ಶ್ರೀನಗರ(ಜಮ್ಮು ಮತ್ತು ಕಾಶ್ಮೀರ): ಲೋಕಸಭೆ ಚುನಾವಣೆಗೂ ಮುನ್ನವೇ ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರದಲ್ಲೂ ಪಕ್ಷಾಂತರ ಪರ್ವ ಆರಂಭವಾಗಿದೆ. ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಮಾಜಿ ನಾಯಕ ಅರ್ಷಿದ್ ಮೆಹಮೂದ್ ಖಾನ್ ತಮ್ಮ ಹಲವಾರು ಬೆಂಬಲಿಗರೊಂದಿಗೆ ಬುಧವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ರಾಜೌರಿ ಜಿಲ್ಲೆಯ ನೌಶೇರಾದ ದಂಡೇಸರ್ ಗ್ರಾಮದಿಂದ ಅರ್ಷಿದ್ ಮೆಹಮೂದ್ ಖಾನ್ ಮೂರು ಬಾರಿ ಸರಪಂಚ್ ಆಗಿ ಆಯ್ಕೆಯಾಗಿದ್ದರು. 2008ರ ವಿಧಾನಸಭಾ ಚುನಾವಣೆಯಲ್ಲಿ ನೌಶೇರಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಇದೀಗ ಕಮಲ ಪಾಳಯ ಸೇರಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ಮತ್ತು ಮಾಜಿ ಉಪ ಮುಖ್ಯಮಂತ್ರಿ ಕವೀಂದರ್ ಗುಪ್ತಾ ಮತ್ತು ಸಂಸದ ಜುಗಲ್ ಕಿಶೋರ್ ಸೇರಿದಂತೆ ಇತರ ಹಿರಿಯ ನಾಯಕರು ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಈ ವೇಳೆ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ರವೀಂದರ್ ರೈನಾ, ''ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆಯನ್ನು ಘೋಷಿಸುವುದು ಚುನಾವಣಾ ಆಯೋಗದ ಅಧಿಕಾರ. ಆದರೆ, ಈಗಾಗಲೇ ನಾವು ಯಾವುದೇ ಚುನಾವಣೆ ಎದುರಿಸಲು ಸಿದ್ಧರಿದ್ದೇವೆ. ಫೆಬ್ರವರಿ 20ರಂದು ಕೇಂದ್ರಾಡಳಿತ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಆಗ ಅವರು ಜಮ್ಮುವಿನಲ್ಲಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ'' ಎಂದು ತಿಳಿಸಿದರು.
ಮುಂದುವರೆದು, ''ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಮೋದಿ ಬೊಕ್ಕಸವನ್ನೇ ತೆರೆದಿದ್ದಾರೆ. ಶಾಂತಿ ಮತ್ತು ಸಹೋದರತ್ವದ ಮರುಸ್ಥಾಪನೆಯು ಈ ನೆಲ ಜನರಿಗೆ ಅವರು ನೀಡಿದ ದೊಡ್ಡ ಕೊಡುಗೆಯಾಗಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ ಎಂದು ಮಂತ್ರದೊಂದಿಗೆ ಸಮಾಜದ ಎಲ್ಲ ವರ್ಗಗಳಿಗೆ ಮೋದಿ ನ್ಯಾಯ ಒದಗಿಸಿದ್ದಾರೆ'' ಎಂದು ಹೇಳಿದರು.
ಪ್ರಧಾನಿ ಮೋದಿ ಸಮ್ಮುಖದಲ್ಲಿ ಕೆಲವು ಹಿರಿಯ ರಾಜಕೀಯ ನಾಯಕರು ಸಹ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ವದಂತಿ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರೈನಾ, ''ಪಕ್ಷಕ್ಕೆ ಯಾರೇ ಬಂದರೂ ನಾವು ತುಂಬು ಹೃದಯದಿಂದ ಸ್ವಾಗತಿಸುತ್ತೇವೆ'' ಎಂದು ಸ್ಪಪ್ಟಪಡಿಸಿದರು.
ಎರಡು ದಿನಗಳ ಹಿಂದೆಯಷ್ಟೇ ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ನಾಯಕಿ, ಮಾಜಿ ವಿಧಾನ ಪರಿಷತ್ ಸದಸ್ಯೆ ಡಾ.ಶಹನಾಜ್ ಗನೈ ಸಹ ದೆಗಲಿಯಲ್ಲಿ ಬಿಜೆಪಿ ಸೇರಿದ್ದರು. ಆಗ ಅವರೂ ಸಹ ''ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರವು ಕಣಿವೆ ಜನರಿಗಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ'' ಎಂದು ಶ್ಲಾಘಿಸಿದ್ದರು.
ಇದನ್ನೂ ಓದಿ: ಜಮ್ಮು ಕಾಶ್ಮೀರ ವಿಧಾನ ಪರಿಷತ್‌ನ ಮಾಜಿ ಸದಸ್ಯೆ ಶಹನಾಜ್ ಗನೈ ಬಿಜೆಪಿ ಸೇರ್ಪಡೆ