ಏಲೂರು (ಆಂಧ್ರ ಪ್ರದೇಶ): ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ದೇಶದಲ್ಲಿ ಇಂದಿಗೂ ಕುಗ್ರಾಮ ಪ್ರದೇಶಗಳಲ್ಲಿ ಅನೇಕ ಮಂದಿ ಅಗತ್ಯ ವೈದ್ಯಕೀಯ ಸೌಲಭ್ಯಗಳಿಂದ ವಂಚಿತರಾಗುತ್ತಿರುವುದು ಸುಳ್ಳಲ್ಲ. ಅಂತಹದ್ದೇ ಒಂದು ದಾರುಣ ಘಟನೆ ಏಲೂರು ಜಿಲ್ಲೆಯ ಲಚಪೇಟಾ ಬುಡಕಟ್ಟು ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಹೆರಿಗೆ ನೋವಿನಿಂದ ಬಳಲುತ್ತಿದ್ದ ತುಂಬು ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಲು, ವೈದ್ಯಕೀಯ ವಾಹನ ಸೌಲಭ್ಯವಿಲ್ಲದ ಕಾರಣ, ಸಂಬಂಧಿಕರೇ ಆಕೆಯನ್ನು ಹೊರಸಿನ (ಹಗ್ಗದಿಂದ ಹೆಣೆದ ಮಂಚ) ಮೇಲೆ ಹೊತ್ತು ಆರು ಕಿ.ಮೀ ಸಾಗಿದ್ದ ಘಟನೆ ಇದೀಗ ಸದ್ದು ಮಾಡುತ್ತಿದೆ.
ಗ್ರಾಮದ ನಿವಾಸಿ ತುಂಬು ಗರ್ಭಿಣಿಯಾಗಿದ್ದ ದೂಧಿ ಕೋಸಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ತಕ್ಷಣಕ್ಕೆ ಕುಟುಂಬಸ್ಥರು ಅಲ್ಲಿನ ಸ್ಥಳೀಯ ನರ್ಸ್ ಅನ್ನು ಕರೆತಂದಿದ್ದಾರೆ. ನರ್ಸ್ ಇದ್ದರೂ, ಆಕೆಗೆ ತುರ್ತು ವೈದ್ಯಕೀಯ ಸೌಲಭ್ಯ ಬೇಕಾದ ಹಿನ್ನೆಲೆ ಗರ್ಭಿಣಿಯನ್ನು ಅಲ್ಲಿನ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲು ಕುಟುಂಬ ಇನ್ನಿಲ್ಲದ ತೊಂದರೆ ಪಟ್ಟಿದ್ದಾರೆ. ತಕ್ಷಣಕ್ಕೆ ಯಾವುದೇ ಫೀಡರ್ ಅಂಬ್ಯುಲೆನ್ಸ್ ಲಭ್ಯವಾಗಿಲ್ಲ. ಎಷ್ಟೇ ಪ್ರಯತ್ನಿಸಿದರೂ ವಾಹನ ಸಿಗದ ಹಿನ್ನೆಲೆ ಕುಟುಂಬವೂ ಕಂಗಾಲಾಗುವ ಜೊತೆಗೆ ಹತಾಶೆಗೆ ಒಳಗಾಯಿತು.
ಈ ವೇಳೆ ಕೋಸಿಗೆ ಹೆರಿಗೆ ನೋವು ಬೇರೆ ಉಲ್ಬಣಿಸುತ್ತಿದ್ದ ಹಿನ್ನೆಲೆ ಯಾವುದೇ ಪರ್ಯಾಯ ಮಾರ್ಗ ಕಾಣದೇ ಕೋಸಿ ಗಂಡ ಶಿರಾಮಯ್ಯ ದೃಢ ನಿರ್ಧಾರವೊಂದನ್ನು ಮಾಡಿದರು. ಅಂದೆಂದರೆ ಹೆಂಡತಿ ಮಲಗಿದ್ದ ಕಾಟ್ ಅನ್ನೇ ಡೋಲಿ ರೀತಿಯಲ್ಲಿ ಸಿದ್ಧಪಡಿಸಿ, ಸಂಬಂಧಿಕರ ಸಹಾಯದಿಂದ ಹೊತ್ತೊಯ್ಯಲು ನಿರ್ಧರಿಸಿದರು. ಇದಕ್ಕೆ ಇತರೆ ಕುಟುಂಬ ಸದಸ್ಯರು ಕೈ ಜೋಡಿಸಿದರು. ಅದೇ ರೀತಿಯಲ್ಲಿ ಗುಂಡಂಬೋರು ಗ್ರಾಮದವರೆಗೆ ಆರು ಕಿ.ಮೀ ದೂರ ಆಕೆಯನ್ನು ಸಾಗಿಸಿದರು.
ಗುಂಡಂಬೋರು ತಲುಪಿದ ಬಳಿಕ ಅಲ್ಲಿನ ಕುಕುನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೋಸಿಯನ್ನು ಯಶಸ್ವಿಯಾಗಿ ಕುಟುಂಬ ಕರೆದೊಯ್ಯಿತು. ಈ ವೇಳೆ ಹೆರಿಗೆ ನೋವಿನಿಂದ ಬಳಲುತ್ತಿದ್ದ ಕೋಸಿಯ ಆರೋಗ್ಯದ ಕುರಿತು ಆತಂಕವೂ ಎದುರಾಯಿತು. ಆದರೆ, ಕೋಸಿ ಈ ಎಲ್ಲಾ ಕಷ್ಟಗಳ ನಡುವೆ ಆರೋಗ್ಯಯುತ ಮಗುವಿಗೆ ಜನ್ಮ ನೀಡಿದ್ದು, ತಾಯಿಯ ಆರೋಗ್ಯದಿಂದಿದ್ದಾಳೆ.
ಈ ಘಟನೆಯು ಕುಗ್ರಾಮದ ಪ್ರದೇಶಗಳಲ್ಲಿ ಆರೋಗ್ಯ ಮೂಲ ಸೌಕರ್ಯದ ಅಲಭ್ಯತೆ ಕುರಿತು ಕರಾಳ ಮುಖವನ್ನು ಪರಿಚಯಿಸುತ್ತಿದೆ. ಬುಡಕಟ್ಟು ಸಮುದಾಯಗಳು ಎದುರಿಸುತ್ತಿರುವ ಆರೋಗ್ಯ ಅನಾನುಕೂಲತೆ ಬಗ್ಗೆ ಈ ಘಟನೆ ಬೆಳಕು ಚೆಲ್ಲಿದೆ.
ಇದನ್ನೂ ಓದಿ: ಕುಸಿದು ಬಿದ್ದ ಬಾಲಕ, ನಡು ರಸ್ತೆಯಲ್ಲೇ ಸಿಪಿಆರ್ ಮೂಲಕ ಮಗುವಿಗೆ ಮತ್ತೊಂದು ಜನ್ಮಕೊಟ್ಟ ವೈದ್ಯೆ!