ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ಮೇಲೆ ದಾಳಿ ನಡೆದ ಬಳಿಕ, ಇದೀಗ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳ ಮೇಲೆ ಹಲ್ಲೆ ನಡೆದಿದೆ. 2022ರ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನಕ್ಕೆ ತೆರಳಿದಾಗ ಬೆಂಬಲಿಗರು ಹಾಗೂ ಜನರು ಅಧಿಕಾರಿಗಳ ಮೇಲೆ ದಾಳಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಪೂರ್ವ ಮೇದಿನಿಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಜನರ ವಿರೋಧದ ನಡುವೆಯೂ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ದಾಳಿಯಲ್ಲಿ ಒಬ್ಬ ಅಧಿಕಾರಿ ಗಾಯಗೊಂಡಿದ್ದಾರೆ. ವಾಹನಕ್ಕೆ ಹಾನಿಯಾಗಿದೆ. ಈ ಬಗ್ಗೆ ದೂರು ನೀಡಲಾಗಿದೆ ಎಂದು ಎನ್‌ಐಎ ತಿಳಿಸಿದೆ.
ಏನಾಯ್ತು?: 2022 ರ ಭೂಪತಿನಗರ ಸ್ಫೋಟ ಪ್ರಕರಣದ ಪ್ರಮುಖ ಸಂಚುಕೋರರ ಬಂಧನಕ್ಕೆ ತೆರಳಿದ್ದ ವೇಳೆ ಮೇದಿನಿಪುರ ಜಿಲ್ಲೆಯಲ್ಲಿ ಮಹಿಳೆಯರೂ ಇದ್ದ ಗುಂಪೊಂದು ಅಧಿಕಾರಿಗಳ ಕಾರ್ಯಕ್ಕೆ ಅಡ್ಡಿ ಮಾಡಿತು. ಆರೋಪಿಗಳನ್ನು ಬಂಧಿಸದಂತೆ ತಡೆವೊಡ್ಡಿದರು. ಕರ್ತವ್ಯ ನಿರ್ವಹಣೆಗೆ ಅಡ್ಡಿ ಮಾಡದಂತೆ ಸೂಚಿಸಿದರೂ, ಮಹಿಳೆಯರು ವಾಗ್ವಾದಕ್ಕಿಳಿದಿದ್ದರು.
ಆದರೂ, ಅಧಿಕಾರಿಗಳು ಆರೋಪಿಗಳ ಮನೆ ಮೇಲೆ ದಾಳಿ ಮಾಡಿ ಬಾಲೈ ಚರಣ್ ಮೈತಿ ಮತ್ತು ಮನೋಬ್ರತಾ ಜಾನಾ ಎಂಬಿಬ್ಬರನ್ನು ಬಂಧಿಸಿದರು. ಅವರನ್ನು ವಾಹನದಲ್ಲಿ ಕರೆದೊಯ್ಯುತ್ತಿರುವಾಗ ಅಲ್ಲಿದ್ದ ಜನರು ವಾಹನದ ಮೇಲೆ ಇಟ್ಟಿಗೆ, ಕಲ್ಲಿನಿಂದ ದಾಳಿ ಮಾಡಿದ್ದಾರೆ. ಇದರಿಂದ ವಾಹನದ ಮುಂಭಾಗ ಜಖಂ ಆಗಿದೆ. ಈ ಸಂಬಂಧ ಎನ್‌ಐಎ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಬಂಧಿತ ಆರೋಪಿಗಳ ಪೈಕಿ ಜಾನಾ ಮತ್ತು ಮೈತಿ ಕಚ್ಚಾ ಬಾಂಬ್‌ಗಳನ್ನು ತಯಾರಿಸಲು ಮತ್ತು ಸ್ಫೋಟಿಸಲು ಸಂಚು ರೂಪಿಸಿದ್ದರು ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ. 2022ರ ಡಿಸೆಂಬರ್ 3 ರಂದು ಭೂಪತಿನಗರದಲ್ಲಿ ಸ್ಫೋಟ ಸಂಭವಿಸಿ ಮೂವರು ಸಾವಿಗೀಡಾಗಿದ್ದರೆ, ಕೆಲವರು ಗಾಯಗೊಂಡಿದ್ದರು. ಬಂಧಿತ ಇಬ್ಬರನ್ನು ಕೋಲ್ಕತ್ತಾದ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ, ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಇಡಿ ಮೇಲೆ ದಾಳಿ ಮಾಡಿದ್ದ ಜನರು: ಜನವರಿ ತಿಂಗಳಲ್ಲಿ ಸಂದೇಶ್ಖಾಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ನಾಯಕ ಶಹಜಾನ್ ಶೇಖ್ ಮನೆ ಮೇಲೆ ಇಡಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದಾಗ ಅವರ ಬೆಂಬಲಿಗರು ಮತ್ತು ಜನರು ಅಧಿಕಾರಿಗಳ ಮೇಲೆಯೇ ದಾಳಿ ಮಾಡಿದ್ದರು. ಜೀವ ಉಳಿಸಿಕೊಳ್ಳಲು ಅಧಿಕಾರಿಗಳು ಅಲ್ಲಿಂದ ಓಡಿ ಹೋಗಿದ್ದರು.