ನವದೆಹಲಿ: 'ಏಕ್ ಭಾರತ್ ಶ್ರೇಷ್ಠ ಭಾರತ್' ಧ್ಯೇಯವಾಕ್ಯದಡಿ ಸಾಂಸ್ಕೃತಿಕ ಏಕತೆಯನ್ನು ಬಲಪಡಿಸುವಲ್ಲಿ ಭಾರತೀಯ ಚಲನಚಿತ್ರ ಮತ್ತು ಮನರಂಜನಾ ಉದ್ಯಮವು ದೇಶದ ಪ್ರಗತಿಗೆ ಮಹತ್ವದ ಕೊಡುಗೆ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' ನ 117 ನೇ ಸಂಚಿಕೆಯಲ್ಲಿ, ಪಿಎಂ ಮೋದಿ ಭಾರತೀಯ ಸಿನೆಮಾದ ಜಾಗತಿಕ ಪ್ರಭಾವವನ್ನು ಎತ್ತಿ ತೋರಿಸಿದರು.
"ನಮ್ಮ ಅನಿಮೇಷನ್ ಚಲನಚಿತ್ರಗಳು, ನಿಯಮಿತ ಚಲನಚಿತ್ರಗಳು ಮತ್ತು ಟಿವಿ ಧಾರಾವಾಹಿಗಳ ಜನಪ್ರಿಯತೆಯು ಭಾರತದ ಸೃಜನಶೀಲ ಉದ್ಯಮದ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ. ಈ ವಲಯವು ದೇಶದ ಪ್ರಗತಿಗೆ ವ್ಯಾಪಕವಾಗಿ ಕೊಡುಗೆ ನೀಡುವುದಲ್ಲದೆ, ನಮ್ಮ ಆರ್ಥಿಕತೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದೆ." ಎಂದು ಪ್ರಧಾನಿ ಬಣ್ಣಿಸಿದರು.
2024 ರಲ್ಲಿ ಶತಮಾನೋತ್ಸವ ಆಚರಿಸುತ್ತಿರುವ ಭಾರತೀಯ ಚಲನಚಿತ್ರೋದ್ಯಮದ ಖ್ಯಾತನಾಮರಿಗೆ ಪ್ರಧಾನಿ ಮೋದಿ ಗೌರವ ಸಲ್ಲಿಸಿದರು.
"ರಾಜ್ ಕಪೂರ್ ಅವರು ಚಲನಚಿತ್ರಗಳ ಮೂಲಕ ಭಾರತದ ಅಂತರ್ಗತ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದರು. ಮೊಹಮ್ಮದ್ ರಫಿ ಸಾಹೇಬ್ ಅವರ ಮಾಂತ್ರಿಕ ಧ್ವನಿ ಇಂದಿಗೂ ಯುವ ಪೀಳಿಗೆಯನ್ನು ಆಕರ್ಷಿಸುತ್ತಿದೆ. ಅಕ್ಕಿನೇನಿ ನಾಗೇಶ್ವರ ರಾವ್ ಅವರು ಭಾರತೀಯ ಸಂಪ್ರದಾಯಗಳು ಮತ್ತು ಮೌಲ್ಯಗಳನ್ನು ಪ್ರದರ್ಶಿಸುವ ಮೂಲಕ ತೆಲುಗು ಚಿತ್ರರಂಗವನ್ನು ಉನ್ನತೀಕರಿಸಿದರು. ತಪನ್ ಸಿನ್ಹಾ ಜಿ ಅವರ ಚಲನಚಿತ್ರಗಳು ಸಾಮಾಜಿಕ ಪ್ರಜ್ಞೆ ಮತ್ತು ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸಿ ಹೊಸ ಸಾಮಾಜಿಕ ದೃಷ್ಟಿಕೋನಗಳನ್ನು ನೀಡಿದವು" ಎಂದು ಅವರು ಹೇಳಿದರು.
"ಈ ದಿಗ್ಗಜರು ನಮ್ಮ ಇಡೀ ಚಲನಚಿತ್ರೋದ್ಯಮಕ್ಕೆ ಸ್ಫೂರ್ತಿಯಾಗಿದ್ದಾರೆ. ಅವರ ಕಾಲಾತೀತ ಕಲೆ ಮತ್ತು ಸಮರ್ಪಣೆ ಭಾರತೀಯ ಚಿತ್ರರಂಗಕ್ಕೆ ಜಾಗತಿಕ ಮನ್ನಣೆಯನ್ನು ಗಳಿಸಿ ಕೊಟ್ಟಿದೆ" ಎಂದು ಅವರು ನುಡಿದರು.
ಕ್ರಿಶ್, ತ್ರಿಶ್ ಮತ್ತು ಬಾಲ್ಟಿಬಾಯ್ ನಟಿಸಿರುವ ಜನಪ್ರಿಯ ಮಕ್ಕಳ ಅನಿಮೇಷನ್ ಸರಣಿ ಕೆಟಿಬಿ ಭಾರತ್ ಹೈ ಹಮ್ನ ಯಶಸ್ಸನ್ನು ಪಿಎಂ ಮೋದಿ ಉಲ್ಲೇಖಿಸಿದರು. ವಿದೇಶಿ ಭಾಷೆಗಳು ಸೇರಿದಂತೆ ಬಹುಭಾಷೆಗಳಲ್ಲಿ ಈ ಸರಣಿಯ ಲಭ್ಯತೆ ಮತ್ತು ದೂರದರ್ಶನ ಮತ್ತು ಒಟಿಟಿ ಚಾನೆಲ್ ಗಳಂತಹ ವೇದಿಕೆಗಳಲ್ಲಿ ಅದರ ಪ್ರಸಾರವನ್ನು ಅವರು ಶ್ಲಾಘಿಸಿದರು.
ವಿಶ್ವ ಆಡಿಯೊ ವಿಷುಯಲ್ ಎಂಟರ್ ಟೈನ್ಮೆಂಟ್ನ ಪ್ರಥಮ ಶೃಂಗಸಭೆ (ವೇವ್ಸ್) ಭಾರತದಲ್ಲಿ ನಡೆಯಲಿದೆ ಎಂದು ಘೋಷಿಸಿದ ಪ್ರಧಾನಿ ಮೋದಿ, "ಈ ಶೃಂಗಸಭೆಯು ಸೃಜನಶೀಲ ಮನಸ್ಸುಗಳ ಜೊತೆಗೆ ಜಾಗತಿಕ ಮಾಧ್ಯಮ ಮತ್ತು ಮನರಂಜನಾ ದೈತ್ಯರನ್ನು ಭಾರತಕ್ಕೆ ಕರೆತರುತ್ತದೆ. ದಾವೋಸ್ ಆರ್ಥಿಕ ವಿಷಯಗಳ ಕೇಂದ್ರವಾಗಿರುವ ರೀತಿಯಲ್ಲಿಯೇ ವೇವ್ಸ್ ಶೃಂಗಸಭೆಯು ಭಾರತವನ್ನು ಜಾಗತಿಕ ಕಂಟೆಂಟ್ ಕ್ರಿಯೇಶನ್ ಕೇಂದ್ರವನ್ನಾಗಿಸಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ : ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ನಂಬರ್ 1 ಟ್ರೆಂಡಿಂಗ್‌ನಲ್ಲಿದೆ 'ಬಘೀರ': ಕನ್ನಡ ಸಿನಿಮಾಗೆ ಹಿಂದಿ ಪ್ರೇಕ್ಷಕರೂ ಫಿದಾ - BAGHEERA