ್ಷವನ್ನು ನಾಶ ಮಾಡುವ ಹಾದಿಯಲ್ಲಿ ಅವರೇ ನಿರ್ನಾಮವಾದರು. ಪಕ್ಷಕ್ಕೆ ಮತ ನೀಡಿದ ಜನರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಮತ್ತೊಮ್ಮೆ ಜಮ್ಮು- ಕಾಶ್ಮೀರದ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದೆ. ಈ ಫಲಿತಾಂಶ ಪಕ್ಷದ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ನ್ಯಾಷನಲ್ ಕಾನ್ಫ್ರೆನ್ಸ್ ಪಕ್ಷದ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ನ್ಯಾಷನಲ್ ಕಾನ್ಫರೆನ್ಸ್‌ನ ನಾಯಕರಿಗೆ ಅಭಿನಂದನೆ. ಸ್ಪಷ್ಟ ಬಹುಮತ ನೀಡಿದ ಜಮ್ಮು ಮತ್ತು ಕಾಶ್ಮೀರದ ಜನತೆಗೂ ಅಭಿನಂದನೆ. ಕೇಂದ್ರವು ಮುಂಬರುವ ಸರ್ಕಾರದಲ್ಲಿ ಮೂಗು ತೂರಿಸಬಾರದು ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಇದನ್ನೂ ಓದಿ: ಹರಿಯಾಣದಲ್ಲಿ ಇವಿಎಂ ಟ್ಯಾಂಪರಿಂಗ್ ಆರೋಪ: ಇಸಿಗೆ ದಾಖಲೆ ಸಮೇತ ದೂರು ನೀಡಲು ನಿರ್ಧರಿಸಿದ ಕಾಂಗ್ರೆಸ್