ನವದೆಹಲಿ/ಚೆನ್ನೈ: ಲೋಕಸಭೆ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ರಾಜಕೀಯ ಪಕ್ಷಗಳ ಮೈತ್ರಿ ಬಿರುಸು ಪಡೆದಿದೆ. ತಮಿಳುನಾಡಿನಲ್ಲಿ ದಿವಂಗತ ನಟ, ರಾಜಕಾರಣಿ ಕ್ಯಾಪ್ಟನ್ ವಿಜಯಕಾಂತ್ ಅವರು ಸ್ಥಾಪಿಸಿದ ಡಿಎಂಡಿಕೆ ಕೊನೆಗೂ ಎಐಎಡಿಎಂಕೆ ಜೊತೆ ಚುನಾವಣಾ ಕಣಕ್ಕಿಳಿಯಲು ಸಿದ್ಧವಾಗಿದೆ. ಬುಧವಾರ ಸೀಟು ಹಂಚಿಕೆಗೆ ಅಂತಿಮ ಅನುಮೋದನೆ ನೀಡಿದೆ. ಇತ್ತ ಬಿಹಾರದ ಜನ ಅಧಿಕಾರ ಪಕ್ಷ (ಜೆಎಪಿ) ಕಾಂಗ್ರೆಸ್ನಲ್ಲಿ ವಿಲೀನವಾಗಿದೆ.
ಡಿಎಂಡಿಕೆ- ಎಐಎಡಿಎಂಕೆ ಮೈತ್ರಿ ಫೈನಲ್: ತಮಿಳುನಾಡಿನಲ್ಲಿ ಎಐಎಡಿಎಂಕೆ ಜೊತೆ ಡಿಎಂಡಿಕೆ ಮೈತ್ರಿ ಅಂತಿಮ ಮುದ್ರೆ ಒತ್ತಿದೆ. ಬಿಜೆಪಿ ಜೊತೆ ಚುನಾವಣೆಗೆ ಹೋಗುವ ನಿರೀಕ್ಷೆ ಇದ್ದ ಡಿಎಂಡಿಕೆ ಕೊನೆಗೆ ಎಡಪ್ಪಾಡಿ ಪಳನಿಸ್ವಾಮಿ ಅವರ ಪಾಳಯ ಸೇರಿದೆ. ಎಐಎಡಿಎಂಕೆ ಪಕ್ಷದ ಪ್ರಧಾನ ಕಚೇರಿಯಲ್ಲಿ ಚುನಾವಣಾ ಮೈತ್ರಿ ಪ್ರಕಟಿಸಿದ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ, ಡಿಎಂಡಿಕೆ ತಿರುವಳ್ಳೂರು (ಎಸ್‌ಸಿ), ಸೆಂಟ್ರಲ್ ಚೆನ್ನೈ, ಕಡಲೂರು, ತಂಜಾವೂರು ಮತ್ತು ವಿರುದುನಗರ ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಹೇಳಿದರು.
ಡಿಎಂಡಿಕೆ ಪ್ರಧಾನ ಕಾರ್ಯದರ್ಶಿ ಪ್ರೇಮಲತಾ ವಿಜಯಕಾಂತ್ ಮಾತನಾಡಿ, ಎಐಎಡಿಎಂಕೆಯನ್ನು ಸಹಜ ಮಿತ್ರ ಎಂದು ಬಣ್ಣಿಸಿದ್ದಾರೆ. 2011 ರ ವಿಧಾನಸಭಾ ಚುನಾವಣೆಯ ರೀತಿ ಲೋಕಸಭೆ ಚುನಾವಣೆಯಲ್ಲೂ ಗೆಲುವಿನ ನಾಗಾಲೋಟ ಮುಂದುವರಿಯಲಿದೆ ಎಂದು ಹೇಳಿದರು.
2011 ರಲ್ಲಿ ಡಿಎಂಡಿಕೆ ಪ್ರವರ್ಧಮಾನದಲ್ಲಿತ್ತು. ಆಗಿನ ವಿಧಾನಸಭೆ ಚುನಾವಣೆಯಲ್ಲಿ 29 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಅಂದಿನ ಚುನಾವಣೆಯಲ್ಲಿ ಗೆದ್ದ ಜಯಲಲಿತಾ ಮುಖ್ಯಮಂತ್ರಿಯಾದರೆ, ವಿಜಯಕಾಂತ್ ವಿರೋಧ ಪಕ್ಷದ ನಾಯಕರಾಗಿದ್ದರು.
ಕಾಂಗ್ರೆಸ್ನಲ್ಲಿ ಜೆಎಪಿ ವಿಲೀನ: ಬಿಹಾರದ ಜನ ಅಧಿಕಾರ ಪಕ್ಷ(ಜೆಎಪಿ)ದ ನಾಯಕ ಪಪ್ಪು ಯಾದವ್ ಅವರು ಬುಧವಾರ ಕಾಂಗ್ರೆಸ್ ಸೇರಿದರು. ಜೊತೆಗೆ ತಮ್ಮ ಪಕ್ಷವನ್ನು ಹಸ್ತದಲ್ಲಿ ವಿಲೀನಗೊಳಿಸುವುದಾಗಿ ಘೋಷಿಸಿದರು. 5 ಬಾರಿ ಸಂಸದರಾಗಿದ್ದ ಯಾದವ್ ಅವರು ಇಂದು ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ಸಾರ್ಥಕ್ ರಂಜನ್, ಮುಖಂಡರ ಸಮ್ಮುಖದಲ್ಲಿ ಕಾಂಗ್ರೆಸ್ ಬಾವುಟ ಹಿಡಿದರು.
ಕಾಂಗ್ರೆಸ್ ನಾಯಕತ್ವ ತನಗೆ ಗೌರವ ನೀಡಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಸಲು ಸರ್ವಾಧಿಕಾರಿ ಬಿಜೆಪಿ ವಿರುದ್ಧದ ಹೋರಾಟದಲ್ಲಿ ತಾನು ಭಾಗಿಯಾಗುವುದಾಗಿ ಪಪ್ಪು ಯಾದವ್ ಹೇಳಿದರು.
ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ನಾಯಕತ್ವದಲ್ಲಿ 2024 ರ ಲೋಕಸಭೆ ಮತ್ತು 2025 ರ ವಿಧಾನಸಭಾ ಚುನಾವಣೆಯಲ್ಲಿ ಖಂಡಿತವಾಗಿಯೂ ಗೆಲ್ಲುತ್ತೇವೆ. ಕಾಂಗ್ರೆಸ್ ಅನ್ನು ಬಲಪಡಿಸಲು ಹೋರಾಡುತ್ತೇನೆ. ಈ ನಿಟ್ಟಿನಲ್ಲಿ ಹೊಸ ಶಕ್ತಿಯೊಂದಿಗೆ ಕೆಲಸ ಮಾಡುತ್ತೇನೆ ಎಂದು ಯಾದವ್ ಪಕ್ಷ ಸೇರ್ಪಡೆ ಬಳಿಕ ಹೇಳಿದರು.
ಇದನ್ನೂ ಓದಿ: 'ರಾಜಕೀಯ ಸ್ಟಾರ್ಟ್ಅಪ್ನಲ್ಲಿ ಪ್ರತಿ ಬಾರಿ ಫೇಲ್': ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