ನವದೆಹಲಿ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ. ಇದರಲ್ಲಿ ಪಂಜಾಬ್ ಮತ್ತು ದೆಹಲಿ ಸೇರಿ ಒಟ್ಟು 10 ಲೋಕಸಭಾ ಕ್ಷೇತ್ರಗಳಿಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ದೆಹಲಿಯ ಎಲ್ಲಾ ಮೂರು ಸ್ಥಾನಗಳ ಅಭ್ಯರ್ಥಿಗಳ ಹೆಸರುಗಳೂ ಈ ಪಟ್ಟಿಯಲ್ಲಿ ಸೇರಿವೆ. ಇದರಲ್ಲಿ ಈಶಾನ್ಯ ದೆಹಲಿಯಿಂದ ಕನ್ಹಯ್ಯಾ ಕುಮಾರ್, ಚಾಂದಿನಿ ಚೌಕದಿಂದ ಜೆಪಿ ಅಗರ್ವಾಲ್ ಮತ್ತು ವಾಯವ್ಯ ದೆಹಲಿಯಿಂದ ಉದಿತ್ ರಾಜ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
ಐಎನ್ಡಿಐಎ ಮೈತ್ರಿ ಕೂಟದ ಭಾಗವಾಗಿರುವ ಆಪ್ ಈ ಹಿಂದೆ ನಾಲ್ಕು ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿತ್ತು. ಇದೇ ವೇಳೆ ಬಿಜೆಪಿ ಕೂಡ ಎಲ್ಲಾ ಏಳು ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿತ್ತು. ಇದೀಗ ಕಾಂಗ್ರೆಸ್ ತನ್ನ ಪಟ್ಟಿಯನ್ನು ಪ್ರಕಟಿಸಿದೆ. ಈಶಾನ್ಯ ದೆಹಲಿ ಕ್ಷೇತ್ರದಿಂದ ಕಣಕ್ಕಿಳಿದಿರುವ ಕನ್ಹಯ್ಯಾ ಕುಮಾರ್ ಬಿಜೆಪಿಯ ಮನೋಜ್ ತಿವಾರಿ ಅವರನ್ನು ಎದುರಿಸಲಿದ್ದಾರೆ. ದೆಹಲಿಯ ಮೂವರು ಅಭ್ಯರ್ಥಿಗಳನ್ನು ಹೊರತುಪಡಿಸಿ, ಈ ಪಟ್ಟಿಯಲ್ಲಿ ಪಂಜಾಬ್‌ನ ಆರು ಅಭ್ಯರ್ಥಿಗಳು ಮತ್ತು ಉತ್ತರ ಪ್ರದೇಶದ ಓರ್ವ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಲಾಗಿದೆ.
ಪಂಜಾಬ್ ಕ್ಷೇತ್ರಗಳು: ಅಮೃತಸರದಿಂದ ಗುರುಜೀತ್ ಸಿಂಗ್ ಔಜಿಲಾ, ಜಲಂದ್ಹರ್ (SC) ನಿಂದ ಚರಣ್ಜೀತ್ ಸಿಂಗ್ ಚನ್ನಿ, ಫತ್ತೇಘರ್ (SC)ನಿಂದ ಅಮರ್ ಸಿಂಗ್, ಬಟಿಂಡಾದಿಂದ ಜೀತ್ ಮೋಹಿಂದರ್ ಸಿಂಗ್ ಸಿಧು, ಸಂಗ್ರೂರ್ ಕ್ಷೇತ್ರದಿಂದ ಶುಕ್ಪಾಲ್ ಸಿಂಗ್ ಕೈರಾ, ಪಟಿಯಾಲದಿಂದ ಡಾ. ಧರ್ಮವೀರ್ ಗಾಂಧಿ, ಉತ್ತರಪ್ರದೇಶದ ಅಲಹಾಬಾದ್ನಿಂದ ಉಜ್ವಲ್ ರೇವತಿ ರಮಣ್ ಸಿಂಗ್ ಅವರನ್ನು ಚುನಾವಣೆ ಕಣಕ್ಕಿಳಿಸಿದೆ.
ಇದನ್ನೂ ಓದಿ: 'ಮೋದಿ ಕೀ ಗ್ಯಾರಂಟಿ-ಜುಮ್ಲಾಗಳ ವಾರಂಟಿ': ಬಿಜೆಪಿಯ ಪ್ರಣಾಳಿಕೆ ಬಗ್ಗೆ ಕಾಂಗ್ರೆಸ್ ವ್ಯಂಗ್ಯ - Congress on BJP manifesto