ಪುಣೆ: ಬಯೋಗ್ಯಾಸ್ (ಸಗಣಿ) ತುಂಬಿದ್ದ ಬಾವಿಗೆ ಬಿದ್ದ ಬೆಕ್ಕು ರಕ್ಷಣೆ ಮಾಡಲು ಹೋಗಿ 5 ಜನರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಅಹಮದ್‌ನಗರದ ವಾಡ್ಕಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಘಟನೆಯ ವಿವರ: ವಕ್ಡಿ ಗ್ರಾಮದಲ್ಲಿ ಸಗಣಿ ತುಂಬಿದ ಬಾವಿಗೆ ಕಳೆದ ರಾತ್ರಿ ಬೆಕ್ಕೊಂದು ಬಿದ್ದಿತ್ತು. ಇದನ್ನು ಕಂಡ 6 ಜನರ ಗುಂಪು ಬೆಕ್ಕಿನ ರಕ್ಷಣೆಗೆ ಮುಂದಾಗಿದೆ. ರಕ್ಷಣಾ ಕಾರ್ಯಾಚರಣೆ ವೇಳೆ ಐದೂ ಜನರು ಆಯತಪ್ಪಿ ಬಾವಿಗೆ ಬಿದ್ದು ಉಸಿರುಗಟ್ಟಿ ಸಾವನ್ನಪಿದ್ದಾರೆ. ಮಾಣಿಕರಾವ್ ಗೋವಿಂದ ಕಾಳೆ (65), ಸಂದೀಪ್ ಮಾಣಿಕ್ ಕಾಳೆ (36), ಅನಿಲ್ ಬಾಪುರಾವ್ ಕಾಳೆ (58), ವಿಶಾಲ್ ಅನಿಲ್ ಕಾಳೆ (23 ), ಬಾಬಾಸಾಹೇಬ್ ಪವಾರ್ (35) ಮೃತರು ಎಂದು ಗುರುತಿಸಲಾಗಿದೆ. ಸದ್ಯ ಎಲ್ಲ ಐವರ ಮೃತ ದೇಹಗಳನ್ನು ಪೊಲೀಸರು ಹೊರ ತೆಗೆದಿದ್ದಾರೆ.
ಘಟನೆ ಕುರಿತು ಮಾಹಿತಿ ನೀಡಿರುವ ಅಹ್ಮದ್‌ನಗರದ ನೆವಾಸಾ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಧನಂಜಯ್ ಜಾಧವ್, " ಬಯೋಗ್ಯಾಸ್ ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲು ಜನರು ಮುಂದಾಗಿದ್ದಾರೆ. ಅದರಂತೆ 6 ಜನರು ಹಗ್ಗವೊಂದನ್ನು ಹಿಡಿದು ವ್ಯಕ್ತಿಯೊಬ್ಬನನ್ನು ಬಾವಿಗೆ ಇಳಿಸಿದ್ದಾರೆ. ಈ ವೇಳೆ, ಸರಿಯಾಗಿ ಹಿಡಿತ ಸಿಗದೇ ಆಯಾತಪ್ಪಿ ಮೇಲಿದ್ದ ಐದೂ ಜನರೂ ಬಾವಿಗೆ ಬಿದ್ದಿದ್ದಾರೆ. 5 ಜನರು ಉಸಿರುಗಟ್ಟಿ ಸಾವನ್ನಪ್ಪಿದರೆ, ಒಬ್ಬನನ್ನು ರಕ್ಷಣೆ ಮಾಡಲಾಗಿದೆ. ಆದರೆ ಆತನೂ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ. ಸದ್ಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ. ಉಳಿದಂತೆ 5 ಶವಗಳನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಧನಂಜಯ್ ಜಾಧವ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ: ಚಲಿಸುತ್ತಿದ್ದ ಕಾರಿನಲ್ಲಿ ಕಾಣಿಕೊಂಡ ಬೆಂಕಿ; ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಬಚಾವ್ ಆದ ಭಕ್ತರು - Fire Incident