ನವದೆಹಲಿ: ಬಂಗಾಳದ ಆರ್.ಜಿ.ಕರ್ ಆಸ್ಪತ್ರೆಯಲ್ಲಿ ವೈದ್ಯೆ ವಿದ್ಯಾರ್ಥಿನಿಯ ಅತ್ಯಾಚಾರ, ಹತ್ಯೆ ಪ್ರಕರಣ ವಿರೋಧಿಸಿ ಕೆಲವು ದಿನಗಳಿಂದ ಧರಣಿ ನಡೆಸುತ್ತಿದ್ದ ವೈದ್ಯರು ಕೊನೆಗೂ ಸುಪ್ರೀಂ ಕೋರ್ಟ್ ಸಲಹೆಯ ಬಳಿಕ ಮುಷ್ಕರವನ್ನು ಗುರುವಾರ ಹಿಂಪಡೆದಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿ ಉನ್ನತ ನ್ಯಾಯಾಲಯ ಭರವಸೆ ನೀಡಿದೆ.
ವೈದ್ಯರ ಬೇಡಿಕೆ ಮತ್ತು ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ವಿಧಿಸುವ ಬಗ್ಗೆ ಭರವಸೆ ಸಿಕ್ಕ ಬಳಿಕ ಪ್ರತಿಭಟನೆ ವಾಪಸ್ ಪಡೆಯಲಾಗಿದೆ. ಆಗಸ್ಟ್ 23ರಂದು ಬೆಳಿಗ್ಗೆ 8 ಗಂಟೆಯಿಂದ ಸೇವೆಯನ್ನು ಮರು ಆರಂಭಿಸಲಾಗುವುದು ಎಂದು ವೈದ್ಯಕೀಯ ಸಂಘ ತಿಳಿಸಿದೆ.
In view of the developments with respect to our demands, and our concerns being addressed by the Supreme Court, we hereby declare the strike to be withheld. We hereby have decided to resume all our duties. Recent mishappening at RG Kar Medical College highlighted the sorry state… pic.twitter.com/vwGL9UlXQX
— ANI (@ANI) August 22, 2024
ಈ ಬಗ್ಗೆ ಪ್ರಕಟಣೆ ಬಿಡುಗಡೆ ಮಾಡಿರುವ ಡಾ.ಆರ್.ಎಂ.ಎಲ್.ಆಸ್ಪತ್ರೆ ವೈದ್ಯರ ಸಂಘವು, ಸುಪ್ರೀಂಕೋರ್ಟ್ ತಮ್ಮ ಬೇಡಿಕೆಗಳು ಮತ್ತು ಕಾಳಜಿಯನ್ನು ಅರ್ಥ ಮಾಡಿಕೊಂಡಿದೆ. ಕೋರ್ಟ್ನ ಮೇಲಿನ ನಂಬಿಕೆಯಿಂದಾಗಿ ಮುಷ್ಕರ ಅಂತ್ಯಗೊಳಿಸುತ್ತಿದ್ದೇವೆ. ವೈದ್ಯರು ನಾಳೆಯಿಂದ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. 11 ದಿನಗಳ ಮುಷ್ಕರ ಅಂತ್ಯವಾಗಲಿದೆ ಎಂದು ತಿಳಿಸಿದೆ.
ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವ ಮೂಲಕ ಕೋಲ್ಕತ್ತಾ ಹೈಕೋರ್ಟ್ ನಮ್ಮ ಮೊದಲ ಬೇಡಿಕೆಯನ್ನು ಈಡೇರಿಸಿದೆ. ಬಳಿಕ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಕೊಲೆ ಕೇಸ್ ಅನ್ನು ತನಿಖೆ ನಡೆಸುತ್ತಿದೆ. ಹೀಗಾಗಿ ವೈದ್ಯರ ಮುಷ್ಕರವನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಯುತ್ತದೆ ಎಂದು ದೆಹಲಿಯ ಏಮ್ಸ್ ಆಸ್ಪತ್ರೆಯ ಜನರಲ್ ಸೆಕ್ರೆಟರಿ ರಘುನಂದನ್ ದೀಕ್ಷಿತ್ ಅವರು ಹೇಳಿದ್ದಾರೆ.
#WATCH | RDA AIIMS Delhi calls off their 11-day strike.
