ನವದೆಹಲಿ: ಎನ್ಸಿಇಆರ್ಟಿ ಪಠ್ಯಕ್ರಮದ 11, 12ನೇ ತರಗತಿಯ ಕೆಲ ಪಠ್ಯ ಪರಿಷ್ಕರಣೆಯಾಗಿದ್ದು, ಅದರಲ್ಲಿ ಬಳಸಲಾದ ಮತ್ತು ಕೈಬಿಟ್ಟ ಪದಗಳು ಚರ್ಚೆಗೆ ಗ್ರಾಸವಾಗಿವೆ. ಸಮಾಜ ವಿಜ್ಞಾನ ಪಠ್ಯಕ್ರಮದಲ್ಲಿ 'ಇಂಡಿಯಾ' ಪದದ ಬದಲಿಗೆ 'ಭಾರತ' ಎಂದು ನಮೂದಿಸಲಾಗಿದೆ. ಇದರ ವಿರುದ್ಧ ಚರ್ಚೆಗಳು ನಡೆದ ಹಿನ್ನೆಲೆ ಪರ್ಯಾಯ ಪದವಾಗಿ ಬಳಸಲಾಗಿದೆ ಎಂದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ಸ್ಪಷ್ಟನೆ ನೀಡಿದೆ.
ಸಮಾಜ ವಿಜ್ಞಾನದ ಪಠ್ಯದಲ್ಲಿ ಕೆಲ ಬದಲಾವಣೆ ಮಾಡಿ ಪುಸ್ತಕಗಳನ್ನು ಬಿಡುಗಡೆ ಮಾಡಲಾಗಿದೆ. ಅದರಲ್ಲಿ 'ಪ್ರಾಚೀನ ಇತಿಹಾಸ'ದ ಬದಲಿಗೆ 'ಶಾಸ್ತ್ರೀಯ ಇತಿಹಾಸ', ಇಂಡಿಯಾ ಬದಲಿಗೆ ಭಾರತ ಎಂದು ನಮೂದಿಸಲಾಗಿದೆ. ಇದು ಕೇಸರೀಕರಣದ ಭಾಗವೇ ಎಂಬ ಚರ್ಚೆ ಶುರುವಾಗಿದೆ.
ಪರ್ಯಾಯವಾಗಿ ಬಳಕೆ: ಇದಕ್ಕೆ ಸ್ಪಷ್ಟನೆ ನೀಡಿರುವ ಎನ್ಸಿಇಆರ್ಟಿ ನಿರ್ದೇಶಕ ದಿನೇಶ್ ಪ್ರಸಾದ್ ಸಕ್ಲಾನಿ ಅವರು, ಸಂವಿಧಾನದಲ್ಲಿ ಬಳಸಲಾದ ಪದಗಳನ್ನೇ ಪುಸ್ತಕದಲ್ಲಿ ತರಲಾಗಿದೆ. ಕೆಲ ಪದಗಳಿಗೆ ಪರ್ಯಾಯವಾಗಿ ಉಪಯೋಗಿಸಲಾಗಿದೆ. ಪಠ್ಯದಲ್ಲಿ ಏಕತಾನತೆ ತಪ್ಪಿಸಲು ಈ ರೀತಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯು ಸರ್ವಾನುಮತದಿಂದ ಈ ಪದಗಳನ್ನು ಬದಲಿಸಲು ಒಪ್ಪಿದೆ. ಮಕ್ಕಳಿಗೆ ಹೊಸ ಪದಗಳ ಪರಿಚಯದ ಜೊತೆಗೆ ಭಾರತೀಯ ನೆಲದ ಸೊಗಡನ್ನು ಪರಿಚಯಿಸುವ ಕೆಲಸವಾಗಿದೆ. ಇಂಡಿಯಾ ಪದದ ಬದಲಿಗೆ ಭಾರತ ಎಂದು ಉಲ್ಲೇಖಿಸಿರುವುದಕ್ಕೆ ನಡೆಯುತ್ತಿರುವ ಚರ್ಚೆಗಳು ಅರ್ಥಹೀನ ಎಂದು ದಿನೇಶ್ ಪ್ರಸಾದ್ ಅವರು ತಿಳಿಸಿದ್ದಾರೆ.
