ಕೋಟಾ: 'ಕೋಚಿಂಗ್ ಹಬ್' ಎಂದೇ ಪರಿಗಣಿಸಲಾಗಿರುವ ರಾಜಸ್ಥಾನದ ಕೋಟಾದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಸಾವಿನ ಹಾದಿ ತುಳಿದಿದ್ದಾನೆ. ನೀಟ್ ಸಿದ್ಧತೆಗೆ ಆಗಮಿಸಿದ್ದ ಉತ್ತರ ಪ್ರದೇಶದ ಮಥುರಾದ ವಿದ್ಯಾರ್ಥಿ ತನ್ನ ಬಾಡಿಗೆ ಅಪಾರ್ಟ್ಮೆಂಟ್ನಲ್ಲಿ ಬುಧವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕೋಟಾ ಪೊಲೀಸರು ತಿಳಿಸಿದ್ದಾರೆ.
ಸಾವನ್ನಪ್ಪಿದ್ದ ಯುವಕನನ್ನು 21 ವರ್ಷದ ಪರಶುರಾಮ್ ಎಂದು ಗುರುತಿಸಲಾಗಿದೆ. ಕೋಟಾದ ಜವಾಹರ್ ನಗರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವಾರದ ಹಿಂದಷ್ಟೇ ಕೋಟಾಗೆ ಬಂದಿದ್ದ ಈತ ಇಲ್ಲಿನ ಬಾಡಿಗೆ ಅಪಾರ್ಟ್ಮೆಂಟ್ನಲ್ಲಿ ನೆಲೆಸಿದ್ದ.
ಬುಧವಾರ ರಾತ್ರಿ 11.30ರ ಸುಮಾರಿಗೆ ಮನೆ ಮಾಲೀಕ ಅನೂಪ್ ಕುಮಾರ್ ಘಟನೆಯ ಕುರಿತು ನಮಗೆ ಮಾಹಿತಿ ನೀಡಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಎಂಬಿಎಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಸಬ್ಇನ್ಸ್ಪೆಕ್ಟರ್ ಗೋಪಾಲ್ ಲಾಲ್ ಭೈರವ ಮಾಹಿತಿ ನೀಡಿದ್ದಾರೆ.
ಸಂಜೆಯ ಹೊತ್ತಿಗೆ ಪರಶುರಾಮ್ ಬಟ್ಟೆ ಒಣಗಿಸುತ್ತಿದ್ದುದನ್ನು ಮನೆ ಮಾಲೀಕರು ನೋಡಿದ್ದಾರೆ. ಇದಾದ ಬಳಿಕ ಆತ ರೂಮ್ನಿಂದ ಹೊರಬಂದಿರಲಿಲ್ಲ. ಅನೇಕ ಬಾರಿ ಬಾಗಿಲು ತಟ್ಟಿದಾಗಲೂ ವಿದ್ಯಾರ್ಥಿ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ವಿದ್ಯಾರ್ಥಿ ಬರೆದಿದ್ದ ಆತ್ಮಹತ್ಯೆ ಪತ್ರವನ್ನು ವಶಕ್ಕೆ ಪಡೆದಿದ್ದಾರೆ. ವಿದ್ಯಾರ್ಥಿಯ ಸಾವಿನ ಕುರಿತು ಕುಟುಂಬಕ್ಕೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ವರ್ಷ ನಡೆದ 15ನೇ ಪ್ರಕರಣ: ಕೋಟಾದಲ್ಲಿ ಕೋಚಿಂಗ್ ತರಬೇತಿಗೆ ಬಂದ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ 15ನೇ ಪ್ರಕರಣ ಇದಾಗಿದೆ. 2023ರಲ್ಲಿ ಒಟ್ಟು 30 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಪರೀಕ್ಷೆ ಸೇರಿದಂತೆ ಇತರ ಒತ್ತಡಗಳಿಂದ ಆತ್ಮಹತ್ಯೆಗೆ ಶರಣಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ: ಆತ್ಮಹತ್ಯೆಯಂತಹ ಯೋಚನೆ ಹೊಂದಿದಲ್ಲಿ ಅಥವಾ ಈ ವಿಚಾರದಲ್ಲಿ ಸ್ನೇಹಿತರ ಬಗ್ಗೆ ಚಿಂತೆಗೆ ಒಳಗಾಗಿದ್ದರೆ ಅಥವಾ ಯಾವುದೇ ಭಾವನಾತ್ಮಕ ಬೆಂಬಲ ಬೇಕೆಂದೆನಿಸಿದರೆ ನಿಮಗೆ ಸಾಂತ್ವನ ನೀಡಲು ಸದಾ ಒಬ್ಬರಿದ್ದಾರೆ ಎಂಬುದನ್ನು ಮರೆಯಬೇಡಿ. ಇದಕ್ಕಾಗಿ ಆರೋಗ್ಯ ಇಲಾಖೆಯ ಟೆಲಿ ಮಾನಸ್ ಟೋಲ್ ಫ್ರಿ ಸಂಖ್ಯೆ 14416 ಅಥವಾ 1-800-891-4416 ಕರೆ ಮಾಡಬಹುದು. ನಿಮ್ಮದೇ ಭಾಷೆಯಲ್ಲಿ ಅವರು ವ್ಯವಹರಿಸುತ್ತಾರೆ.
ಇದನ್ನೂ ಓದಿ: ಅಮೃತ್ಸರ್ ಸರ್ಕಾರಿ ಆಸ್ಪತ್ರೆಯಲ್ಲೂ ವೈದ್ಯೆಗೆ ಲೈಂಗಿಕ ಕಿರುಕುಳ; ದೂರು ದಾಖಲು