ರಾಂಚಿ(ಜಾರ್ಖಂಡ್): ಜಾರಿ ನಿರ್ದೇಶನಾಲಯದ (ಇಡಿ) ಕ್ರಮಕ್ಕೆ ಹೆದರಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಕಳೆದ 18 ಗಂಟೆಗಳಿಂದ ತಲೆಮರೆಸಿಕೊಂಡಿದ್ದಾರೆ ಎಂದು ಬಿಜೆಪಿಯ ಜಾರ್ಖಂಡ್ ಘಟಕ ಟೀಕಿಸಿದೆ. ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯಿಸಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಾಬುಲಾಲ್ ಮರಾಂಡಿ, ''ಜಾರ್ಖಂಡ್‌ನ ವಿಶ್ವಾಸಾರ್ಹತೆ ಮತ್ತು ಖ್ಯಾತಿ ಅಪಾಯದಲ್ಲಿದೆ'' ಎಂದು ಕಿಡಿಕಾರಿದ್ದಾರೆ.
"ಮಾಧ್ಯಮ ಮೂಲಗಳ ಪ್ರಕಾರ, ತಡರಾತ್ರಿ ಹೇಮಂತ್ ಜಿ, ಚಪ್ಪಲಿ ಧರಿಸಿ ಮತ್ತು ಹಾಳೆಯಿಂದ ಮುಖ ಮುಚ್ಚಿಕೊಂಡು, ಕಾಲ್ನಡಿಗೆಯಲ್ಲಿ ದೆಹಲಿಯಲ್ಲಿ ತಮ್ಮ ನಿವಾಸದಿಂದ ಓಡಿಹೋಗಿದ್ದಾರೆ. ಅವರೊಂದಿಗೆ ದೆಹಲಿಗೆ ತೆರಳಿದ್ದ ವಿಶೇಷ ಶಾಖೆಯ ಭದ್ರತಾ ಸಿಬ್ಬಂದಿ ಅಜಯ್ ಸಿಂಗ್ ಕೂಡ ನಾಪತ್ತೆಯಾಗಿದ್ದಾರೆ'' ಎಂದು ಮರಾಂಡಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
''ಇವರಿಬ್ಬರ ಮೊಬೈಲ್ ಫೋನ್‌ಗಳೂ ಸಹ ಸ್ವಿಚ್ ಆಫ್ ಆಗಿವೆ. ಇಡಿ ಮತ್ತು ದೆಹಲಿ ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮುಖ್ಯಮಂತ್ರಿಗಳ ಭದ್ರತೆಯ ಬಗ್ಗೆ ಇಂತಹ ನಿರ್ಲಕ್ಷ್ಯಕ್ಕೆ ಬೇರೆ ಉದಾಹರಣೆ ಇರಲಾರದು'' ಎಂದು ಮಾಜಿ ಸಿಎಂ ಗರಂ ಆದರು.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ, ಜಾರಿ ನಿರ್ದೇಶನಾಲಯದ ತಂಡ ಸೊರೇನ್ ಅವರ ದೆಹಲಿ ನಿವಾಸಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದೆ. ಇಡಿ ಜನವರಿ 20ರಂದು ರಾಂಚಿಯಲ್ಲಿರುವ ಅಧಿಕೃತ ನಿವಾಸದಲ್ಲಿ ಸೊರೇನ್ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಜನವರಿ 29 ಅಥವಾ ಜನವರಿ 31 ರಂದು ವಿಚಾರಣೆಗೆ ಅವರ ಲಭ್ಯತೆಯನ್ನು ದೃಢೀಕರಿಸಲು ಸಮನ್ಸ್ ಕೂಡ ನೀಡಿತ್ತು.
ಜನವರಿ 27ರಂದು ರಾತ್ರಿ ರಾಂಚಿಯಿಂದ ದೆಹಲಿಗೆ ತೆರಳಿದ್ದ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ ಇಡಿಗೆ ಇಮೇಲ್ ಕಳುಹಿಸಿದ್ದು, ಜನವರಿ 31ರಂದು ತನ್ನ ರಾಂಚಿ ನಿವಾಸದಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಇಡಿ ತನಿಖಾಧಿಕಾರಿಗಳ ವಿಚಾರಣೆಗೆ ಒಪ್ಪಿಕೊಂಡಿದ್ದಾರೆ. ಈ ಮಧ್ಯೆ, ಸೊರೇನ್ ವಿರುದ್ಧ ಇಡಿ ಕ್ರಮ ಅಸಂವಿಧಾನಿಕ ಎಂದು ಜೆಎಂಎಂ ಹೇಳಿದೆ. ಕೆಲವು ವೈಯಕ್ತಿಕ ಕೆಲಸಗಳಿಗಾಗಿ ಸಿಎಂ ದೆಹಲಿಗೆ ಹೋಗಿದ್ದು, ವಾಪಸ್ ಬರಲಿದ್ದಾರೆ. ಈ ಕ್ರಮ ರಾಜಕೀಯ ಪ್ರೇರಿತವಾಗಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ವಕ್ತಾರ ಸುಪ್ರಿಯೋ ಭಟ್ಟಾಚಾರ್ಯ ಆರೋಪಿಸಿದ್ದಾರೆ.
ಕಲ್ಯಾಣ ಕಾರ್ಯಗಳಿಗೆ ತಡೆ- ಕಾಂಗ್ರೆಸ್ ಆರೋಪ: ಜಾರ್ಖಂಡ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಠಾಕೂರ್, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗುವುದು ಎಂಬ ಭಾವನೆ ಮೂಡಿಸುವ ಪ್ರಯತ್ನಗಳು ನಡೆಯುತ್ತಿವೆ. ಸಿಎಂ ನಾಪತ್ತೆಯಾಗಿದ್ದಾರೆ ಎಂದು ವದಂತಿ ಹಬ್ಬಿಸಲಾಗುತ್ತಿದೆ ಎಂದು ಹೇಳಿದರು. ಕಾಂಗ್ರೆಸ್, ಜಾರ್ಖಂಡ್‌ನಲ್ಲಿ ಜೆಎಂಎಂ ನೇತೃತ್ವದ ಆಡಳಿತಾರೂಢ ಮೈತ್ರಿಕೂಟದ ಒಂದು ಭಾಗವಾಗಿದೆ. ಇಡಿಗೆ ನಿಜವಾಗಿಯೂ ಸಿಎಂ ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲವೇ? ಇದು ರಾಜ್ಯ ಸರ್ಕಾರಕ್ಕೆ ತೊಂದರೆ ಕೊಡುವ ಷಡ್ಯಂತ್ರವಲ್ಲದೆ ಮತ್ತೇನೂ ಅಲ್ಲ, ಇದರಿಂದ ಕಲ್ಯಾಣ ಕಾರ್ಯಗಳನ್ನು ತಡೆಯುತ್ತಿದ್ದಾರೆ'' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಜಾರ್ಖಂಡ್ ಸಿಎಂ ಸೊರೇನ್ಗಾಗಿ ಇಡಿ ಅಧಿಕಾರಿಗಳ ಹುಡುಕಾಟ