ಸಾಂಗ್ಲಿ(ಮಹಾರಾಷ್ಟ್ರ): ಹರಿವ ನೀರಿನಲ್ಲಿ ಕಸ, ಕಡ್ಡಿ, ಜಲಚರಗಳು ತೇಲಿ ಬರುವುದನ್ನು ನೋಡಿರುತ್ತೀರಿ. ಆದರೆ, ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಹಣದ 'ಹೊಳೆ'ಯೇ ಹರಿದಿದೆ. ಇಲ್ಲಿನ ಹೊಳೆಯೊಂದರಲ್ಲಿ 500 ರೂಪಾಯಿ ಮುಖಬೆಲೆಯ ನೋಟುಗಳು ಹರಿದುಬಂದಿವೆ. ಜನರು ಮುಗಿಬಿದ್ದು, ಹಣವನ್ನು ಸಂಗ್ರಹಿಸಿದರು.
ಸಾಂಗ್ಲಿ ಜಿಲ್ಲೆಯ ಅಟ್ಪಾಡಿ ಬಳಿ ಹರಿಯುವ ಅಂಬಾಬಾಯಿ ಹೊಳೆಯ ನೀರಿನಲ್ಲಿ ನೋಟುಗಳು ಹರಿದು ಬಂದಿವೆ. ನಗರದಲ್ಲಿ ಪ್ರತಿ ಶನಿವಾರ ಸಂತೆ ನಡೆಯುತ್ತದೆ. ಸಂತೆಗೆ ಬರುತ್ತಿದ್ದ ಜನರು ನೀರಿನಲ್ಲಿ ನೋಟುಗಳನ್ನು ಕಂಡಿದ್ದಾರೆ. ನೀರಿಗಿಳಿದು ಪರೀಕ್ಷಿಸಿದಾಗ ಅವು ನಿಜವಾದ ನೋಟುಗಳು ಎಂದು ಖಚಿತವಾಯಿತು. ಈ ಸುದ್ದಿ ಗಾಳಿಯಂತೆ ಹಬ್ಬಿ ಜನರು ಹೊಳೆಯಲ್ಲಿ ಹಣ ಸಂಗ್ರಹಿಸಲು ಧಾವಿಸಿದ್ದಾರೆ.
ಶನಿವಾರದ ಸಂತೆಗೆ ಬಂದಿದ್ದ ಜನರು ಅಂಬಾಬಾಯಿ ಹೊಳೆಯಿಂದ ಐನೂರರ ಹಲವು ನೋಟುಗಳನ್ನು ಸಂಗ್ರಹಿಸಿದ್ದಾರೆ. ಕೆಲವರಿಗೆ ಹತ್ತು, ಹದಿನೈದು, ಇಪ್ಪತ್ತು, ಇಪ್ಪತ್ತೈದು ಹಾಗೂ 50 ನೋಟುಗಳು ಸಿಕ್ಕಿವೆ. ಸುಮಾರು 100ರಿಂದ 200 ಮೀಟರ್ ಉದ್ದಕ್ಕೂ ಈ ನೋಟುಗಳು ಹರಡಿಕೊಂಡಿದ್ದವು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
![ಹೊಳೆಯಲ್ಲಿ ಸಿಕ್ಕ ಐನೂರರ ನೋಟನ್ನು ತೋರಿಸಿದ ಜನರು](https://etvbharatimages.akamaized.net/etvbharat/prod-images/21-10-2024/22727254_don.jpg)
ಈ ನೋಟುಗಳು ಎಲ್ಲಿಂದ ಬಂದವು?: 'ಹಣದ ಹೊಳೆ' ಹರಿಯುತ್ತಿರುವ ಬಗ್ಗೆ ಅಟ್ಪಾಡಿ ಪೊಲೀಸರು ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಹೊಳೆಯಲ್ಲಿ ಸಿಕ್ಕ ನೋಟುಗಳನ್ನು ಜನರಿಂದ ಪಡೆದುಕೊಂಡಿದ್ದಾರೆ. ಇವುಗಳು ನಿಜವಾದ ಹಣದ ನೋಟುಗಳಾದ್ದರಿಂದ, ಇಷ್ಟು ಪ್ರಮಾಣದಲ್ಲಿ ಹೇಗೆ ಬಂದವು, ಎಲ್ಲಿಂದ ಇವುಗಳು ಹರಿದು ಬಂದವು ಎಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ಜನರು ನೀಡಿದ ಮಾಹಿತಿಯ ಪ್ರಕಾರ, ಹೊಳೆಯಲ್ಲಿ ಸುಮಾರು ಎರಡರಿಂದ ಎರಡೂವರೆ ಲಕ್ಷ ರೂಪಾಯಿ ಸಂಗ್ರಹವಾಗಿದೆ. ಹಲವರು ಸಿಕ್ಕ ಹಣವನ್ನು ಎತ್ತಿಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.
![ನೀರಿನಲ್ಲಿ ಸಂಗ್ರಹಿಸಿದ ಹಣದ ನೋಟುಗಳು](https://etvbharatimages.akamaized.net/etvbharat/prod-images/21-10-2024/22727254_don1.jpg)
ಇದು ಚುನಾವಣೆಯ ಹಣವೇ?: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ರಾಜಕೀಯ ನೇತಾರರು ಕಾರ್ಯಕ್ರಮ ಅಥವಾ ಜನರಿಗೆ ಹಂಚಲು ಈ ಹಣವನ್ನು ಸಂಗ್ರಹಿಸಿದ್ದರೇ ಎಂಬ ಅನುಮಾನವೂ ವ್ಯಕ್ತವಾಗಿದೆ. ಆದರೆ, ಹೊಳೆಗೆ ಹಣವನ್ನು ಹಾಕಿ ಹೋಗಿದ್ಯಾಕೆ ಎಂಬ ಬಗ್ಗೆ ಪೊಲೀಸ್ ತನಿಖೆಯಲ್ಲಿ ತಿಳಿದು ಬರಬೇಕಿದೆ.
ಇದನ್ನೂ ಓದಿ: ಭಾರತ ವಿಶ್ವಕ್ಕೆ ಭರವಸೆಯ ಕಿರಣ: ಪ್ರಧಾನಿ ಮೋದಿ