ಗೊಡ್ಡ (ಜಾರ್ಖಂಡ್): ಶಿಕ್ಷಕನೊಬ್ಬ ಸಹ ಶಿಕ್ಷಕರನ್ನು ಗುಂಡಿಕ್ಕಿ ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಇಲ್ಲಿಯ ಪೊದಯ್ಯಹತ್ ಪೊಲೀಸ್ ಠಾಣೆ ವ್ಯಾಪ್ತಿಯ ಛತ್ರ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದಿದೆ. ಘಟನೆಯಲ್ಲಿ ಸುಜಾತಾ ದೇವಿ ಮತ್ತು ಆದೇಶ್ ಸಿಂಗ್ ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ರವಿರಂಜನ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತ್ರಿಕೋನ ಪ್ರೇಮ ಪ್ರಕರಣಕ್ಕಾಗಿ ಈ ಘಟನೆ ನಡೆದಿದೆ ಎಂದು ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರು ಶಂಕಿಸಿದ್ದಾರೆ.
ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ನಾಥು ಸಿಂಗ್ ಮೀನಾ ಮಾಹಿತಿ ನೀಡಿದ್ದು, ಪೊರಿಯಾಹತ್‌ನಲ್ಲಿರುವ ಗ್ರಂಥಾಲಯದಲ್ಲಿ ನಡೆದಿದೆ. 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಗುಂಡೇಟಿನ ಶಬ್ದ ಕೇಳಿ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹೊರ ಬಂದು ನೋಡಿದಾಗ ಘಟನೆ ಬಗ್ಗೆ ತಿಳಿದು ಬಂದಿದೆ. ಇದಾದ ಬಳಿಕ, ಇನ್ನುಳಿದ ಸಹ ಶಿಕ್ಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಬಂದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಅಷ್ಟರಲ್ಲಾಗಲೇ ಇಬ್ಬರೂ ಶಿಕ್ಷಕರು ಮೃತಪಟ್ಟಿದ್ದಾರೆ. ಶಿಕ್ಷಕರ ಶವಗಳು ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿದೆ.
ಮತ್ತೊಂದೆಡೆ ಆರೋಪಿ ಶಿಕ್ಷಕ ಕೂಡ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು ಆರೋಪಿಯ ಸ್ಥಿತಿ ಚಿಂತಾಜನಕವಾಗಿದೆ. ಆರೋಪಿ ಶಿಕ್ಷಕ ತನ್ನ ತಲೆಯ ಬಲಭಾಗಕ್ಕೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮೇಲ್ನೋಟಕ್ಕೆ ಇದು ತ್ರಿಕೋನ ಪ್ರೇಮ ಪ್ರಕರಣದಂತೆ ಕಾಣುತ್ತಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಪೊಲೀಸರ ತನಿಖೆ ಬಳಿಕ ಸಹ ಶಿಕ್ಷಕರ ಮೇಲಿನ ಗುಂಡಿನ ದಾಳಿಗೆ ನಿಖರ ಕಾರಣ ತಿಳಿದು ಬರಲಿದೆ. ಈ ನಡುವೆ ಸಹ ಶಿಕ್ಷಕರನ್ನು ಕೊಂದ ಆರೋಪಿ ಕೂಡಾ ಸಾವು -ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ. ಇವರ ಚೇತರಿಕೆ ಬಳಿಕವೇ ನಿಖರ ಕಾರಣ ಪತ್ತೆಯಾಗಲಿದೆ.
ಇದನ್ನೂ ಓದಿ: ಬಿಜೆಪಿ ನಾಯಕನ ಹತ್ಯೆ ಪ್ರಕರಣ: 15 ಪಿಎಫ್ಐ ಕಾರ್ಯಕರ್ತರಿಗೆ ಮರಣದಂಡನೆ ಶಿಕ್ಷೆ ಆದೇಶ