ನವದೆಹಲಿ: ದೇಶದ 234 ನಗರಗಳು ಮತ್ತು ಪಟ್ಟಣಗಳಲ್ಲಿ ಹೊಸದಾಗಿ 730 ಎಫ್ಎಂ ರೇಡಿಯೋ ಚಾನೆಲ್ಗಳನ್ನು ಆರಂಭಿಸಲು ಕೇಂದ್ರ ಸರಕಾರ ಬುಧವಾರ ಅನುಮೋದನೆ ನೀಡಿದೆ. 'ಮಹತ್ವಾಕಾಂಕ್ಷೆಯ ಜಿಲ್ಲೆಗಳು', ಎಡಪಂಥೀಯ ಉಗ್ರವಾದ (ಎಲ್ಡಬ್ಲ್ಯುಇ) ಪೀಡಿತ ಪ್ರದೇಶಗಳು ಮತ್ತು ಗಡಿ ಜಿಲ್ಲೆಗಳ ನಗರಗಳು ಮತ್ತು ಪಟ್ಟಣಗಳಲ್ಲಿ ಹೆಚ್ಚಿನ ಎಫ್ಎಂ ರೇಡಿಯೋ ಚಾನೆಲ್ಗಳ ಆರಂಭಕ್ಕೆ ಅನುಮತಿ ನೀಡಲಾಗಿದೆ. ಈ ಚಾನೆಲ್ಗಳು ಈ ಪ್ರದೇಶಗಳಲ್ಲಿ ಸರ್ಕಾರದ ಸಂಪರ್ಕವನ್ನು ಮತ್ತಷ್ಟು ಬಲಪಡಿಸುತ್ತವೆ.
'ಖಾಸಗಿ ಎಫ್ ಎಂ ರೇಡಿಯೋ ಫೇಸ್ ಐ2 ಪಾಲಿಸಿ' ಅಡಿ 730 ಚಾನೆಲ್ ಗಳ ಇ - ಹರಾಜಿನ ಪ್ರಸ್ತಾಪಕ್ಕೆ ಸಂಪುಟ ಹಸಿರು ನಿಶಾನೆ ತೋರಿದೆ. ಈ ಕ್ರಮದಿಂದ ಮಾತೃಭಾಷೆಯಲ್ಲಿ ಸ್ಥಳೀಯ ಕಂಟೆಂಟ್ಗಳನ್ನು ಹೆಚ್ಚಿಸಲು ಮತ್ತು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಾಯಕವಾಗಲಿದೆ.
234 ಹೊಸ ನಗರಗಳು ಮತ್ತು ಪಟ್ಟಣಗಳಿಗೆ ಅನ್ವಯವಾಗುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಹೊರತುಪಡಿಸಿ ಎಫ್ಎಂ ಚಾನೆಲ್ನ ವಾರ್ಷಿಕ ಪರವಾನಗಿ ಶುಲ್ಕವನ್ನು (ಎಎಲ್ಎಫ್) ಒಟ್ಟು ಆದಾಯದ ಶೇಕಡಾ 4 ರಷ್ಟು ವಿಧಿಸುವ ಪ್ರಸ್ತಾಪಕ್ಕೂ ಸಂಪುಟ ಅನುಮೋದನೆ ನೀಡಿದೆ.
"ಹೊಸ ಎಫ್ಎಂ ರೇಡಿಯೊ ಅನುಮತಿಗಳು ಇನ್ನೂ ಖಾಸಗಿ ಎಫ್ಎಂ ರೇಡಿಯೊ ಸ್ಟೇಷನ್ ಇರದ ಹೊಸ ನಗರಗಳು ಮತ್ತು ಪಟ್ಟಣಗಳ ಬಹುದಿನಗಳ ಬೇಡಿಕೆಯನ್ನು ಪೂರೈಸಲಿವೆ ಮತ್ತು ಈ ಸ್ಟೇಷನ್ಗಳು ಸ್ಥಳೀಯ ಮಾಹಿತಿಯನ್ನು ಆಯಾ ಜನರ ಮಾತೃಭಾಷೆಯಲ್ಲಿ ಬಿತ್ತರಿಸಲಿವೆ" ಎಂದು ಸರ್ಕಾರ ಹೇಳಿದೆ. ಈ ಕ್ರಮವು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ, ಸ್ಥಳೀಯ ಉಪಭಾಷೆ ಮತ್ತು ಸಂಸ್ಕೃತಿಗೆ ಉತ್ತೇಜನ ನೀಡಲಿದೆ ಮತ್ತು ಸ್ಥಳೀಯರ ಸಮಸ್ಯೆಗಳ ಪರಿಹಾರಕ್ಕೆ ಅನುಕೂಲವಾಗಲಿದೆ.
ದೇಶದಲ್ಲಿ ಸುಮಾರು 400 ಖಾಸಗಿ ಎಫ್ಎಂ ರೇಡಿಯೋ ಚಾನೆಲ್ಗಳು ಕಾರ್ಯನಿರ್ವಹಿಸುತ್ತಿವೆ. ಕಳೆದ ವರ್ಷ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ (ಐ &ಬಿ) ಖಾಸಗಿ ಎಫ್ಎಂ ರೇಡಿಯೋ ಚಾನೆಲ್ಗಳಿಗೆ ಸುದ್ದಿಗಳನ್ನು ಪ್ರಸಾರ ಮಾಡಲು ಅವಕಾಶ ನೀಡುವ ಪ್ರಸ್ತಾಪದ ಬಗ್ಗೆ ಪರಿಶೀಲನೆ ಮಾಡಲು ಪ್ರಾರಂಭಿಸಿತು ಎಂದು ವರದಿಯಾಗಿದೆ.
ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಇತ್ತೀಚಿನ ದಿನಗಳಲ್ಲಿ ಎಫ್ಎಂ ರೇಡಿಯೋ ಪ್ರಸಾರಕ್ಕೆ ಸಂಬಂಧಿಸಿದ ಹಲವಾರು ಶಿಫಾರಸುಗಳನ್ನು ಮಾಡಿದೆ. ಕಳೆದ ತಿಂಗಳು ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ಮಿಜೋರಾಂನ ಐಜ್ವಾಲ್ನಲ್ಲಿರುವ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್ (ಐಐಎಂಸಿ) ನಲ್ಲಿ ಭಾರತದ 500 ನೇ ಸಮುದಾಯ ರೇಡಿಯೋ ಕೇಂದ್ರವನ್ನು ಉದ್ಘಾಟಿಸಿದ್ದರು.
ಇದನ್ನೂ ಓದಿ : ವಿಶ್ವದ ಮೊದಲ 6ನೇ ಜೆನ್ DRAM ಚಿಪ್ ತಯಾರಿಸಿದ ಎಸ್ಕೆ ಹೈನಿಕ್ಸ್ - 6th gen DRAM chip