ನವದೆಹಲಿ: ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ ಕೋವಿಡ್ ಸಾಂಕ್ರಾಮಿಕ ಕಳೆದು ನಾಲ್ಕು ವರ್ಷದ ಬಳಿಕ ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ (ಎಚ್ಎಂಪಿವಿ) ಎಂಬ ಮತ್ತೊಂದು ವೈರಸ್ ಇದೀಗ ಆತಂಕ ಮೂಡಿಸುತ್ತಿದೆ. ಕೊರೊನಾ ವೈರಸ್ ಲಕ್ಷಣಗಳನ್ನೇ ಹೊಂದಿರುವ ಈ ಸೋಂಕು ಈಗಾಗಲೇ ನೆರೆಯ ದೇಶದಲ್ಲಿ ಆಂತಕ ಹೆಚ್ಚಿಸಿದೆ. ಈ ಸಂಬಂಧ ಭಾರತದಲ್ಲೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ದೆಹಲಿ ಆರೋಗ್ಯ ಅಧಿಕಾರಿಗಳು ಸಂಭಾವ್ಯ ಆರೋಗ್ಯ ಸವಾಲುಗಳನ್ನು ಎದುರಿಸಲು ಭಾನುವಾರ ಮಾರ್ಗಸೂಚಿ ಪ್ರಕಟಿಸಿದರು.
ಇದಕ್ಕೂ ಮುನ್ನ, ಆರೋಗ್ಯ ಸೇವೆಗಳ ಮಹಾನಿರ್ದೇಶಕಿ ಡಾ.ವಂದನಾ ಬಗ್ಗಾ, ಜಿಲ್ಲಾ ಮುಖ್ಯ ವೈದ್ಯಕೀಯ ಅಧಿಕಾರಿಗಳು ಮತ್ತು ಐಡಿಎಸ್ಪಿಯ ರಾಜ್ಯ ಕಾರ್ಯಕ್ರಮಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ ಸೋಂಕಿನಿಂದ ಎದುರಾಗುವ ಉಸಿರಾಟ ಸಮಸ್ಯೆಗಳ ಕುರಿತು ಚರ್ಚಿಸಿದ್ದಾರೆ.
ಈ ಸಭೆಯಲ್ಲಿ ಮಾಡಲಾದ ಶಿಫಾರಸಿನಂತೆ ಸೌಮ್ಯ ಜ್ವರ, ಕೆಮ್ಮು ಮತ್ತು ಶೀತ, ಉಸಿರಾಟ ಸಮಸ್ಯೆ ಸೇರಿದಂತೆ ಇನ್ಫುಯೆಂಜಾ ರೀತಿಯ ಅನಾರೋಗ್ಯ ಮತ್ತು ತೀವ್ರ ಉಸಿರಾಟ ಸೋಂಕುಗಳಲ್ಲಿ ಐಎಚ್ಐಪಿ ಪೋರ್ಟ್ ಮೂಲಕ ವರದಿ ಮಾಡುವಂತೆ ಸೂಚಿಸಲಾಗಿದೆ.
ಸೋಂಕು ಕಂಡುಬಂದಲ್ಲಿ ಕಡ್ಡಾಯ ಐಸೋಲೇಷನ್: ಶಂಕಿತ ಸೋಂಕು ಕಂಡುಬಂದಲ್ಲಿ ಆ ಪ್ರಕರಣದಲ್ಲಿ ಕಟ್ಟುನಿಟ್ಟಿನ ಐಸೋಲೇಷನ್ ಮಾರ್ಗಸೂಚಿ ಮತ್ತು ಮನ್ನೆಚ್ಚರಿಕಾ ಕ್ರಮಗಳ ಪಾಲನೆ ಕಡ್ಡಾಯವಾಗಿದೆ. ಆಸ್ಪತ್ರೆಗಳು ಎಸ್ಎಆರ್ಐ (ಶ್ವಾಸಕೋಶ ಸಂಬಂಧಿ ಸೋಂಕು) ಕುರಿತು ಸರಿಯಾದ ದಾಖಲೀಕರಣ ಮತ್ತು ಪ್ರಯೋಗಾಲಯದಲ್ಲಿ ದೃಢಪಟ್ಟ ಇನ್ಫುಯೆಂಜಾ ಪ್ರಕರಣಗಳನ್ನು ಸರಿಯಾಗಿ ನಿರ್ವಹಣೆ ಮಾಡುವುದನ್ನು ಖಾತ್ರಿ ಮಾಡಬೇಕಿದೆ. ಹಾಗೆಯೇ ಪ್ಯಾರಸಿಟಮಾಲ್, ಆ್ಯಂಟಿಹಿಸತಮೈನಸ್, ಬ್ರೊಂಕೊಂಡಿಲಟೊರ್ಸ್ ಹಾಗೂ ಕೆಮ್ಮಿನ ಸಿರಪ್ಗಳು ಲಭ್ಯವಿರುವಂತೆ ನೋಡಿಕೊಳ್ಳಬೇಕಿದೆ.
ಇಂಟಿಗ್ರೇಟೆಡ್ ಡಿಸೀಸ್ ಸರ್ವೆಲೆನ್ಸ್ ಪ್ರೋಗ್ರಾಂ (ಐಡಿಎಸ್ಪಿ) ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (ಎನ್ಸಿಡಿಸಿ) ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) 2025ರ ಜನವರಿ 2ರಂದು ನೀಡಿದ ಮಾಹಿತಿ ಪ್ರಕಾರ, ಉಸಿರಾಟದ ಕಾಯಿಲೆಗಳಲ್ಲಿ ಯಾವುದೇ ಗಮನಾರ್ಹ ಏರಿಕೆಯ ಅನುಪಸ್ಥಿತಿಯನ್ನು ದೃಢೀಕರಿಸುತ್ತವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ (ಎಚ್ಐಪಿವಿ) ಎಂಬುದು ಉಸಿರಾಟಕ್ಕೆ ಸಂಬಂಧಿಸಿದ ವೈರಸ್ ಆಗಿದ್ದು ಸೌಮ್ಯ ಜ್ವರ, ಶೀತ, ಕೆಮ್ಮಿನ ರೋಗಲಕ್ಷಣಗಳು ಕಂಡುಬರುತ್ತವೆ. ಆದರೆ ಮಕ್ಕಳು, ವೃದ್ಧರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಇದರಿಂದ ಬ್ರಾಂಕೈಟಿಸ್ ಮತ್ತು ನ್ಯುಮೋನಿಯಾದಂತಹ ತೀವ್ರ ಲಕ್ಷಣಗಳು ಕಾಣಿಸುತ್ತವೆ.(ಪಿಟಿಐ)
ಇದನ್ನೂ ಓದಿ: ಕರ್ನಾಟಕದಲ್ಲಿ 2 ಹೆಚ್‌ಎಂಪಿವಿ ಸೋಂಕಿತ ಪ್ರಕರಣ ಪತ್ತೆ ಹಚ್ಚಿದ ICMR; ಮಧ್ಯಾಹ್ನ ಆರೋಗ್ಯ ಇಲಾಖೆ ಸಭೆ