ಪಂಚಕುಲ: ಹರಿಯಾಣದ ನೂತನ ಮುಖ್ಯಮಂತ್ರಿಯಾಗಿ ಇಂದು ಬಿಜೆಪಿ ನಾಯಕ ನಯಾಬ್ ಸಿಂಗ್ ಸೈನಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ರಾಜನಾಥ್ ಸಿಂಗ್ ಮತ್ತು ಜೆಪಿ ನಡ್ಡಾ ಸೇರಿದಂತೆ ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟದ ಎಲ್ಲಾ 20 ಮುಖ್ಯಮಂತ್ರಿಗಳು ಮತ್ತು ಅವರ ನಿಯೋಗಗಳು ಕೂಡ ಇಂದಿನ ಪದಗ್ರಹಣ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ಪ್ರಮಾಣ ವಚನ ಬೋಧಿಸಲಿದ್ದಾರೆ. ಪಂಚಕುಲದ ಸೆಕ್ಟರ್ 5ರ ಪರೇಡ್ ಗ್ರೌಂಡ್‌ನಲ್ಲಿ ನಡೆಯಲಿರುವ ಪ್ರಮಾಣ ವಚನ ಸಮಾರಂಭಕ್ಕೆ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಸುಮಾರು 50,000 ಜನರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಜನರಿಗೆ ಕಾರ್ಯಕ್ರಮ ವೀಕ್ಷಿಸಲು ಮೈದಾನದ ಸುತ್ತ 14 ಎಲ್ಇಡಿ ಪರದೆಯ ವ್ಯವಸ್ಥೆ ಮಾಡಲಾಗಿದೆ. ಸೈನಿ ಅವರು ಜೊತೆ ಯಾವ ಸಚಿವರು ಪ್ರಮಾಣವಚನ ಸ್ವೀಕರಿಸುತ್ತಾರೆ ಎಂಬ ಕುರಿತು ಇನ್ನು ತಿಳಿದು ಬಂದಿಲ್ಲ.
ಎನ್ಡಿಎ ರಾಜ್ಯಗಳ ಸಿಎಂಗಳ ಜೊತೆ ಮೋದಿ ಮಹತ್ವದ ಸಭೆ: ಪ್ರಮಾಣವಚನದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಚಂಡೀಗಢದಲ್ಲಿ ಅರ್ಧದಿನದ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಮಾವೇಶದಲ್ಲಿ ಎನ್ಡಿಎ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಹಾಜರಿರಲಿದ್ದಾರೆ.
ಸಮಾವೇಶದಲ್ಲಿ ಪ್ರಧಾನಿ ರಾಷ್ಟ್ರೀಯ ಅಭಿವೃದ್ಧಿ ವಿಷಯಗಳ ಕುರಿತು ಪ್ರಸ್ತಾಪಿಸಲಿದ್ದಾರೆ. ಇದರ ಜೊತೆಗೆ ಸಂವಿಧಾನ್ ಕಾ ಅಮೃತ್ ಮಹೋತ್ಸವದ ಆಚರಣೆ ಸೇರಿದಂತೆ ಹಲವು ವಿಷಯ ಪ್ರಸ್ತಾಪವಾಗಲಿದೆ. ಸದ್ಯ ದೇಶದ 13 ರಾಜ್ಯದಲ್ಲಿ ಬಿಜೆಪಿ ಮುಖ್ಯಮಂತ್ರಿಗಳಿದ್ದಾರೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ಬಿಹಾರ, ಸಿಕ್ಕಿಂ, ನಾಗಾಲ್ಯಾಂಡ್ ಮತ್ತು ಮೇಘಾಲಯ ಬಿಜೆಪಿ ಮೈತ್ರಿ ಪಕ್ಷ ಆಡಳಿತದಲ್ಲಿದೆ.
ಎರಡನೇ ಬಾರಿ ಸಿಎಂ ಆಗಿ ಸೈನಿ: ಮೃದು ಸ್ವಭಾವದ 54 ವರ್ಷದ ನಯಾಬ್ ಸಿಂಗ್ ಸೈನಿ ಹರಿಯಾಣದ ಸಿಎಂ ಆಗಿ ಎರಡನೇ ಬಾರಿಗೆ ಅಧಿಕಾರ ಸ್ವೀಕರಿಸುತ್ತಿದ್ದಾರೆ.
ಬುಧವಾರ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಕೇಂದ್ರ ವೀಕ್ಷಕರಾಗಿ ಭಾಗಿಯಾಗಿದ್ದ ಗೃಹ ಸಚಿವ ಅಮಿತ್ ಶಾ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಸೈನಿ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದರು.
ಇದಾದ ಬಳಿಕ ಮಾತನಾಡಿದ ನಯಾಬ್ ಸಿಂಗ್ ಸೈನಿ, ಹರಿಯಾಣದಲ್ಲಿ ಮತ್ತೆ ಸರ್ಕಾರ ರಚಿಸುತ್ತೇವೆ, ಡಬಲ್ ಇಂಜಿನ್ ಸರ್ಕಾರ 15 ವರ್ಷಗಳ ಕಾಲ ಇರಲಿದೆ. ಮನೋಹರ್ ಲಾಲ್ ಖಟ್ಟರ್ ನೇತೃತ್ವದಲ್ಲಿ ಹರಿಯಾಣದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದರು. (ಐಎಎನ್ಎಸ್)
ಇದನ್ನೂ ಓದಿ: ಹರಿಯಾಣ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ನಯಾಬ್ ಸಿಂಗ್ ಸೈನಿ ಆಯ್ಕೆ; ನಾಳೆ ಸಿಎಂ ಆಗಿ ಪ್ರಮಾಣ