ನವದೆಹಲಿ: ಬಜೆಟ್ನಲ್ಲಿ ಘೋಷಿಸಿದಂತೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಅಡಿಯಲ್ಲಿ 2028ರವರೆಗೆ ಉಚಿತವಾಗಿ ಪಡಿತರ ವಿತರಿಸುವ ಯೋಜನೆಯನ್ನು ಮುಂದುವರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಆಹಾರ ನಿಯಂತ್ರಕ ಸಂಸ್ಥೆಯಾದ ಎಫ್‌ಎಸ್‌ಎಸ್‌ಎಐ ಸೂಚಿಸಿದ ಮಾನದಂಡಗಳ ಪ್ರಕಾರ, ಸೂಕ್ಷ್ಮ ಪೋಷಕಾಂಶಗಳಿಂದ (ಕಬ್ಬಿಣ, ಫೋಲಿಕ್ ಆಮ್ಲ, ವಿಟಮಿನ್ ಬಿ12) ಸಮೃದ್ಧವಾಗಿರುವ ಅಕ್ಕಿಯನ್ನು ಪೂರೈಕೆ ಮಾಡಲಾಗುವುದು. ಇದಕ್ಕಾಗಿ 17,082 ಕೋಟಿ ರೂಪಾಯಿ ಭರಿಸಲಾಗುವುದು ಎಂದು ಕೇಂದ್ರ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ, ಬಡವರು ಮತ್ತು ರಕ್ತಹೀನತೆಯಿಂದ ಬಳಲುತ್ತಿರುವ ಮಹಿಳೆಯರು, ಮಕ್ಕಳು ಮತ್ತು ಪುರುಷರಿಗೆ ನೆರವಾಗಲು 17,082 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸಾರಯುಕ್ತ ಅಕ್ಕಿಯನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY) ಮತ್ತು ಇತರ ಕಲ್ಯಾಣ ಯೋಜನೆಗಳಡಿ ಸಾರಯುಕ್ತ ಅಕ್ಕಿಯನ್ನು ಜುಲೈ 2024ರಿಂದ ಮತ್ತು ಡಿಸೆಂಬರ್ 2028ರವರೆಗೆ ಮುಂದುವರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದಕ್ಕೆ ಬೇಕಾದ ನಿಧಿಯನ್ನು ಕೇಂದ್ರ ಸರ್ಕಾರವೇ ಭರಸಲಿದೆ ಎಂದರು.
ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಇಎ) ಏಪ್ರಿಲ್ 2022ರಿಂದ ಮಾರ್ಚ್ 2024ರೊಳಗೆ ದೇಶಾದ್ಯಂತ ಭತ್ತದ ಬಲವರ್ಧನೆ ಉಪಕ್ರಮವನ್ನು ಹಂತಹಂತವಾಗಿ ಜಾರಿಗೆ ತರಲು ನಿರ್ಧರಿಸಿತ್ತು. ಮೂರು ಹಂತಗಳು ಈ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿತ್ತು. ಎಲ್ಲ ಸರ್ಕಾರಿ ಯೋಜನೆಗಳಲ್ಲಿ ಸಾರವರ್ಧಿತ ಅಕ್ಕಿಯನ್ನು ಒದಗಿಸಲಾಗಿದೆ.
ಪೌಷ್ಟಿಕಾಂಶ ಒದಗಿಸಲು ಸಾರಯುಕ್ತ ಅಕ್ಕಿ: ಸಾರಯುಕ್ತ ಅಕ್ಕಿ ಪೂರೈಕೆಯನ್ನು ಮುಂದುವರಿಸುವ ಸರ್ಕಾರದ ನಿರ್ಧಾರವು ಬಡವರ ಪೌಷ್ಟಿಕಾಂಶದ ಭದ್ರತೆಯ ಗುರಿ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.
देशभर के अपने गरीब भाई-बहनों की पोषण सुरक्षा के लिए हमने प्रधानमंत्री गरीब कल्याण अन्न योजना और अन्य कल्याणकारी योजनाओं के तहत फोर्टिफाइड चावल की आपूर्ति को जारी रखने का फैसला किया है। जरूरी पोषक तत्वों के साथ तैयार इस चावल से उनका स्वास्थ्य और बेहतर होगा।https://t.co/PBI0F9nOTE
— Narendra Modi (@narendramodi) October 9, 2024
ಈ ಬಗ್ಗೆ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಅಗತ್ಯ ಪೋಷಕಾಂಶಗಳನ್ನು ಹೊಂದಿರುವ ಅಕ್ಕಿ ಜನರ ಆರೋಗ್ಯವನ್ನು ಸುಧಾರಿಸುತ್ತದೆ ಎಂದಿದ್ದಾರೆ. ಇದರ ಜೊತೆಗೆ 4,406 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜಸ್ಥಾನ ಮತ್ತು ಪಂಜಾಬ್‌ನ ಗಡಿ ಪ್ರದೇಶಗಳಲ್ಲಿ 2,280 ಕಿ.ಮೀ ರಸ್ತೆಗಳ ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಪ್ರದೇಶದಲ್ಲಿ ಸಂಪರ್ಕ ಮತ್ತು ಉದ್ಯೋಗವನ್ನು ಹೆಚ್ಚಿಸುವುದಾಗಿ ಮೋದಿ ಹೇಳಿದ್ದಾರೆ.
ಇದನ್ನೂ ಓದಿ: ರಾಹುಲ್ ಗಾಂಧಿಗೆ ಸ್ವಿಗ್ಗಿ ಮೂಲಕ 1 ಕೆ.ಜಿ ಜಿಲೇಬಿ ಕಳುಹಿಸಿದ ಬಿಜೆಪಿ: ಅದೂ ಕ್ಯಾಶ್ ಆನ್ ಡೆಲಿವರಿ!