ಸಾಗರ್(ಮಧ್ಯ ಪ್ರದೇಶ): ಅಂದಾಜು 12 ಕೋಟಿ ರೂ ಮೌಲ್ಯದ ಆ್ಯಪಲ್ ಐಫೋನ್ಗಳನ್ನು ಸಾಗಿಸುತ್ತಿದ್ದ ಕಂಟೈನರ್‌ವೊಂದನ್ನು ಕಳ್ಳರು ಲೂಟಿ ಮಾಡಿರುವ ಘಟನೆ ಲಖ್ನಾಡನ್-ಝಾನ್ಸಿ ಹೆದ್ದಾರಿಯಲ್ಲಿ ಆಗಸ್ಟ್ 15ರಂದು ನಡೆದಿದೆ. ಕಂಟೈನರ್ ಚಾಲಕನ ಕೈ ಕಾಲು ಕಟ್ಟಿ ಕೃತ್ಯ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚೆನ್ನೈನಿಂದ ದೆಹಲಿಗೆ ತೆರಳುತ್ತಿದ್ದ ಕಂಟೈನರ್ನಲ್ಲಿ ಚಾಲಕ ಮತ್ತು ಸೆಕ್ಯೂರಿಟಿ ಗಾರ್ಡ್ ಇದ್ದರು. ಸೆಕ್ಯೂರಿಟಿ ಗಾರ್ಡ್ ಯುವಕನೊಬ್ಬನನ್ನು ಸಹಚರ ಎಂದು ಹೇಳಿ ಕ್ಯಾಬಿನ್ಗೆ ಹತ್ತಿಸಿಕೊಂಡಿದ್ದಾನೆ. ನರಸಿಂಗಪುರದಲ್ಲಿ ವಾಹನ ನಿಲ್ಲಿಸಿದಾಗ ಸೆಕ್ಯೂರಿಟಿ ಮತ್ತು ಆತನ ಸಹಚರ ಸೇರಿ ಚಾಲಕನಿಗೆ ಮಾದಕ ವಸ್ತು ನೀಡಿ ಜ್ಞಾನ ತಪ್ಪಿಸಿ, ಕಂಟೈನರ್ನಲ್ಲಿದ್ದ ಐಫೋನ್ಗಳನ್ನು ಕದ್ದೊಯ್ದಿದ್ದಾರೆ.
ಕಳ್ಳರು ಕಂಟೈನರ್ ಗೇಟ್ ಅನ್ನು ಎಚ್ಚರದಿಂದ ತೆಗೆದಿದ್ದು, ಬೀಗಕ್ಕೆ ಹಾನಿಯಾಗದಂತೆ ನೋಡಿಕೊಂಡಿದ್ದಾರೆ. ಪೆಟ್ಟಿಗೆಯಲ್ಲಿದ್ದ 1,600 ಐಫೋನ್ಗಳನ್ನು ಮತ್ತೊಂದು ವಾಹನಕ್ಕೆ ವರ್ಗಾಯಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಆರೋಪಿಗಳ ಬಂಧನಕ್ಕೆ ಐದು ಪೊಲೀಸ್ ತಂಡ ರಚಿಸಿದ್ದಾರೆ. ಹೆದ್ದಾರಿಯುದ್ದಕ್ಕೂ ಇರುವ ಟೋಲ್ ಪ್ಲಾಜಾಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ಆ್ಯಪಲ್ ಕಂಪನಿ ಅಧಿಕಾರಿಗಳು, ಸಾರಿಗೆ ಕಂಪನಿ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಯನ್ನು ಪ್ರಶ್ನಿಸಲಾಗಿದೆ. ಮೇವಾಟಿ ಗ್ಯಾಂಗ್ ಕೃತ್ಯ ಎಸಗಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಬಂಧನಕ್ಕೆ ತೀವ್ರ ಶೋಧ ನಡೆಸಲಾಗುತ್ತಿದೆ.
ಇದನ್ನೂ ಓದಿ: ಮೂರು ತಿಂಗಳಲ್ಲಿ ವಂದೇ ಭಾರತ್ ಸ್ಲೀಪರ್ ಕೋಚ್ ರೈಲುಗಳು ಸೇವೆಗೆ ಲಭ್ಯ: ಅಶ್ವಿನಿ ವೈಷ್ಣವ್