ಛತ್ರಪತಿ ಸಂಭಾಜಿನಗರ (ಮಹಾರಾಷ್ಟ್ರ): ಮಕ್ಕಳು ಆಗಿಲ್ಲ ಎಂದು ಮಂತ್ರವಾದಿ ಬಳಿಗೆ ಹೋದ ಮಹಿಳೆಗೆ ಥಳಿಸಿದ ಆರೋಪ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ಕೇಳಿಬಂದಿದೆ. ಈ ಸಂಬಂಧ ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿ ಬಾಬಾ ಹಕೀಮ್ ಮುಕ್ತಾರ್ ಶೇಖ್ ಮತ್ತು ಆತನ ತಾಯಿ ಅಬೇದಾ ಶೇಖ್ ಎಂಬುವರ ವಿರುದ್ಧ ಗಂಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಂಗಾಪುರ ನಗರದ ನಿವಾಸಿಯಾದ 35 ವರ್ಷದ ವಿವಾಹಿತ ಮಹಿಳೆ ಮಕ್ಕಳಿಲ್ಲದೆ ಬಳಲುತ್ತಿದ್ದರು. ಮದುವೆಯಾಗಿ 13 ವರ್ಷ ಕಳೆದರೂ ಮಕ್ಕಳು ಆಗಿಲ್ಲ. ವಿವಿಧ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆದಿದ್ದರು. ಇದರ ನಡುವೆ 2022ರಲ್ಲಿ ಜಾಮ್‌ಗಾಂವ್ ನಿವಾಸಿ ಮತ್ತು ಸಂಬಂಧಿಯಾದ ಅಬೇದಾ ಶೇಖ್, ಮಹಿಳೆಯರಲ್ಲಿ ಯಾವುದೇ ಸಮಸ್ಯೆ ಇದ್ದರೆ ನನ್ನ ಮಗನ ಬಳಿಗೆ ಬರುತ್ತಾರೆ. ಆತ ಭೂತೋಚ್ಚಾಟನೆ, ಮಾಟಮಂತ್ರದೊಂದಿಗೆ ಪರಿಹಾರ ಮಾಡುತ್ತಾನೆ. ನಿನಗೂ ಸಹ ಖಂಡಿತವಾಗಿಯೂ ಸಹಾಯ ಮಾಡಬಹುದು. ಹಾಗಾಗಿ ನೀನು ಒಮ್ಮೆ ಆತನ ಬಳಿಗೆ ಬಂದು ಮಾರ್ಗದರ್ಶನ ತೆಗೆದುಕೊ ಎಂದು ಮಹಿಳೆಗೆ ಹೇಳಿದ್ದಳು.
ಇದನ್ನು ನಂಬಿದ ಸಂತ್ರಸ್ತೆ ತನ್ನ ಪತಿಯೊಂದಿಗೆ ಬಾಬಾ ಹಕೀಮ್ ಶೇಖ್ ಬಳಿಗೆ ಹೋಗಿದ್ದಳು. ಈ ಮಹಿಳೆಗೆ ದೇಹದಲ್ಲಿ ತೃತೀಯ ಲಿಂಗಿಯ ಆತ್ಮ ನಿನ್ನಲ್ಲಿ ಸೇರಿದೆ. ಇದಕ್ಕೆ ಕೆಲ ದಿನ ಚಿಕಿತ್ಸೆ ನೀಡಬೇಕಾಗುತ್ತದೆ. ಪ್ರತಿ ಸಲ ಹೋದಾಗಲೂ ಇದೇ ರೀತಿ ಕಥೆ ಹೇಳುತ್ತಿದ್ದ. ಇತ್ತೀಚೆಗೆ ಏಪ್ರಿಲ್ 18ರಂದು ಕೂಡ ಮಹಿಳೆ ಮಂತ್ರವಾದಿಯ ಮನೆಗೆ ಹೋಗಿದ್ದಳು. ಈ ವೇಳೆ, ಬಾಯಿಗೆ ಹಸಿಮೆಣಸಿನಕಾಯಿ ಹಾಕಿ, ಕೋಲಿನಿಂದ ತೀವ್ರವಾಗಿ ಥಳಿಸಿ, ಚಿತ್ರಹಿಂಸೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಹೀಗಾಗಿ ಸಂತ್ರಸ್ತ ಮಹಿಳೆ ಗಂಗಾಪುರ ಪೊಲೀಸ್ ಠಾಣೆಗೆ ಏಪ್ರಿಲ್ 26ರಂದು ದೂರು ನೀಡಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಆರಂಭಿಸಲಾಗಿದೆ. ಈ ಘಟನೆಯಲ್ಲಿ ಸಂತ್ರಸ್ತೆ ಮತ್ತು ಆರೋಪಿಗಳು ಪರಸ್ಪರ ಸಂಬಂಧಿಗಳಾಗಿದ್ದಾರೆ ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಸತ್ಯಜಿತ್ ತೈತ್ವಾಲೆ ತಿಳಿಸಿದ್ದಾರೆ.
ಇದನ್ನೂ ಓದಿ: ಅಮಾವಾಸ್ಯೆ ದಿನ ಮನೆ ಮುಂದೆ ಮಾಟಮಂತ್ರ: ಬೆಳಗಾವಿಯಲ್ಲಿ ಬೆಚ್ಚಿಬಿದ್ದ ಕುಟುಂಬಸ್ಥರು