ನವದೆಹಲಿ: ಬಂಗಾಳಕೊಲ್ಲಿಯಲ್ಲಿ ಆರಂಭವಾದ ರೆಮಲ್ ಚಂಡಮಾರುತ ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳದ ಗಡಿ ದಾಟಿದ ನಂತರ ಭಾರೀ ಹಾನಿ ಉಂಟುಮಾಡಿದೆ. ಚಂಡಮಾರುತ ಕರಾವಳಿ ದಾಟುತ್ತಿದ್ದಂತೆ ಪಶ್ಚಿಮ ಬಂಗಾಳದಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಗಂಟೆಗೆ 135 ಕಿ.ಮೀ ವೇಗದಲ್ಲಿ ಚಂಡಮಾರುತ ಬೀಸಿದ್ದರಿಂದ ನೂರಾರು ಮರಗಳು ಧರೆಗುರುಳಿವೆ. ಸಾಮಾನ್ಯ ರೈಲು ಮತ್ತು ಮೆಟ್ರೋ ರೈಲು ಸೇವೆಗಳು ಅಸ್ತವ್ಯಸ್ತಗೊಂಡಿವೆ. ಕೋಲ್ಕತ್ತಾದ ಹಲವೆಡೆ ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು.
ಸೋಮವಾರ ಬೆಳಿಗ್ಗೆಯಿಂದ ಚಂಡಮಾರುತ ದುರ್ಬಲಗೊಂಡಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರ ಪರಿಣಾಮ ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳು ಕ್ಷೇತ್ರಕ್ಕೆ ಧಾವಿಸಿ ಪರಿಹಾರ ಕಾರ್ಯಾಚರಣೆ ಕೈಗೊಂಡವು. ಚಂಡಮಾರುತಪೀಡಿತ ಪ್ರದೇಶಗಳಿಂದ ಅಧಿಕಾರಿಗಳು ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ.
ಯಾವುದೇ ಪ್ರಾಣಹಾನಿ ಮತ್ತು ಆಸ್ತಿ-ಪಾಸ್ತಿ ನಷ್ಟವಾಗದ ಕಾರಣ ಕರಾವಳಿಯ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಸ್ಥಗಿತಗೊಂಡಿದ್ದ ವಿಮಾನ ಸೇವೆಗಳು 21 ಗಂಟೆಗಳ ನಂತರ ಪುನರಾರಂಭಗೊಂಡವು. ಹಳಿಗಳ ಮೇಲೆ ನೀರು ನಿಂತಿದ್ದರಿಂದ ಹಲವು ಮಾರ್ಗಗಳಲ್ಲಿ ಮೆಟ್ರೊ ಸಂಚಾರ ಸ್ಥಗಿತಗೊಂಡಿದೆ. ರಕ್ಷಣಾ ತಂಡಗಳು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿವೆ.
ಇಬ್ಬರು ಸಾವು: ಕೋಲ್ಕತ್ತಾದ ಮೇಯರ್ ಫರ್ಹಾದ್ ಹಕೀಮ್ ಮಾತನಾಡಿ, ಈ ಹಿಂದೆ ವಿನಾಶವನ್ನು ಸೃಷ್ಟಿಸಿದ ಅಂಪಾನ್ ಚಂಡಮಾರುತಕ್ಕೆ ಹೋಲಿಸಿದರೆ ರೆಮಲ್ ಪ್ರಭಾವ ಕಡಿಮೆ ಎಂದರು. ಬಿದ್ದ ಮರಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಸುಂದರಬನ್ ಪ್ರದೇಶದ ಗೋಸಾಬಾದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಬಾಂಗ್ಲಾದೇಶ ಕೂಡ 8 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ.