ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಇಂದು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ಪ್ರಕ್ರಿಯೆಯಂತೆ ಇಂದು ಬೆಳಗ್ಗೆ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಅವರನ್ನು ಭೇಟಿಯಾದ ಅವರು, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿ ಮೂರು ದಿನವಾದರೂ ಸಿಎಂ ಅಭ್ಯರ್ಥಿ ಯಾರು ಎಂಬ ಕುರಿತು ಮಹಾಯುತಿ ಮೈತ್ರಿಯಲ್ಲಿ ಅಭ್ಯರ್ಥಿ ಅಧಿಕೃತವಾಗದ ಹಿನ್ನೆಲೆಯಲ್ಲಿ, ಮುಂದಿನ ಸಿಎಂ ಪ್ರಮಾಣವಚನದವರೆಗೆ ಹಂಗಾಮಿ ಸಿಎಂ ಆಗಿರುವಂತೆ ರಾಜ್ಯಪಾಲರು ಶಿಂಧೆ ಅವರಿಗೆ ಸೂಚಿಸಿದ್ದಾರೆ.
ಶಿಂಧೆ ರಾಜೀನಾಮೆ ನೀಡುವ ವೇಳೆ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಜೊತೆಗಿದ್ದರು. ಮಹಾರಾಷ್ಟ್ರ ವಿಧಾನಸಭೆ ಅವಧಿ ನವೆಂಬರ್ 26 ಅಂದರೆ ಇಂದಿಗೆ ಮುಗಿಯಲಿದೆ.
ರಾಜೀನಾಮೆಗೂ ಮುನ್ನ ಶಿಂಧೆ, ರಾಜ್ಯಪಾಲರೊಂದಿಗೆ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಉಗ್ರರ ವಿರುದ್ಧ ಹೋರಾಡಿ ಮಡಿದ ಹುತಾತ್ಮಕರಿಗೆ ಗೌರವ ನಮನ ಸಲ್ಲಿಸಿದರು.
ಬಿಜೆಪಿ, ಶಿಂಧೆ ನೇತೃತ್ವದ ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ ಎನ್ಸಿಪಿಯ ಮಹಾಯುತಿ ಮೈತ್ರಿ ಮಹಾರಾಷ್ಟ್ರ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿದೆ. 288 ಸ್ಥಾನದಲ್ಲಿ 230 ಸ್ಥಾನಗಳನ್ನು ಮೈತ್ರಿ ಗೆದ್ದಿದೆ.
ಶಿಂಧೆಯೇ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು ಎಂಬ ಶಿವಸೇನಾ ನಾಯಕರ ಬೇಡಿಕೆಯ ನಡುವೆ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಫಡ್ನವೀಸ್ ಅವರನ್ನು ಸಿಎಂ ಮಾಡಬೇಕು ಎಂದು ಬಯಸಿದ್ದಾರೆ.
ಶಿವಸೇನೆ ಈಗಾಗಲೇ ತಮ್ಮ ಶಾಸಕಾಂಗ ಪಕ್ಷದ ನಾಯಕನಾಗಿ ಶಿಂಧೆ ಅವರನ್ನು ಆಯ್ಕೆ ಮಾಡಿದ್ದು, ಸರ್ಕಾರ ರಚನೆಯ ಜೊತೆಗೆ ಪಕ್ಷದ ಎಲ್ಲಾ ನಿರ್ಧಾರಗಳನ್ನು ಕೈಗೊಳ್ಳುವ ಹೊಣೆ ನೀಡಿದೆ. ಅದೇ ರೀತಿ, ಎನ್ಸಿಪಿ ಶಾಸಕರು ಕೂಡ ತಮ್ಮ ಶಾಸಕಾಂಗ ಪಕ್ಷದ ನಾಯಕನಾಗಿ ಅಜಿತ್ ಪವಾರ್ ಆಯ್ಕೆ ಮಾಡಿದೆ. ಈ ನಡುವೆ ಎನ್ಸಿಪಿ ಕೂಡ ಫಡ್ನವೀಸ್ ಸಿಎಂ ಆಗಿ ಆಯ್ಕೆಯಾಗಲು ಬೆಂಬಲ ನೀಡುವುದಾಗಿ ಘೋಷಿಸಿದೆ.
ಆದರೆ ಬಿಜೆಪಿ ಮಾತ್ರ ಇನ್ನೂ ತಮ್ಮ ಶಾಸಕಾಂಗ ಪಕ್ಷದ ಸಭೆ ನಡೆಸಿ, ನಾಯಕನ ಆಯ್ಕೆ ಮಾಡಿಲ್ಲ. ಶಿಂಧೆ, ಫಡ್ನವೀಸ್ ಮತ್ತು ಅಜಿತ್ ಪವರ್ ಬಿಜೆಪಿ ಹೈಕಮಾಂಡ್ ಸೇರಿದಂತೆ ಗೃಹ ಸಚಿವ ಅಮಿತ್ ಶಾ ಭೇಟಿಯಾಗಬೇಕಿದ್ದು, ಆ ಬಳಿಕವೇ ಸಚಿವ ಸಂಪುಟ ರಚನೆ ಕಸರತ್ತು ಮತ್ತು ಸಿಎಂ ಅಭ್ಯರ್ಥಿ ಅಂತಿಮವಾಗಲಿದೆ. (ಪಿಟಿಐ/ಐಎಎನ್ಎಸ್)
ಇದನ್ನೂ ಓದಿ: ಮಹಾರಾಷ್ಟ್ರ ಸಿಎಂ ಆಯ್ಕೆ ಕಗ್ಗಂಟು: ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಚರ್ಚೆ