ಚೆನ್ನೈ (ತಮಿಳುನಾಡು): ಖಾಸಗಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಉತ್ತಮ ಸಂಬಳ, ಬಡ್ತಿ, ವಾರ್ಷಿಕ ವೇತನ ಹೆಚ್ಚಳ ಮಾಡುವುದೇ ಅಪರೂಪ. ಆದರೆ, ಚೆನ್ನೈನ ಕಂಪನಿಯೊಂದು ತನ್ನ ಸಿಬ್ಬಂದಿಗೆ ಕಾರು, ಬೈಕ್ಗಳನ್ನು ದಸರಾ ಹಬ್ಬದ ಉಡುಗೊರೆಯಾಗಿ ನೀಡಿದೆ. ಇದನ್ನು ಪಡೆದ ಕೆಲಸಗಾರರು ಫುಲ್ ಖುಷ್ ಆಗಿದ್ದಾರೆ.
ಹೌದು, ಚೆನ್ನೈ ಮೂಲದ ಖಾಸಗಿ ಕಂಪನಿಯಾದ ಸ್ಟ್ರಕ್ಚರಲ್ ಸ್ಟೀಲ್ ಡಿಸೈನ್ ಉತ್ತಮ ಸೇವೆ ಸಲ್ಲಿಸಿದ ತನ್ನ ನೌಕರರಿಗೆ 28 ಕಾರು ಮತ್ತು 29 ಬೈಕ್ಗಳನ್ನು ಉಡುಗೊರೆಯಾಗಿ ನೀಡಿದೆ. ಉದ್ಯೋಗಿಗಳ ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸಲು ಅವರನ್ನು ಇದು ಪ್ರೇರೇಪಿಸುತ್ತದೆ.
ಹ್ಯುಂಡೈ, ಟಾಟಾ, ಮಾರುತಿ ಸುಜುಕಿ ಮತ್ತು ಮರ್ಸಿಡಿಸ್ ಬೆಂಜ್‌ನಿಂದ ಹಿಡಿದು ವಿವಿಧ ಹೊಚ್ಚಹೊಸ ಕಾರುಗಳನ್ನು ಉದ್ಯೋಗಿಗಳಿಗೆ ಅವರ ಕಠಿಣ ಪರಿಶ್ರಮ ಮತ್ತು ಬದ್ಧತೆಯನ್ನು ಶ್ಲಾಘಿಸಿ ನೀಡಲಾಗಿದೆ ಎಂದು ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀಧರ್ ಕಣ್ಣನ್ ಮಾತನಾಡಿ, ಕಂಪನಿಯ ಯಶಸ್ಸಿನಲ್ಲಿ ದುಡಿದ ನಮ್ಮ ನೌಕರರ ಪ್ರಯತ್ನಗಳಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಲು ಬಯಸಿದ್ದೇವೆ. ನಮ್ಮ ಉದ್ಯೋಗಿಗಳೇ ನಮ್ಮ ದೊಡ್ಡ ಆಸ್ತಿ. ಅವರ ಕಾರ್ಯಕ್ಷಮತೆ, ಸೇವೆಯ ಆಧಾರದ ಮೇಲೆ ಕಾರು, ಬೈಕ್ ಅನ್ನು ಉಡುಗೊರೆಯಾಗಿ ನೀಡಲಾಗಿದೆ ಎಂದರು.
ಕಂಪನಿಯು 180 ಉದ್ಯೋಗಿಗಳನ್ನು ಹೊಂದಿದೆ. ಎಲ್ಲರೂ ಹೆಚ್ಚು ನುರಿತವರಾಗಿದ್ದಾರೆ. ಕಾರು ಅಥವಾ ಬೈಕ್ ಖರೀದಿಸುವುದು ನೌಕರರ ಕನಸಾಗಿರುತ್ತದೆ. ಇದನ್ನು ನಾವು ಈಡೇರಿಸಿದ್ದೇವೆ. 2022 ರಲ್ಲಿ ಕಂಪನಿಯು ಇಬ್ಬರು ಹಿರಿಯ ಸಹೋದ್ಯೋಗಿಗಳಿಗೆ ಕಾರನ್ನು ಉಡುಗೊರೆಯಾಗಿ ನೀಡಿತ್ತು. ಈ ವರ್ಷ 28 ಕಾರುಗಳು ಮತ್ತು 29 ಬೈಕ್ಗಳನ್ನು ನೀಡಲಾಗಿದೆ ಎಂದರು.
ಮದುವೆಗೂ ಸಹಾಯಧನ: ಇದರ ಜೊತೆಗೆ, ಕಂಪನಿಯು ಉದ್ಯೋಗಿಗಳಿಗೆ ಮದುವೆಗೂ ನೆರವು ನೀಡುತ್ತಿದೆ. ಉದ್ಯೋಗಿ ಮದುವೆಯಾದಲ್ಲಿ ಅವರಿಗೆ 50 ಸಾವಿರ ರೂ.ಗಳನ್ನು ಸಹಾಯವಾಗಿ ನೀಡುತ್ತಿದ್ದೆವು. ಈ ವರ್ಷದಿಂದ 1 ಲಕ್ಷಕ್ಕೆ ಹೆಚ್ಚಿಸಿದ್ದೇವೆ ಎಂದು ಅವರು ಹೇಳಿದರು.
ಇದನ್ನೂ ಓದಿ: ವ್ಯಕ್ತಿಯ ಕರುಳಿನಲ್ಲಿದ್ದ ಜೀವಂತ ಜಿರಳೆ ಹೊರತೆಗೆದ ವೈದ್ಯರು: ಜಂತು ಹೊಟ್ಟೆ ಹೊಕ್ಕಿದ್ದೇ ಅಚ್ಚರಿ!