ಲಖನೌ, ಉತ್ತರಪ್ರದೇಶ : ಇಳಿ ವಯಸ್ಸಿನಲ್ಲಿ ಸಂಗಾತಿ ಅಗಲಿಕೆ, ದೂರಾದ ಮಕ್ಕಳ ನೋವು ಅತಿಯಾಗಿ ಕಾಡುವ ನೋವಾಗಿರುತ್ತದೆ. ಇಂತಹ ಏಕಾಂತ ಭರಿಸಲು ಸಾಧ್ಯವಾಗದ ಹಿನ್ನಲೆ ಮಾಜಿ ಐಪಿಎಸ್ ಅಧಿಕಾರಿ 81ನೇ ವಯಸ್ಸಿನಲ್ಲಿ ಎರಡನೇ ವಿವಾಹವಾಗಿ ಸದ್ದು ಮಾಡಿದ್ದಾರೆ. ಲಖನೌದ ಇಂದಿರಾನಗರ ನಿವಾಸಿ ಮಾಜಿ ಐಪಿಎಸ್ ಅಧಿಕಾರಿ ಎಸ್‌ಆರ್ ದಾರಾಪುರಿ ಎರಡನೇ ಮದುವೆ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.
ಆಗಸ್ಟ್ 8ರಂದು ಲಂಖೀಪುರದ ಅಂಗನವಾಡಿ ಕಾರ್ಯಕರ್ತೆ ಜೊತೆಗೆ ಅವರು ಎರಡನೇ ಬಾರಿಗೆ ಹಸೆಮಣೆ ಏರಿದ್ದಾರೆ. ದಾರಾಪುರಿ ಅವರ ಹೆಂಡತಿ 2022ರಲ್ಲಿ ಸಾವನ್ನಪ್ಪಿದ್ದರು. ಅವರ ಇಬ್ಬರು ಗಂಡು ಮಕ್ಕಳು ವೈದ್ ದಾರಾಪುರಿ ಮತ್ತು ರಾಹುಲ್ ದಾರಾಪುರಿ ತಂದೆಯಿಂದ ದೂರವಿದ್ದರೆ, ಅವರ ಮಗಳು ಸುಲೋಚನಾ ದಾರಾಪುರಿ ಗಂಡನ ಮನೆಯಲ್ಲಿ ನೆಲೆಸಿದ್ದಾರೆ. ಹೆಂಡತಿ ಅಗಲಿಕೆ ಜೊತೆಗೆ ಮಕ್ಕಳು ಜೊತೆಯಲ್ಲಿ ಇರದೇ ಇರುವುದು ಅವರಲ್ಲಿ ಒಂಟಿತನ ಕಾಡುವಂತೆ ಮಾಡಿತ್ತು. ಹೀಗಾಗಿ ಅವರು ಇಳಿವಯಸ್ಸಿನಲ್ಲಿ ಮತ್ತೊಂದು ಮದುವೆ ಆಗಿದ್ದಾರೆ.
ಮದುವೆ ಬಗ್ಗೆ ಅವರ ಸ್ನೇಹಿತರು ಹೇಳಿದ್ದಿಷ್ಟು: ದಾರಾಪುರಿ ಅವರ ಕುರಿತು ಮಾತನಾಡಿರುವ ಅವರ ಸ್ನೇಹಿತರು. ಆತ ಒಳ್ಳೆಯ ಮನುಷ್ಯ, ಸಮಾಜ ಮತ್ತು ಜನರ ಕಲ್ಯಾಣದ ಬಗ್ಗೆ ಸದಾ ಯೋಚಿಸುತ್ತಿದ್ದರು. ಇತ್ತೀಚಿಗೆ ಅವರು ಅನಾರೋಗ್ಯಕ್ಕೂ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಕೊನೆಗಾಲದ ಸಾಂಗಂತ್ಯಕ್ಕಾಗಿ ಸಾಧಾರಣ ಮಹಿಳೆಯೊಬ್ಬರ ಕೈ ಹಿಡಿದಿದ್ದಾರೆ ಎಂದಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಲಖನೌದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯ ಸಂದರ್ಭದಲ್ಲಿ ಜನರನ್ನು ಪ್ರಚೋದಿಸಿದ ಆರೋಪದ ಮೇಲೆ ಎಸ್‌ಆರ್ ದಾರಾಪುರಿ ಅವರನ್ನು ಕೂಡ ಬಂಧಿಸಲಾಗಿತ್ತು. ಈ ಘಟನೆಯ ನಂತರ ಪ್ರಿಯಾಂಕಾ ಗಾಂಧಿ ದಾರಾಪುರಿ ಕುಟುಂಬವನ್ನು ಭೇಟಿಯಾಗಲು ಬಂದಿದ್ದರು. ಅಂದಿನಿಂದ ಅವರು ಸಾಕಷ್ಟು ಸುದ್ದಿಯಲ್ಲಿದ್ದಾರೆ. 1972ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಎಸ್‌ಆರ್ ದಾರಾಪುರಿ ಪೊಲೀಸ್ ಸೇವೆಯಿಂದ ನಿವೃತ್ತರಾದ ಬಳಿಕ ಮಾನವ ಹಕ್ಕುಗಳ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಲೋಕಸಭಾ ಚುನಾವಣೆಗೆ ಸ್ಪರ್ಧೆ: ದಾರಾಪುರಿ ಅವರು 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕೂಡ ಸ್ಪರ್ಧಿಸಿದ್ದರು. 40 ವರ್ಷಗಳ ಕಾಲ ಭಾರತೀಯ ಪೊಲೀಸ್ ಸೇವೆಯಲ್ಲಿ ಅವರು ಅನೇಕ ಹುದ್ದೆಗಳನ್ನು ನಿಭಾಯಿಸಿದ್ದಾರೆ. ನಿವೃತ್ತಿ ಬಳಿಕ ಅವರು ಬುಡಕಟ್ಟು, ದಲಿತ ಮತ್ತು ಅಲ್ಪಸಂಖ್ಯಾತ ಜನರಿಗಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂಬೇಡ್ಕರ್ ಮಹಾಸಭಾ ಸೇರಿದಂತೆ ಅನೇಕ ಸಂಘಟನೆಗಳಲ್ಲಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅನೇಕ ಸಂಘಟನೆಗಳಲ್ಲಿ ಅವರು ಕ್ರಿಯಾಶೀಲ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ಕುಟುಂಬಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ: ಅಧಿಕಾರಕ್ಕೆ ಬಂದರೆ ಒಂದು ಗಂಟೆಯೊಳಗೆ ಮದ್ಯ ನಿಷೇಧ ತೆಗೆದುಹಾಕುತ್ತೇನೆ: ಪ್ರಶಾಂತ್ ಕಿಶೋರ್ ಸ್ಫೋಟಕ ಘೋಷಣೆ