ಚಂಡೀಗಢ : ಬಹುಕೋಟಿ ಮೌಲ್ಯದ ಡ್ರಗ್ಸ್ ದಂಧೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪಂಜಾಬಿನ ಮಾಜಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ ಪಿ) ಮತ್ತು ಅಂತಾರಾಷ್ಟ್ರೀಯ ಕುಸ್ತಿಪಟು ಜಗದೀಶ್ ಭೋಲಾ ಅವರಿಗೆ ಮೊಹಾಲಿಯ ವಿಶೇಷ ಸಿಬಿಐ ನ್ಯಾಯಾಲಯ ಮಂಗಳವಾರ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಪ್ರಕರಣದಲ್ಲಿ ಇತರ ಅಪರಾಧಿಗಳಾದ ಅವತಾರ್ ಸಿಂಗ್ ತಾರೋ, ಸಂದೀಪ್ ಕೌರ್, ಜಗ್ಮಿಂದರ್ ಕೌರ್, ಗುರ್ಪ್ರೀತ್ ಕೌರ್, ಗುರ್ಮೀತ್ ಕೌರ್, ಸುಖ್ ಜೀತ್ ಸಿಂಗ್ ಸುಖಾ, ಸುಖರಾಜ್ ಸಿಂಗ್, ಗುರ್ದೀಪ್ ಸಿಂಗ್ ಮಂಚಂದಾ, ಅಮರ್ಜಿತ್ ಕೌರ್, ದೇವಿಂದರ್ ಸಿಂಗ್, ಮಣಿಂದರ್ ಸಿಂಗ್, ಸುಭಾಷ್ ಬಜಾಜ್, ಸುನಿಲ್ ಬಜಾಜ್, ಅಂಕುರ್ ಬಜಾಜ್, ದಲೀಪ್ ಸಿಂಗ್ ಮಾನ್ ಮತ್ತು ಮನ್ ಪ್ರೀತ್ ಸಿಂಗ್ ಇವರಿಗೆ 3 ರಿಂದ 10 ವರ್ಷಗಳ ಅವಧಿಯ ಜೈಲು ಶಿಕ್ಷೆ ವಿಧಿಸಲಾಗಿದೆ.
ನ್ಯಾಯಾಲಯವು ಭೋಲಾ ಅವರಿಗೆ 50,000 ರೂ.ಗಳ ದಂಡ ವಿಧಿಸಿದ್ದು, ದಂಡ ಪಾವತಿಸದಿದ್ದರೆ ಮತ್ತೊಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಈ ಹಿಂದೆ, ವಿವಿಧ ಡ್ರಗ್ಸ್ ದಂಧೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಭೋಲಾ ಅವರನ್ನು 2012 ರಲ್ಲಿ ಸೇವೆಯಿಂದ ವಜಾಗೊಳಿಸಲಾಗಿತ್ತು.
ಎಸ್ಎಡಿ-ಬಿಜೆಪಿ ಸರ್ಕಾರದ ಅಧಿಕಾರಾವಧಿಯಲ್ಲಿ ಪಂಜಾಬಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಎಂಟು ಎಫ್ಐಆರ್ಗಳ ಆಧಾರದ ಮೇಲೆ 2013 ರಲ್ಲಿ ಮನಿ ಲಾಂಡರಿಂಗ್ ತಡೆ ಕಾಯ್ದೆಯಡಿ ತನಿಖೆ ಪ್ರಾರಂಭಿಸಿದ ನಂತರ ಜಾರಿ ನಿರ್ದೇಶನಾಲಯವು ಬಹುಕೋಟಿ ಸಿಂಥೆಟಿಕ್ ನಾರ್ಕೋಟಿಕ್ಸ್ ದಂಧೆಯಲ್ಲಿ 23 ಜನರನ್ನು ಆರೋಪಿಗಳೆಂದು ಹೆಸರಿಸಿತ್ತು. ಈ 23 ಆರೋಪಿಗಳ ಪೈಕಿ ಇಬ್ಬರು ಘೋಷಿತ ಅಪರಾಧಿಗಳಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಭೋಲಾ ಅವರ ಪತ್ನಿ ಗುರ್ ಪ್ರೀತ್ ಕೌರ್ ಸೇರಿದಂತೆ ಇಬ್ಬರು ಮಹಿಳೆಯರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. 2014ರಲ್ಲಿ ಭೋಲಾ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು.
ಪಂಜಾಬ್ ಪೊಲೀಸರು ರಾಜ್ಯದಲ್ಲಿ ನಡೆಯುತ್ತಿದ್ದ ಬಹುಕೋಟಿ ಮೊತ್ತದ ಡ್ರಗ್ಸ್ ದಂಧೆ ಭೇದಿಸಿ, ಆರೋಪಿಗಳಿಂದ ಹೆರಾಯಿನ್, ಮೆಥಾಂಫೆಟಮೈನ್, ಸ್ಯೂಡೋಪೆಡ್ರಿನ್ ಮತ್ತು ಎಫೆಡ್ರಿನ್ ಸೇರಿದಂತೆ ಇತರ ಸಿಂಥೆಟಿಕ್ ಡ್ರಗ್ಸ್ ಮತ್ತು 1,91,64,800 ರೂ.ಗಳ ಭಾರತೀಯ ಕರೆನ್ಸಿ, ಕೆಲ ವಿದೇಶಿ ಕರೆನ್ಸಿ, ಶಸ್ತ್ರಾಸ್ತ್ರಗಳು ಮತ್ತು ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದ್ದರು. 2013 ಮತ್ತು 2014 ರ ನಡುವೆ ಪೊಲೀಸರು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ ಸ್ಟೆನ್ಸಸ್ ಕಾಯ್ದೆ, 1985 ಮತ್ತು ಭಾರತೀಯ ದಂಡ ಸಂಹಿತೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ವಿವಿಧ ವಿಭಾಗಗಳ ಅಡಿ ಪ್ರಕರಣಗಳನ್ನು ದಾಖಲಿಸಿದ್ದರು.