ನಾಗಪುರ(ಮಹಾರಷ್ಟ್ರ): ಚೆಕ್ ಬೌನ್ಸ್ ಪ್ರಕರಣದಲ್ಲಿ ಭಾರತದ ಮಾಜಿ ಕ್ರಿಕೆಟಿಗ ಪ್ರಶಾಂತ್ ವೈದ್ಯ ಅವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯದ ಆದೇಶವಿದ್ದರೂ ವಿಚಾರಣೆಗೆ ಹಾಜರಾಗದ ಕಾರಣ ವೈದ್ಯ ವಿರುದ್ಧ ಜಾಮೀನುರಹಿತ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿತ್ತು.
ಪ್ರಕರಣದ ವಿವರ: ಪ್ರಶಾಂತ್ ವೈದ್ಯ ಅವರು ಸ್ಥಳೀಯ ವ್ಯಾಪಾರಿಯಿಂದ ಉಕ್ಕು ಖರೀದಿಸಿ ಚೆಕ್ ನೀಡಿದ್ದರು. ಈ ಚೆಕ್ ಬೌನ್ಸ್ ಆಗಿತ್ತು. ಹಣ ಮರು ಪಾವತಿಸುವಂತೆ ವ್ಯಾಪಾರಿ ಮನವಿ ಮಾಡಿದ್ದರು. ಆದರೆ ಈ ಮನವಿಯನ್ನು ಪ್ರಶಾಂತ್ ನಿರಾಕರಿಸಿದ್ದಾರೆ. ಹೀಗಾಗಿ ವ್ಯಾಪಾರಿ ನ್ಯಾಯಾಲಯದ ಮೊರೆ ಹೋಗಿದ್ದರು.
ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ, ಪ್ರಶಾಂತ್ ಅವರಿಗೆ ಆದೇಶ ನೀಡಿತ್ತು. ಆದರೂ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ಕೋರ್ಟ್ ಜಾಮೀನುರಹಿತ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದ್ದು, ಪೊಲೀಸರು ಬಂಧಿಸಿದ್ದಾರೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯದಲ್ಲಿ ಜಾಮೀನು ಪಡೆದಿರುವ ಪ್ರಶಾಂತ್ ಬಿಡುಗಡೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಪ್ರಶಾಂತ್ ವೈದ್ಯ 1990ರಲ್ಲಿ ಭಾರತ ಪರ ನಾಲ್ಕು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. ಪ್ರಸ್ತುತ ವಿದರ್ಭ ಕ್ರಿಕೆಟ್ ಸಂಸ್ಥೆಯ ಅಭಿವೃದ್ಧಿ ಸಮಿತಿಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: ಕೊಹ್ಲಿ ಕ್ಯಾಪ್ಟನ್ ಆಗಿರುತ್ತಿದ್ದರೆ ಭಾರತ ಮೊದಲ ಟೆಸ್ಟ್ ಸೋಲುತ್ತಿರಲಿಲ್ಲ: ಮೈಕಲ್ ವಾನ್