ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಸಂಪುಟ ಸಚಿವರು ಅಧಿಕಾರ ಸ್ವೀಕಾರ ಮಾಡಿದ್ದು, ಇಂದಿನಿಂದ ಇಲಾಖಾ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ಮೂರನೇ ಅವಧಿಯ ಸಚಿವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ. ಕೊಲೆ ಯತ್ನ, ಮಹಿಳೆಯರ ಮೇಲೆ ದೌರ್ಜನ್ಯ, ದ್ವೇಷ ಭಾಷಣದಂತಹ ಗಂಭೀರ ಪ್ರಕರಣಗಳೂ ದಾಖಲಾಗಿವೆ.
ಸರ್ಕಾರೇತರ ಚುನಾವಣಾ ಹಕ್ಕುಗಳ ಸಂಸ್ಥೆಯಾದ ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಈ ಬಗ್ಗೆ ಅಧ್ಯಯನ ನಡೆಸಿದ್ದು, ಕ್ರಿಮಿನಲ್ ಆರೋಪ ಎದುರಿಸುತ್ತಿರುವ 28 ಕೇಂದ್ರ ಸಚಿವರ ಪಟ್ಟಿ ಮಾಡಿದೆ. ಇವರಲ್ಲಿ 19 ಮಂದಿ ವಿರುದ್ಧ ಕೊಲೆ ಯತ್ನ, ಮಹಿಳೆಯರ ಮೇಲೆ ದೌರ್ಜನ್ಯ ಮತ್ತು ದ್ವೇಷ ಭಾಷಣ ಮಾಡಿದ ಕೇಸ್ ದಾಖಲಾಗಿದೆ ಎಂದು ತಿಳಿಸಿದೆ.
ಕೊಲೆ ಯತ್ನ ಆರೋಪಿತ ಸಚಿವರು: ಇದರಲ್ಲಿ ಬಂದರು, ಹಡಗು ಮತ್ತು ಜಲಮಾರ್ಗಗಳ ರಾಜ್ಯ ಸಚಿವ ಶಾಂತನು ಠಾಕೂರ್ ಮತ್ತು ಈಶಾನ್ಯ ರಾಜ್ಯಗಳ ಶಿಕ್ಷಣ ಮತ್ತು ಅಭಿವೃದ್ಧಿ ಇಲಾಖೆ ರಾಜ್ಯ ಸಚಿವ ಸುಕಾಂತ ಮಜುಂದಾರ್ ಅವರ ಮೇಲೆ ಭಾರತೀಯ ದಂಡ ಸಂಹಿತೆ ಸೆಕ್ಷನ್ 307 ರ ಅಡಿಯಲ್ಲಿ ಕೊಲೆ ಯತ್ನ ಪ್ರಕರಣಗಳಿವೆ.
ಮಹಿಳೆಯರ ಮೇಲೆ ದೌರ್ಜನ್ಯ ಆರೋಪ: ಚುನಾವಣೆ ವೇಳೆ ಸಚಿವರು ಸಲ್ಲಿಸಿದ್ದ ನಾಮಪತ್ರದಲ್ಲಿ ಅವರು ಘೋಷಿಸಿದ ಮಾಹಿತಿಯಂತೆ ಐವರು ಸಚಿವರ ವಿರುದ್ಧ ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳಿವೆ. ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ಖಾತೆಯ ರಾಜ್ಯ ಸಚಿವ ಸುರೇಶ್ ಗೋಪಿ, ಬುಡಕಟ್ಟು ವ್ಯವಹಾರಗಳ ಸಚಿವ ಜುಯಲ್ ಒರಂ, ಶಾಂತನು ಠಾಕೂರ್, ಸುಕಾಂತ ಮಜುಂದಾರ್ ಅವರು ಆರೋಪ ಎದುರಿಸುತ್ತಿದ್ದಾರೆ.
ದ್ವೇಷ ಭಾಷಣ ಆರೋಪ: ಇದಲ್ಲದೇ, ದ್ವೇಷ ಭಾಷಣಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ 8 ಮಂತ್ರಿಗಳು ಆರೋಪ ಎದುರಿಸುತ್ತಿದ್ದಾರೆ. ಒಟ್ಟು 71 ಸಚಿವರಲ್ಲಿ 28, ಅಂದರೆ ಶೇಕಡಾ 39ರಷ್ಟು ಮಂದಿ ಕ್ರಿಮಿನಲ್ ಪ್ರಕರಣಗಳಿವೆ ಎಂದು ಘೋಷಿಸಿಕೊಂಡಿದ್ದಾರೆ.
ಜೂನ್ 9ರಂದು ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 72 ಸಂಸದರು ಸಚಿವರಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಮಾಣ ವಚನ ಸ್ವೀಕರಿಸಿದ್ದರು.
ಇದನ್ನೂ ಓದಿ: ಅಮಿತ್ ಶಾ, ಜೈಶಂಕರ್, ಜೋಶಿ, ಸೋಮಣ್ಣ ಸೇರಿ ಕೇಂದ್ರದ ಹಲವು ಸಚಿವರ ಕಾರ್ಯಾರಂಭ - Central Ministers Assume Charge