ನವದೆಹಲಿ: ಕಳೆದ ಒಂದು ವರ್ಷದಲ್ಲಿ ಧಾನ್ಯದ ಚಿಲ್ಲರೆ ಬೆಲೆಯಲ್ಲಿ ಶೇ.15ರಷ್ಟು ಏರಿಕೆ ಕಂಡ ಬೆನ್ನಲ್ಲೇ ಗ್ರಾಹಕರ ನೆರವಿಗೆ ಕೇಂದ್ರ ಸರ್ಕಾರ ಧಾವಿಸಿದೆ. 'ಭಾರತ ಅಕ್ಕಿ' ಹೆಸರಲ್ಲಿ 29 ರೂಪಾಯಿಗೆ ಪ್ರತಿ ಕೆಜಿ ಅಕ್ಕಿ ಮಾರಾಟಕ್ಕೆ ಮಂಗಳವಾರ ಚಾಲನೆ ನೀಡಲಾಗಿದೆ. ಈ ಅಕ್ಕಿ 5 ಮತ್ತು 10 ಕೆಜಿ ಪ್ಯಾಕೆಟ್ನಲ್ಲಿ ಲಭ್ಯವಾಗಲಿವೆ.
ಬೆಲೆಗಳನ್ನು ನಿಯಂತ್ರಿಸಲು ಸಗಟು ಮಧ್ಯಸ್ಥಿಕೆದಾರರು ಹೆಚ್ಚಿನ ಜನರಿಗೆ ನೆರವಾಗ ಕಾರಣ ಬೆಲೆ ಸ್ಥಿರೀಕರಣ ನಿಧಿ ಅಡಿಯಲ್ಲಿ ಈ ಮಧ್ಯಪ್ರವೇಶ ಮಾಡಲಾಗಿದೆ. ಈ ಮೂಲಕ ಮಧ್ಯಮ ವರ್ಗದವರಿಗೆ ಸಬ್ಸಿಡಿ ದರದಲ್ಲಿ ಪ್ರತಿ ಕೆಜಿ ಅಕ್ಕಿಯನ್ನು 29 ರೂಪಾಯಿಗೆ ನೀಡಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸಚಿವ ಪಿಯೂಶ್ ಗೋಯಲ್ ತಿಳಿಸಿದ್ದಾರೆ. ಪ್ರತಿ ಕೆಜಿ ಭಾರತ ಅಕ್ಕಿಯಲ್ಲಿ ಶೇ.5ರಷ್ಟು ನುಚ್ಚಕ್ಕಿ ಮಿಶ್ರಣ ಇರುತ್ತದೆ.
ಈ ಹಿಂದೆ ಗ್ರಾಹಕರ ನೆರವಿಗೆ ಸರ್ಕಾರ ಧಾವಿಸಿತ್ತು. ಭಾರತ ಹಿಟ್ಟು ಆರಂಭಿಸಿದ ನಂತರ ಕಳೆದ ಆರು ತಿಂಗಳಲ್ಲಿ ಹಿಟ್ಟಿನ ಬೆಲೆಯಲ್ಲಿ ಏರಿಕೆ ಕಂಡಿಲ್ಲ. ಅದೇ ರೀತಿಯಾಗಿ 'ಭಾರತ ಅಕ್ಕಿ'ಯ ಪರಿಣಾಮಗಳನ್ನು ನಾವು ಕಾಣಲಿದ್ದೇವೆ ಎಂದು ಸಚಿವ ಪಿಯೂಶ್ ತಿಳಿಸಿದ್ದಾರೆ. ಇದೇ ವೇಳೆ, ಅಕ್ಕಿ ಮಾರಾಟ ಮಾಡುವ 100 ವಾಹನಗಳಿಗೆ ಅವರು ಚಾಲನೆ ನೀಡಿದ್ದಾರೆ.