ಹಲ್ದ್ವಾನಿ (ಉತ್ತರಾಖಂಡ): ಉತ್ತರಾಖಂಡದ ಹಲ್ದ್ವಾನಿಯಲ್ಲಿ ಫೆಬ್ರವರಿ 8ರಂದು ನಡೆದ ಹಿಂಸಾಚಾರದ ಮಾಸ್ಟರ್ ಮೈಂಡ್ ಅಬ್ದುಲ್ ಮಲಿಕ್ ಎಂಬಾತನನ್ನು ಪೊಲೀಸರು ಶನಿವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಂಧಿಸಿದ್ದಾರೆ. ಹಲ್ದ್ವಾನಿಗೆ ಆರೋಪಿಯನ್ನು ಕರೆತರಲಾಗಿದೆ. ಈ ಪ್ರಕರಣದಲ್ಲಿ ಇದುವರೆಗೆ ಬಂಧಿತರ ಒಟ್ಟಾರೆ ಸಂಖ್ಯೆ 81ಕ್ಕೆ ಏರಿಕೆಯಾಗಿದೆ ಎಂದು ಉತ್ತರಾಖಂಡ ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು ಆರು ಜನರ ಸಾವಿಗೆ ಕಾರಣವಾದ ಈ ಹಿಂಸಾಚಾರ ಪ್ರಕರಣದಲ್ಲಿ ಅಬ್ದುಲ್ ಮಲಿಕ್ ಕುಟುಂಬ ಪ್ರಮುಖವಾದ ಪಾತ್ರ ವಹಿಸಿದೆ. ಈ ಘಟನೆಯ ನಂತರ ಮಲಿಕ್ ಮತ್ತು ಈತನ ಮಗ ಅಬ್ದುಲ್ ಮೊಯಿದ್ ತಲೆಮರೆಸಿಕೊಂಡಿದ್ದರು. ಇವರ ಪತ್ತೆಗಾಗಿ ಆರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಗುಜರಾತ್, ದೆಹಲಿ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ತನಿಖಾ ತಂಡಗಳು ಶೋಧ ಕಾರ್ಯ ನಡೆಸುತ್ತಿವೆ.
ಇದೀಗ ಒಂದು ತಂಡವು 50 ವರ್ಷದ ಮಲಿಕ್‌ನನ್ನು ದೆಹಲಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆದರೆ, ಈತನ ಮಗ ಇನ್ನೂ ಪರಾರಿಯಾಗಿದ್ದಾನೆ. ಸದ್ಯ ಮಲಿಕ್‌ನನ್ನು ಹಲ್ದ್ವಾನಿಗೆ ಕರೆತಂದಿದ್ದು, ಆತ ನಮ್ಮ ವಶದಲ್ಲಿದ್ದಾನೆ. ಶೀಘ್ರವೇ ನ್ಯಾಯಾಲಯಕ್ಕೂ ಹಾಜರುಪಡಿಸಲಾಗುವುದು ಎಂದು ನೈನಿತಾಲ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಹ್ಲಾದ್ ನಾರಾಯಣ ಮೀನಾ ತಿಳಿಸಿದ್ದಾರೆ. ಮಲಿಕ್ ಮಾತ್ರವಲ್ಲದೇ, ಶನಿವಾರ ಇನ್ನಿಬ್ಬರು ಗಲಭೆಕೋರರನ್ನೂ ಬಂಧಿಸಲಾಗಿದ್ದು, ಇದರಿಂದ ಬಂಧಿತರ ಸಂಖ್ಯೆ 81ಕ್ಕೆ ಏರಿಕೆಯಾಗಿದೆ ಎಂದರು.
ಇದನ್ನೂ ಓದಿ: ಉತ್ತರಾಖಂಡ: ಅಕ್ರಮ ಧಾರ್ಮಿಕ ಕಟ್ಟಡಗಳ ತೆರವಿಗೆ ಆಕ್ರೋಶ; ಪೊಲೀಸ್ ಗುಂಡಿಗೆ ಓರ್ವ ಬಲಿ, ಮೂವರಿಗೆ ಗಾಯ
ಪ್ರಕರಣದ ಹಿನ್ನೆಲೆ: ಆರೋಪಿ ಮಲಿಕ್ ಕುಟುಂಬವು ಹಲ್ದ್ವಾನಿಯ ಬನ್‌ಭೂಲ್‌ಪುರ ಪ್ರದೇಶದಲ್ಲಿ ಕಾನೂನುಬಾಹಿರವಾಗಿ ಮದರಸಾವನ್ನು ನಿರ್ಮಿಸಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಜಾರಿಯಾದ ಮುನ್ಸಿಪಲ್ ಕಾರ್ಪೊರೇಷನ್ ನೋಟಿಸ್ ವಿರುದ್ಧ ಈತನ ಪತ್ನಿ ಸಫಿಯಾ ನ್ಯಾಯಾಲಯದ ಮೊರೆ ಹೋಗಿದ್ದರು. ಆದಾಗ್ಯೂ, ನ್ಯಾಯಾಲಯವು ತಕ್ಷಣವೇ ಪರಿಹಾರವನ್ನು ನೀಡಿರಲಿಲ್ಲ. ಹೀಗಾಗಿ ಫೆಬ್ರವರಿ 8ರಂದು ಅಧಿಕಾರಿಗಳು ಮದರಸಾವನ್ನು ಧ್ವಂಸ ಮಾಡಿದ್ದರು.
ಇದರ ನಂತರ ಈ ಘಟನೆಯು ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚುವುದು ಸೇರಿದಂತೆ ವಿವಿಧ ಅಹಿತಕರ ಘಟನೆಗಳು ನಡೆದು ಹಿಂಸಾಚಾರಕ್ಕೆ ತಿರುಗಿತ್ತು. ಈ ಹಿಂಸಾಚಾರದಲ್ಲಿ ಆರು ಜನರು ಸಾವನ್ನಪ್ಪಿದ್ದರು. ಅಲ್ಲದೇ, ಪೊಲೀಸ್ ಸಿಬ್ಬಂದಿ ಮತ್ತು ಪತ್ರಕರ್ತರು ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಫೆ.16ರಂದು ಮಲಿಕ್ ಮತ್ತು ಆತನ ಮಗನ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿತ್ತು. ಅಷ್ಟೇ ಅಲ್ಲ, ಇವರಿಗೆ ಸೇರಿದ ಆಸ್ತಿಯನ್ನು ಜಪ್ತಿ ಮಾಡಲಾಗಿತ್ತು.
ಇದನ್ನೂ ಓದಿ: ಹಲ್ದ್ವಾನಿ ಘರ್ಷಣೆ : 2.44 ಕೋಟಿ ರೂ ಆಸ್ತಿ ಹಾನಿ ವಸೂಲಾತಿಗಾಗಿ ಪ್ರಮುಖ ಆರೋಪಿಗೆ ನೋಟಿಸ್