— ANI (@ANI) August 22, 2024
Dr Raghunandan Dixit, RDA AIIMS Delhi General Secretary says, " we were on a strike for the past 11 days. after that, court intervened twice. it did provide us with some relief. high court fulfilled our first demand and… pic.twitter.com/HNeX9rRPov
ಕೆಲಸಕ್ಕೆ ಮರಳಲು ಸೂಚಿಸಿದ್ದ ಸುಪ್ರೀಂ: ಇದಕ್ಕೂ ಮುನ್ನ, ಸುಪ್ರೀಂ ಕೋರ್ಟ್ ಗುರುವಾರ ಬಂಗಾಳ ವೈದ್ಯೆ ವಿದ್ಯಾರ್ಥಿನಿಯ ಪ್ರಕರಣವನ್ನು ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ಈ ವೇಳೆ ವೈದ್ಯರು ಕೆಲಸ ಬಿಟ್ಟು ಪ್ರತಿಭಟನೆ ಮಾಡುತ್ತಿರುವುದಕ್ಕೆ ಬೇಸರಿಸಿ, ಆರೋಗ್ಯ ವ್ಯವಸ್ಥೆ ಕಾಪಾಡಲು ವೈದ್ಯರು ತಕ್ಷಣವೇ ಹೋರಾಟ ನಿಲ್ಲಿಸಿ ಕರ್ತವ್ಯಕ್ಕೆ ಹಾಜರಾಗಿ ಎಂದು ಸೂಚಿಸಿತ್ತು. ಮುಷ್ಕರದಿಂದ ರೋಗಿಗಳು ಎದುರಿಸುವ ಸಮಸ್ಯೆಗಳ ಬಗ್ಗೆ ವೈದ್ಯ ಸಂಘ ಯೋಚಿಸಬೇಕು ಎಂದು ಕೋರ್ಟ್ ಹೇಳಿತ್ತು.
ವೈದ್ಯರು ಪ್ರತಿಭಟನೆ ನಡೆಸುತ್ತಿರುವ ವೇಳೆ ಹಾಕಿರುವ ಎಫ್‌ಐಆರ್‌ಗಳನ್ನು ರದ್ದು ಮಾಡಬೇಕಾದರೆ, ಮೊದಲು ಕರ್ತವ್ಯಕ್ಕೆ ಮರಳಿ ಎಂದು ಕೋರ್ಟ್ ಇದೇ ವೇಳೆ ಹೇಳಿತು. ಹೋರಾಟದ ವೇಳೆ ಹಾಕಲಾಗಿರುವ ಪ್ರಕರಣಗಳನ್ನು ವಾಪಸ್ ಪಡೆಯುವ ಬಗ್ಗೆ ಪರಿಶೀಲಿಸಲಾಗುವುದು. ಜೊತೆಗೆ ವೈದ್ಯರ ಸುರಕ್ಷತೆಗಾಗಿ ಎರಡು ವಾರಗಳಲ್ಲಿ ಕ್ರಮ ತೆಗೆದುಕೊಳ್ಳಲು ರಾಜ್ಯ ಸರ್ಕಾರಗಳಿಗೆ ಆದೇಶಿಸಿತು. ಬಳಿಕ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 5ಕ್ಕೆ ಮುಂದೂಡಿತು.
ಸಿಬಿಐ ಹೇಳಿದ್ದೇನು?: ಮತ್ತೊಂದೆಡೆ, ವೈದ್ಯೆ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಪ್ರಕರಣದ ಬಗ್ಗೆ ಸಿಬಿಐ ಸುಪ್ರೀಂಕೋರ್ಟ್ಗೆ ಮಾಹಿತಿ ನೀಡಿದೆ. ಪ್ರಕರಣ ಹಸ್ತಾಂತರಿಸುವ ವೇಳೆಗೆ ಅಪರಾಧದ ದೃಶ್ಯವೇ ಬದಲಾಗಿದೆ. ಇದರಿಂದ ತನಿಖೆ ಸವಾಲಾಗಿ ಪರಿಣಮಿಸಿದೆ ಎಂದು ವರದಿಯಲ್ಲಿ ಹೇಳಿದೆ. ಈ ವೇಳೆ ಕೋಲ್ಕತ್ತಾ ಪೊಲೀಸರ ವರ್ತನೆಗೆ ಸುಪ್ರೀಂ ಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. ಪ್ರಕರಣ ಸಂಭವಿಸಿ 14 ಗಂಟೆ ಕಳೆದರೂ ಎಫ್‌ಐಆರ್ ಯಾಕೆ ದಾಖಲಿಸಲಿಲ್ಲ ಎಂದು ಬಂಗಾಳ ಸರ್ಕಾರವನ್ನು ಪ್ರಶ್ನಿಸಿದೆ.
ಇದನ್ನೂ ಓದಿ: ಪ್ರತಿಭಟನೆ ಬಿಟ್ಟು ಕೆಲಸಕ್ಕೆ ಮರಳಿ; ವೈದ್ಯರಿಗೆ ಸುಪ್ರೀಂಕೋರ್ಟ್ ಸೂಚನೆ - SC Ask doctors to resume work