ಪಾಟ್ನಾ (ಬಿಹಾರ): ಲೋಕಸಭೆ ಚುನಾವಣೆಗೆ ಬಿಹಾರದ ಕರಕಟ್ ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿಕೂಟದ ಅಧಿಕೃತ ಅಭ್ಯರ್ಥಿಯ ವಿರುದ್ಧ ಸ್ಪರ್ಧಿಸಿದ ಕಾರಣಕ್ಕೆ ಭೋಜ್‌ಪುರಿ ನಟ, ಗಾಯಕ ಪವನ್ ಸಿಂಗ್ ಅವರನ್ನು ಬಿಜೆಪಿ ಗುರುವಾರ ಉಚ್ಚಾಟಿಸಿದೆ. ಈ ಕ್ಷೇತ್ರದಲ್ಲಿ ಕೇಂದ್ರದ ಮಾಜಿ ಸಚಿವ ಉಪೇಂದ್ರ ಕುಶ್ವಾಹಾ ರಾಷ್ಟ್ರೀಯ ಲೋಕ ಮೋರ್ಚಾದ ಚಿಹ್ನೆಯ ಮೇಲೆ ಸ್ಪರ್ಧೆ ಮಾಡಿದ್ದಾರೆ.
ಕರಕಟ್ ಲೋಕಸಭೆ ಕ್ಷೇತ್ರಕ್ಕೆ ಜೂನ್ 1ರಂದು ಚುನಾವಣೆ ನಡೆಯಲಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಉಪೇಂದ್ರ ಕುಶ್ವಾಹಾ ಸ್ಪರ್ಧಿಸಿದ್ದಾರೆ. ಇದೇ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಪವನ್ ಸಿಂಗ್ ಕಣಕ್ಕೆ ಇಳಿದಿದ್ದು, ಮತದಾನಕ್ಕೆ ಕೇವಲ ಒಂದು ವಾರಕ್ಕೂ ಮುನ್ನ ಅವರ ವಿರುದ್ಧ ಬಿಜೆಪಿ ಈ ಕ್ರಮ ಜರುಗಿದೆ. ಸಿಂಗ್ ಭೋಜ್‌ಪುರ ಜಿಲ್ಲೆಯ ಬಿಜೆಪಿ ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಸಾಮ್ರಾಟ್ ಚೌಧರಿ ನಿರ್ದೇಶನದ ಮೇರೆಗೆ ಪಕ್ಷದಿಂದ ಪವನ್ ಸಿಂಗ್ ಅವರನ್ನು ಉಚ್ಚಾಟಿಸಲಾಗಿದೆ. ಪವನ್ ಸಿಂಗ್ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆಗಳು ಮತ್ತು ಅಶಿಸ್ತು ಆರೋಪವನ್ನು ಹೊರಿಸಲಾಗಿದೆ. ಎನ್‌ಡಿಎಯ ಅಧಿಕೃತ ಅಭ್ಯರ್ಥಿ ವಿರುದ್ಧ ಸ್ಪರ್ಧಿಸುವ ಮೂಲಕ ಪಕ್ಷದ ಪ್ರತಿಷ್ಠೆಗೆ ಕಳಂಕ ತಂದಿದ್ದಾರೆ ಎಂದು ಪಕ್ಷದ ಪ್ರಧಾನ ಕಚೇರಿಯ ಉಸ್ತುವಾರಿ ಅರವಿಂದ್ ಶರ್ಮಾ ಉಚ್ಚಾಟನೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಮೋದಿ ಭೇಟಿ ಮುನ್ನವೇ ಕ್ರಮ: ಎನ್‌ಡಿಎ ಮೈತ್ರಿಕೂಟದ ಅಧಿಕೃತ ಅಭ್ಯರ್ಥಿಯ ವಿರುದ್ಧ ಸ್ಪರ್ಧೆ ಕುರಿತಂತೆ ಪವನ್ ಸಿಂಗ್ ಸಂಪರ್ಕಿಸಲು ಸತತವಾಗಿ ಪ್ರಯತ್ನ ನಡೆಸಲಾಗಿತ್ತು. ಇದರ ಹೊರತಾಗಿಯೂ ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯೆಗಾಗಿ ಸಿಂಗ್ ಸಂಪರ್ಕಕ್ಕೆ ಸಿಗಲಿಲ್ಲ ಎಂದು ಬಿಜೆಪಿ ಹೇಳಿಕೊಂಡಿದೆ. ಗಮನಾರ್ಹ ವಿಷಯವೆಂದರೆ, ಪ್ರಧಾನಿ ಮೋದಿ ಮೇ 25ರಂದು ಬಿಹಾರದಲ್ಲಿ ಹಲವು ಕ್ಷೇತ್ರಗಳಲ್ಲಿ ಮೂರು ಪ್ರಚಾರ ಸಭೆಗಳನ್ನು ನಡೆಸಲು ನಿರ್ಧರಿಸಿದ್ದಾರೆ. ಕರಕಟ್ ಕ್ಷೇತ್ರದಲ್ಲೂ ಮೋದಿ ಪ್ರಚಾರ ನಡೆಸುವ ಸಾಧ್ಯತೆ ಇದೆ.
