ಹೈದರಾಬಾದ್: ಪ್ರತಿ ವರ್ಷ ಏಪ್ರಿಲ್ 1 ರಂದು ಮೂರ್ಖರ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಅಂಗವಾಗಿ ಜನರು ತಮ್ಮ ಪ್ರೀತಿಪಾತ್ರರನ್ನು ಅಥವಾ ಸ್ನೇಹಿತರನ್ನು ಅಚ್ಚರಿಗೊಳಿಸಲು ತುದಿಗಾಲ ಮೇಲೆ ನಿಂತಿರುತ್ತಾರೆ. ಹೊಸ ಹೊಸ ಆಲೋಚನೆಗಳೊಂದಿಗೆ ಅವರನ್ನೆಲ್ಲ ಚಕಿತಗೊಳಿಸಿ, ನಂಬುವಂತೆ ಮಾಡಿ, ಅಂತಿಮವಾಗಿ ಅದು ನಕಲಿ ಎಂದು ಬಹಿರಂಗಪಡಿಸುತ್ತಾರೆ. ಶತ ಶತಮಾನಗಳಿಂದ ಏಪ್ರಿಲ್ 1ರ ಮೂರ್ಖರ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಏಪ್ರಿಲ್ 1 ರಂದೇ ಯಾಕೆ ಮೂರ್ಖರ ದಿನ ಆಚರಿಸಲಾಗುತ್ತದೆ?: ಏಪ್ರಿಲ್ ಮೂರ್ಖರ ದಿನದ ಮೂಲದ ಬಗ್ಗೆ ಹಲವಾರು ಕಥೆಗಳು ಮತ್ತು ತನ್ನದೇ ಆದ ವಿವರಣೆಗಳಿವೆ. ಒಂದು ಮೂಲದ ಪ್ರಕಾರ ಈ ದಿನದ ಮೂಲವನ್ನು 16 ನೇ ಶತಮಾನದ ಉತ್ತರಾರ್ಧದಲ್ಲಿ ಆರಂಭವಾಯಿತು ಎಂದು ಕಂಡುಕೊಳ್ಳಲಾಗಿದೆ.
ಈ ದಿನಮಾನಗಳಲ್ಲಿ ಪೋಪ್ ಗ್ರೆಗೊರಿ XIII ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನು ಅನುಷ್ಠಾನ ಮಾಡುವ ಬಗ್ಗೆ ಪ್ರಸ್ತಾಪಿಸಿದರು, ಈ ಮೊದಲು ಮಾರ್ಚ್ ಅಂತ್ಯದಲ್ಲಿ ಹೊಸ ವರ್ಷವನ್ನು ಆಚರಿಸುವ ಸಂಪ್ರದಾಯ ಇತ್ತು. ಇದನ್ನು ಬದಲಿಸಿ ಜನವರಿ 1ರ ಪ್ರಾರಂಭದೊಂದಿಗೆ ಹೊಸ ಆಚರಣೆ ಜಾರಿಗೆ ತರಲಾಯಿತು. ಆದಾಗ್ಯೂ ಕೆಲವರು ಈ ಬದಲಾವಣೆ ಬಗ್ಗೆ ತಿಳಿದಿರಲಿಲ್ಲ, ಮತ್ತು ಅವರು ಏಪ್ರಿಲ್ 1 ರಂದೇ ಹೊಸ ವರ್ಷ ಆಚರಿಸುವುದನ್ನು ಮುಂದುವರೆಸಿದ್ದರು. ಹೀಗಾಗಿ, ಅವರು ಇತರರಿಂದ ಅಪಹಾಸ್ಯ ಮತ್ತು ಅಪಹಾಸ್ಯಕ್ಕೆ ಒಳಗಾಗಿದ್ದರು. ಏಪ್ರಿಲ್ 1 ರಂದು ಹೊಸ ವರ್ಷದ ದಿನವನ್ನು ಆಚರಿಸಿದವರಿಗೆ 'ಮೂರ್ಖರು' ಎಂಬ ಹಣೆಪಟ್ಟಿ ನೀಡಲಾಯಿತು. ಹಾಗಾಗಿಯೇ ಏಪ್ರಿಲ್ ತಿಂಗಳ ಮೊದಲ ದಿನವನ್ನ ಮೂರ್ಖರ ದಿನವನ್ನಾಗಿ ಆಚರಿಸುವ ಸಂಪ್ರದಾಯ ಶುರುವಾಯಿತು.
