ನಾಗ್ಪುರ(ಮಹಾರಾಷ್ಟ್ರ): ನಾಗ್ಪುರ ನಗರದಲ್ಲಿ ಟ್ರಕ್‌ಗಳು ಮತ್ತು ದ್ವಿಚಕ್ರ ವಾಹನಗಳು ಒಳಗೊಂಡು ಸಂಭವಿಸಿದ ಮೂರು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ದಂಪತಿ, ಯುವತಿ ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ದಂಪತಿ ಸಾವು: ದೇವಾನಂದ್ ಉಕೆ (43) ಮತ್ತು ಅವರ ಪತ್ನಿ ಸೋನಿ ಉಕೆ (39) ಶುಕ್ರವಾರ ರಾತ್ರಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಮನೆಗೆ ಮರಳುತ್ತಿದ್ದರು. ಕಾಮ್‌ಗರ್ ನಗರದ ಸಮೀಪ ಅವರ ಮೋಟಾರ್‌ಸೈಕಲ್‌ಗೆ ವೇಗದೂತ ಟ್ರಕ್ ಡಿಕ್ಕಿಯಾಗಿದೆ. ಪರಿಣಾಮ ದಂಪತಿ ಸ್ಥಳದಲ್ಲೇ ಅಸುನೀಗಿದ್ದಾರೆ. ಸ್ಥಳೀಯರು ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದೆವು. ಬಳಿಕ ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಸಂಬಂಧಿಕರಿಗೆ ಮಾಹಿತಿ ತಲುಪಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದರು.
ಟ್ರಕ್-ಮಿನಿ ಟ್ರಕ್ ಅಪಘಾತ: ಶುಕ್ರವಾರ ತಡರಾತ್ರಿ ಹೊರವರ್ತುಲ ರಸ್ತೆಯ ವಿಹಿರ್‌ಗಾಂವ್ ಸಮೀರ ಟ್ರಕ್ವೊಂದು ಮಿನಿ ಟ್ರಕ್‌ಗೆ ಡಿಕ್ಕಿಯಾಗಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ರಾಹುಲ್ ಸಂತೋಷ್ ರಾವುತ್ (34) ಮತ್ತು ಲಕ್ಷ್ಮಣ್ ದಾದಾಜಿ ಧೆಂಗ್ರೆ (42) ಎಂದು ಗುರುತಿಸಲಾಗಿದೆ.
ಯುವತಿ ಸಾವು: 20 ವರ್ಷದ ಪಿಲಿಯನ್ ರೈಡರ್ ಆಕಾಂಶಾ ಪಾಟೀಲ್ ಎಂಬವರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮಧ್ಯಾಹ್ನ ಪಾರ್ಡಿ ಪ್ರದೇಶದಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಹಿಂದಿನಿಂದ ಬಂದ ಮಿನಿ ಟ್ರಕ್ ಯುವತಿಯ ದೇಹದ ಮೇಲೆ ಹರಿದಿದೆ. ಚಕ್ರದಡಿ ಸಿಲುಕಿದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್ನಿಂದ ಮನೆಗೆ ಬೆಂಕಿ: 5 ಲಕ್ಷ ನಗದು ಸೇರಿ ಲಕ್ಷಾಂತರ ಮೌಲ್ಯದ ವಸ್ತು ಬೆಂಕಿಗಾಹುತಿ
ಪ್ರತ್ಯೇಕ ಬೆಂಕಿ ಅವಘಡ: ಇತ್ತೀಚಿಗೆ ನಾಗ್ಪುರ ಮತ್ತು ಥಾಣೆಯಲ್ಲಿ ಬೆಂಕಿ ಅವಘಡ ಸಂಭವಿಸಿ ಇಬ್ಬರು ಮಕ್ಕಳು ಸೇರಿ ನಾಲ್ವರು ಪ್ರಾಣ ಕಳೆದುಕೊಂಡಿದ್ದರು. ಗಿಟ್ಟಿಖಾಡನ್ ಪೊಲೀಸ್ ಠಾಣಾ ವ್ಯಾಪ್ತಿಯ ಸೆಮಿನರಿ ಹಿಲ್ ಪ್ರದೇಶದಲ್ಲಿ ಜನವರಿ 18ರ ರಾತ್ರಿ 10 ಗಂಟೆಗೆ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿತು. ಮಕ್ಕಳಾದ ದೇವಾಂಶ್ ಮತ್ತು ಪ್ರಭಾಸ್ ಉಯಿಕೆ ಮೃತಪಟ್ಟಿದ್ದರು. ಓರ್ವ ಹುಡುಗಿ ಪ್ರಾಣಾಪಾಯದಿಂದ ಪಾರಾಗಿದ್ದಳು. ಮನೆಯಲ್ಲಿದ್ದ ಶ್ವಾನ ಬೆಂಕಿಗಾಹುತಿಯಾಗಿತ್ತು.