ಮೋದಿ ಬಿಹಾರದ ಭೇಟಿ ಹೊಸ್ತಿಲಲ್ಲೇ ಪವನ್ ಸಿಂಗ್ ಅವರನ್ನು ಬಿಜೆಪಿ ಉಚ್ಚಾಟಿಸಿದೆ. ಹಲವಾರು ವರ್ಷಗಳಿಂದ ಬಿಜೆಪಿ ಸದಸ್ಯರಾಗಿರುವ ಪವನ್ ಸಿಂಗ್ ಅವರಿಗೆ ಪಶ್ಚಿಮ ಬಂಗಾಳದ ಅಸನ್ಸೋಲ್ ಕ್ಷೇತ್ರದ ಟಿಕೆಟ್ಅನ್ನು ಬಿಜೆಪಿ ಘೋಷಿಸಿತ್ತು. ಆದರೆ, ಅವರ ಸ್ತ್ರೀದ್ವೇಷ ಮತ್ತು ಬೆಂಗಾಲಿಗಳನ್ನು ಅವಹೇಳನ ಮಾಡುವ ಸಾಹಿತ್ಯದ ಹಾಡುಗಳ ಬಗ್ಗೆ ಭಾರಿ ವಿವಾದವು ಭುಗಿಲೆದಿತ್ತು. ಹೀಗಾಗಿ ಅವರು ಬಿಜೆಪಿ ಟಿಕೆಟ್ ತಿರಸ್ಕರಿಸಿದ್ದರು. ಈ ಕ್ಷೇತ್ರದಲ್ಲಿ ಹಿರಿಯ ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ ತೃಣಮೂಲ ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಮರು ಆಯ್ಕೆ ಬಯಸಿದ್ದಾರೆ.
ರಜಪೂತ ಮತಗಳ ವಿಭಜನೆ?: ಇದಾದ ನಂತರ ಪವನ್ ಸಿಂಗ್ ಅರಾ ಕ್ಷೇತ್ರದ ಟಿಕೆಟ್‌ಗಾಗಿ ಪಕ್ಷದೊಂದಿಗೆ ತೀವ್ರವಾಗಿ ಲಾಬಿ ಮಾಡಿದ್ದರು. ಆದಾಗ್ಯೂ, ಸತತ ಮೂರನೇ ಅವಧಿಗೆ ಸ್ಪರ್ಧಿಸುತ್ತಿರುವ ಕೇಂದ್ರ ಸಚಿವ ಆರ್.ಕೆ.ಸಿಂಗ್ ಅವರನ್ನು ಕೈಬಿಡುವುದಿಲ್ಲ ಎಂದು ಪಕ್ಷವು ಅವರಿಗೆ ತಿಳಿಸಿತ್ತು. ಅಂತಿಮವಾಗಿ ಕುಶ್ವಾಹಾ ಅವರಂತಹ ನಾಯಕರನ್ನು ಉತ್ತೇಜಿಸುವ ಮೂಲಕ ಪಕ್ಷವು ತನ್ನದೇ ಆದ ಒಬಿಸಿ ಪ್ರಭಾವವನ್ನು ದುರ್ಬಲಗೊಳಿಸುವ ಅಪಾಯವನ್ನು ಎದುರಿಸುತ್ತಿದೆ ಎಂದು ಭಾವಿಸುವ ರಾಜ್ಯ ಬಿಜೆಪಿಯ ಬಣದ ಬೆಂಬಲದಿಂದ ಪವನ್ ಸಿಂಗ್ ಕರಕಟ್ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ ಎಂದು ವರದಿಯಾಗಿದೆ.
ಭೋಜ್‌ಪುರಿ ಸೂಪರ್‌ಸ್ಟಾರ್ ಆಗಿರುವ ಪವನ್ ಸಿಂಗ್ ನಾಮಪತ್ರ ಸಲ್ಲಿಸಿದಾಗ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದರು. ಅಷ್ಟೇ ಅಲ್ಲ, ಅವರ ಎಲ್ಲ ಸಾರ್ವಜನಿಕ ಸಭೆಗಳಿಗೂ ಜನರು ಉತ್ತಮವಾಗಿ ಭಾಗವಹಿಸುತ್ತಿದ್ದಾರೆ. ಬಿಜೆಪಿಯ ಒತ್ತಡದಿಂದ ಸಿಂಗ್ ಅವರು ಸ್ಪರ್ಧೆಯಿಂದ ಹಿಂದೆ ಸರಿಯಬಹುದು ಎಂದು ನಂಬಲಾಗಿತ್ತು. ಆರಂಭದಲ್ಲಿ ತಮ್ಮ ತಾಯಿ ಪ್ರತಿಮಾ ದೇವಿ ಅವರನ್ನು ಸ್ವತಂತ್ರ ಕಣಕ್ಕೆ ಇಳಿಸಿದ್ದರು.
ಪವನ್ ಸಿಂಗ್ ಅಖಾಡದಲ್ಲಿ ಉಳಿಯಲು ನಿರ್ಧರಿಸಿದಾಗ ತಾಯಿ ತನ್ನ ನಾಮಪತ್ರಗಳನ್ನು ಹಿಂತೆಗೆದುಕೊಂಡಿದ್ದಾರೆ. ಸಿಂಗ್ ಬಿಜೆಪಿಯ ಸಾಂಪ್ರದಾಯಿಕವಾದ ರಜಪೂತ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಈ ಮತಗಳು ವಿಭಜನೆಗೊಂಡರೆ ಕಾಂಗ್ರೆಸ್, ಆರ್ಜೆಡಿ ಮತ್ತು ಸಿಪಿಐಎಂಎಲ್ ಪಕ್ಷಗಳನ್ನು ಒಳಗೊಂಡಿರುವ 'ಇಂಡಿಯಾ' ಮೈತ್ರಿಕೂಟಕ್ಕೆ ಅನುಕೂಲವಾಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ: ಲೋಕಸಭೆ ಚುನಾವಣೆ: ಟಿಕೆಟ್ ಘೋಷಿಸಿದ ಒಂದೇ ದಿನಕ್ಕೆ ಕಣದಿಂದ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ ಪವನ್ ಸಿಂಗ್