ಪ್ರಪಂಚದಾದ್ಯಂತ ಜನರು ಏಪ್ರಿಲ್ 1ರಂದು ಮೂರ್ಖರ ದಿನವನ್ನು ಆಚರಿಸುತ್ತಾ ಬರುತ್ತಿದ್ದಾರೆ. ವಿಶ್ವದ ಎಲ್ಲ ರಾಷ್ಟ್ರಗಳಲ್ಲಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಫ್ರಾನ್ಸ್‌ನಲ್ಲಿ ಏಪ್ರಿಲ್ 1ರ ಮೂರ್ಖರ ದಿನದಂದು ಮಕ್ಕಳು ತಮ್ಮ ಬೆನ್ನಿಗೆ ಕಾಗದದ ಮೀನನ್ನು ಜೋಡಿಸಿ ತಮ್ಮ ಸ್ನೇಹಿತರನ್ನು ತಮಾಷೆ ಮಾಡುವ ವಾಡಿಕೆ ಇದೆ. ಇನ್ನು ಸ್ಕಾಟ್ಲೆಂಡ್‌ನಲ್ಲಿ ಎರಡು ದಿನಗಳ ಉತ್ಸವಗಳನ್ನೇ ಹಮ್ಮಿಕೊಳ್ಳಲಾಗುತ್ತದೆ. ಎರಡನೇ ದಿನವನ್ನು ಇಲ್ಲಿ ಟೈಲಿ ಡೇ ಎಂದು ಕರೆಯಲಾಗುತ್ತದೆ.
1986 ರಿಂದ ಅಮೆರಿಕದ ನ್ಯೂಯಾರ್ಕ್ ನಲ್ಲಿ ಪ್ರತಿ ವರ್ಷ ಏಪ್ರಿಲ್ ಫೂಲ್ಸ್ ಡೇ ಪೆರೇಡ್‌ಗಾಗಿ ಫೋನಿ ಪತ್ರಿಕಾ ಪ್ರಕಟಣೆಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಕೆನಡಾ ಮತ್ತು ಇಂಗ್ಲೆಂಡ್‌ನಲ್ಲಿ ಮೂರ್ಖರ ದಿನದಂದು ಮಧ್ಯಾಹ್ನದ ನಂತರ ಚೇಷ್ಟೆಗಳನ್ನು ನಿಲ್ಲಿಸುವುದು ವಾಡಿಕೆಯಾಗಿದೆ,
ಭಾರತದಲ್ಲಿ ’ಮೂರ್ಖರ ದಿನ' ಆಚರಣೆ ಆರಂಭವಾಗಿದ್ದು ಯಾವಾಗ?: ಮಾಧ್ಯಮ ವರದಿಗಳ ಪ್ರಕಾರ, ಬ್ರಿಟಿಷರು ಭಾರತದಲ್ಲಿ ಏಪ್ರಿಲ್ ಫೂಲ್ ಆಚರಣೆಯನ್ನು 19 ನೇ ಶತಮಾನದಲ್ಲಿ ಪ್ರಾರಂಭಿಸಿದರು. ಅಲ್ಲಿಂದ ಇಲ್ಲಿವರೆಗೂ ಈ ದಿನವನ್ನು ದೇಶದಲ್ಲಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ಆಫ್ರಿಕಾದಂತಹ ದೇಶಗಳಲ್ಲಿ ಏಪ್ರಿಲ್ ಮೂರ್ಖರ ದಿನವನ್ನು ಮಧ್ಯರಾತ್ರಿ 12 ರವರೆಗೆ ಮಾತ್ರ ಆಚರಿಸಲಾಗುತ್ತದೆ. ಇನ್ನು ಕೆನಡಾ, ಅಮೆರಿಕ, ರಷ್ಯಾ ಮತ್ತು ಇತರ ಯುರೋಪಿಯನ್ ದೇಶಗಳಲ್ಲಿ, ಏಪ್ರಿಲ್ 1 ರಂದು ಇಡೀ ದಿನ ಏಪ್ರಿಲ್ ಮೂರ್ಖರ ದಿನವನ್ನು ಆಚರಿಸಲಾಗುತ್ತದೆ.