ಬಿಜಾಪುರ (ಛತ್ತೀಸ್‌ಗಢ): ಬಿಜಾಪುರದಲ್ಲಿ ಗುರುವಾರ ತಡರಾತ್ರಿಯಿಂದ ಭದ್ರತಾ ಪಡೆ ಮತ್ತು ನಕ್ಸಲರ ನಡುವೆ ಗುಂಡಿನ ದಾಳಿ ನಡೆಯುತ್ತಿದೆ.
ಎರಡು ದಿನಗಳ ಹಿಂದೆ ಪಮೇಡ್ ಪೊಲೀಸ್ ಠಾಣಾ ವ್ಯಾಪ್ತಿಯ ಜೀರಪಲ್ಲಿ ಎಂಬಲ್ಲಿ ಹೊಸ ಶಿಬಿರ ತೆರೆಯಲಾಗಿತ್ತು. ಈ ಶಿಬಿರದ ಹೊರ ವಲಯದಲ್ಲಿ ನಕ್ಸಲರು ಮತ್ತು ಭದ್ರತೆಗೆ ನಿಯೋಜನೆಗೊಂಡಿದ್ದ ಯೋಧರ ನಡುವೆ ಈ ಗುಂಡಿನ ದಾಳಿ ನಡೆಯುತ್ತಿದೆ ಎಂದು ಬಸ್ತಾರ್ ಐಜಿ ಸುಂದರರಾಜ್ ಇದನ್ನು ಖಚಿತಪಡಿಸಿದ್ದಾರೆ.
ಎನ್‌ಕೌಂಟರ್‌ನ ಲೈವ್ ವಿಡಿಯೋ: ಗುರುವಾರ ಆರಂಭವಾದ ಭದ್ರತಾ ಪಡೆ ಮತ್ತು ನಕ್ಸಲರ ನಡುವಿನ ಎನ್‌ಕೌಂಟರ್‌ನ ಲೈವ್ ವಿಡಿಯೋ ಕೂಡ ಬಹಿರಂಗಗೊಂಡಿದೆ. ಇದರಲ್ಲಿ ಭದ್ರತಾ ಪಡೆ ಉತ್ಸಾಹದಿಂದ ನಕ್ಸಲರಿಗೆ ತಕ್ಕ ಪ್ರತ್ಯುತ್ತರ ನೀಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಗುಂಡಿನ ದಾಳಿ ಸಂದರ್ಭದಲ್ಲಿ, ಸಿಆರ್‌ಪಿಎಫ್ ಡಿಐಜಿ ಸೂರಜ್‌ಪಾಲ್ ವರ್ಮಾ, ಬಿಜಾಪುರ ಎಸ್‌ಪಿ ಜಿತೇಂದ್ರ ಕುಮಾರ್ ಯಾದವ್, ಸಿಆರ್‌ಪಿಎಫ್ 228 ನೇ ಬೆಟಾಲಿಯನ್ ಕಮಾಂಡೆಂಟ್ ಲತೀಫ್ ಕುಮಾರ್ ಸಾಹು ಮತ್ತು ಎಎಸ್‌ಪಿ ಸಂಜಯ್ ಧ್ರುವ್ ಸೇರಿದಂತೆ ಅನೇಕ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು. ನಕ್ಸಲರಿಂದ ನಿರಂತರ ಗುಂಡಿನ ಚಕಮಕಿ ನಡೆಯುತ್ತಿದ್ದು, ಇದಕ್ಕೆ ಭದ್ರತಾ ಪಡೆ ಪ್ರತ್ಯುತ್ತರ ನೀಡುತ್ತಿವೆ.
ಇಬ್ಬರು ಯೋಧರಿಗೆ ಗಾಯ: ಗುರುವಾರ ರಾತ್ರಿ 7.30ಕ್ಕೆ ಆರಂಭವಾದ ಎನ್‌ಕೌಂಟರ್, ರಾತ್ರಿ 11 ಗಂಟೆಯವರೆಗೆ ಎರಡೂ ಕಡೆಯಿಂದ ಗುಂಡಿನ ಚಕಮಕಿ ನಡೆಯಿತು. ಈಗಲೂ ಗುಂಡಿನ ಚಕಮಕಿ ನಡೆಯುತ್ತಿದೆ. ಘಟನೆಯಲ್ಲಿ ಗಜೇಂದ್ರ ಮತ್ತು ಕೃಷ್ಣ ಎಂಬ ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್(ಡಿಆರ್‌ಜಿ)ನ ಇಬ್ಬರು ಯೋಧರು ಗಾಯಗೊಂಡಿದ್ದಾರೆ. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಇಬ್ಬರೂ ಯೋಧರು ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಛತ್ತೀಸ್‌ಗಢ: ಹತರಾದ ಐವರು ನಕ್ಸಲರ ತಲೆ ಮೇಲಿತ್ತು 40 ಲಕ್ಷ ರೂ. ಬಹುಮಾನ