ನವದೆಹಲಿ: ಕಳೆದ ವರ್ಷ ನಡೆದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ನರೇಶ್ ಬಲ್ಯಾನ್ ಅವರನ್ನು ದೆಹಲಿ ಪೊಲೀಸರ ಅಪರಾಧ ವಿಭಾಗ ಶನಿವಾರ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಬಲ್ಯಾನ್ ಅವರನ್ನು ರೌಸ್ ಅವೆನ್ಯೂ ಕೋರ್ಟ್ಗೆ ಹಾಜರುಪಡಿಸಲಾಗಿದ್ದು, ಅವರನ್ನು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಪೊಲೀಸರು ಐದು ದಿನಗಳ ಕಸ್ಟಡಿಗೆ ಕೋರಿದ್ದ ಮನವಿಯ ಬಗ್ಗೆ ನ್ಯಾಯಾಲಯ ಆದೇಶವನ್ನು ಕಾಯ್ದಿರಿಸಿದೆ.
ತನಿಖೆಯ ಸಂದರ್ಭದಲ್ಲಿ ಬಲ್ಯಾನ್ ಮತ್ತು ಕುಖ್ಯಾತ ಗ್ಯಾಂಗ್ಸ್ಟರ್ ಕಪಿಲ್ ಸಾಂಗ್ವಾನ್ ನಡುವೆ ಸಂಭಾಷಣೆ ನಡೆದಿರುವ ಆಡಿಯೋ ಕ್ಲಿಪ್ ಸಿಕ್ಕ ನಂತರ ಎಎಪಿ ಶಾಸಕನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಂದು ಎಂದು ಕರೆಯಲ್ಪಡುವ ಕಪಿಲ್ ಸಾಂಗ್ವಾನ್ ಈಗ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ.
ಉದ್ಯಮಿಗಳಿಂದ ಹಣ ಸುಲಿಗೆ ಮಾಡುವ ಬಗ್ಗೆ ನಡೆದಿರುವ ಚರ್ಚೆಯು ಆಡಿಯೋ ಕ್ಲಿಪ್ನಲ್ಲಿ ರೆಕಾರ್ಡ್ ಆಗಿದೆ ಎಂದು ಆರೋಪಿಸಲಾಗಿದೆ. ಬಲ್ಯಾನ್ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಲ್ಯಾನ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದರೂ ಅವರು ಹಾಜರಾಗದ ಕಾರಣ ಬಂಧಿಸಬೇಕಾಯಿತು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ದೆಹಲಿ ಪೊಲೀಸರು ಹೇಳಿದ್ದೇನು?: "ಬಲ್ಯಾನ್ ಬಳಸಿದ ಸಾಧನವನ್ನು ವಶಪಡಿಸಿಕೊಳ್ಳಬೇಕಾಗಿದೆ. ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಬೇಕಾಗಿದೆ. ಹಣದ ವಹಿವಾಟಿನ ಬಗ್ಗೆ ವಿಚಾರಣೆ ನಡೆಸಬೇಕಿದೆ. ಜುಲೈ 2023 ರಲ್ಲಿ ಗ್ಯಾಂಗ್ಸ್ಟರ್ ಕಪಿಲ್ ಸಾಂಗ್ವಾನ್ ಉದ್ಯಮಿಯಿಂದ ಸುಲಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣ ದಾಖಲಾಗಿತ್ತು. ಗುರುಚರಣ್ ಅವರಿಂದ ಹಣವನ್ನು ಸುಲಿಗೆ ಮಾಡಲಾಗಿದೆ ಎಂಬುದು ಬೆಳಕಿಗೆ ಬಂದಿದೆ" ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
"ಕಪಿಲ್ ಸಾಂಗ್ವಾನ್ ವಿದೇಶದಲ್ಲಿದ್ದಾನೆ. ಆತ ನಿಖರವಾಗಿ ಎಲ್ಲಿದ್ದಾನೆ ಎಂಬ ಬಗ್ಗೆ ಮಾಹಿತಿ ಪಡೆಯಬೇಕಾಗಿದೆ. ಹಣ ಹೇಗೆ ಬರುತ್ತಿತ್ತು, ಯಾರು ಫೋನ್ ಬಳಸುತ್ತಿದ್ದರು, ಈ ಬಗ್ಗೆ ತನಿಖೆಯಾಗಬೇಕಿದೆ. ಧ್ವನಿ ಮಾದರಿಯನ್ನು ಹೊಂದಿಸಬೇಕಿದೆ" ಎಂದು ಪೊಲೀಸರು ಹೇಳಿದ್ದಾರೆ.
ಶಾಸಕ ನರೇಶ್ ಬಲ್ಯಾನ್ ಗ್ಯಾಂಗ್ಸ್ಟರ್ಗಳ ಸಹಾಯದಿಂದ ಹಣ ಸುಲಿಗೆಯಲ್ಲಿ ಭಾಗಿಯಾಗಿದ್ದಾರೆ ಎಂದು ಬಿಜೆಪಿ ನಾಯಕ ಗೌರವ್ ಭಾಟಿಯಾ ಆರೋಪಿಸಿದ್ದು, ಗ್ಯಾಂಗ್ಸ್ಟರ್ಗಳು ಎಎಪಿಯ ಅತಿದೊಡ್ಡ ಬೆಂಬಲಿಗರಾಗಿದ್ದಾರೆ ಎಂದರು.
"ಶಾಸಕ ನರೇಶ್ ಬಲ್ಯಾನ್ ಗ್ಯಾಂಗ್ಸ್ಟರ್ನಿಂದ ಕಿರುಕುಳಕ್ಕೊಳಗಾಗಿದ್ದಾರೆ. ಪೊಲೀಸರು ಗ್ಯಾಂಗ್ಸ್ಟರ್ಗಳನ್ನು ಬಂಧಿಸುವ ಬದಲು ನರೇಶ್ ಬಲ್ಯಾನ್ ಅವರನ್ನು ಬಂಧಿಸಿದ್ದಾರೆ" ಎಂದು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಜನಸಂಖ್ಯಾ ಬೆಳವಣಿಗೆ ದರ ಶೇ 2.1ಕ್ಕಿಂತ ಕಡಿಮೆಯಾದರೆ ಅಪಾಯ, ಕನಿಷ್ಠ 3 ಮಕ್ಕಳನ್ನಾದರೂ ಹೆರಬೇಕು: ಭಾಗವತ್