ಯಾವುದೇ ಹೊಸ ಪದ ಬಳಕೆಗೆ ಬಂದಾಗ ಅದರ ಹಿಂದೆ ಯಾವುದೇ ದುರುದ್ದೇಶ ಇರುವುದಿಲ್ಲ. ಪರ್ಯಾಯವಾಗಿ ಬಳಕೆ ಮಾಡುವ ಪದಗಳನ್ನು ಮಕ್ಕಳಿಗೆ ಪರಿಚಯಿಸಬೇಕಿದೆ. ಸಂವಿಧಾನದಲ್ಲಿ ಬಳಸಲಾದ ಪದಗಳನ್ನೇ ಪಠ್ಯದಲ್ಲಿ ಉಲ್ಲೇಖಿಸಿದ್ದೇವೆ. ಸರಿ ಹೊಂದುವ ಜಾಗದಲ್ಲಿ ಇಂಡಿಯಾ, ಭಾರತ ಎರಡನ್ನೂ ನೀಡಲಾಗಿದೆ. ಎರಡನ್ನೂ ಪಠ್ಯಪುಸ್ತಕಗಳಲ್ಲಿ ಕಾಣಬಹುದು. ಇದು ವಿವಾದ ಮಾಡಿ ಚರ್ಚಿಸುವ ವಿಷಯವಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಪಠ್ಯ ಪರಿಷ್ಕರಣಾ ಸಮಿತಿಯ ಅಧ್ಯಕ್ಷ ಸಿ.ಐ. ಐಸಾಕ್, ಭಾರತ, ಇಂಡಿಯಾ ಪದಗಳ ಜೊತೆಗೆ ಪಠ್ಯಕ್ರಮದಲ್ಲಿ "ಪ್ರಾಚೀನ ಇತಿಹಾಸ" ಬದಲಿಗೆ "ಶಾಸ್ತ್ರೀಯ ಇತಿಹಾಸ" ಎಂದು ಪರಿಚಯಿಸಲಾಗಿದೆ. ಇದು ಭಾರತೀಯ ಜ್ಞಾನ ಪದ್ಧತಿ ಆಧಾರದ ಮೇಲೆ ನೀಡಲಾಗಿದೆ. ಭಾರತ ಎಂಬ ಪದವನ್ನು ಪ್ರಾಚೀನ ಗ್ರಂಥಗಳಲ್ಲಿ ಬಳಸಲಾಗಿದೆ. 7 ಸಾವಿರ ವರ್ಷಗಳ ಹಳೆಯದಾದ ವಿಷ್ಣು ಪುರಾಣದಲ್ಲೂ ಇದರ ಉಲ್ಲೇಖವಿದೆ ಎಂದು ಅವರು ಸಮರ್ಥಿಸಿಕೊಂಡರು.
ಭಾರತ ಪದ ಮುನ್ನೆಲೆಗೆ ಬಂದಿದ್ದು ಯಾವಾಗ?: ಈವರೆಗೆ ಸರ್ಕಾರದ ಯಾವುದೇ ಅಧಿಕೃತ ಸುತ್ತೋಲೆ ಅಥವಾ ಫಲಕಗಳಲ್ಲಿ ಇಂಡಿಯಾ ಎಂದು ಬರೆಯಲಾಗುತ್ತಿತ್ತು. ಕಳೆದ ವರ್ಷ ನಡೆದ ಜಿ20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮುಂದಿನ ನಾಮಫಲಕದಲ್ಲಿ ಭಾರತ ಎಂದು ಉಲ್ಲೇಖಿಸಲಾಗಿತ್ತು. ಜೊತೆಗೆ ಅತಿಥಿಗಳನ್ನು ಆಹ್ವಾನಿಸುವ ಪತ್ರದಲ್ಲೂ ಭಾರತದ ಪ್ರಧಾನಿ ಎಂದು ಬರೆಯಲಾಗಿತ್ತು. ಇದಾದ ಬಳಿಕ ಆ ಪದ ಹೆಚ್ಚಿನ ಬಳಕೆಗೆ ಬಂದಿದೆ.